ಮಂಗಳೂರು: ಚುನಾವಣೆ ಸಮೀಪಿಸುತ್ತಿರುವಂತೆ ಕಾಂಗ್ರೆಸ್ ಅಭ್ಯರ್ಥಿಗಳು ಪಕ್ಷದ ಹಿರಿಯ ನಾಯಕ ಬಿ. ಜನಾರ್ದನ ಪೂಜಾರಿ ಅವರ ಮನೆಗೆ ತೆರಳಿ ಆಶೀರ್ವಾದ ಪಡೆಯಲಾರಂಭಿಸಿದ್ದಾರೆ. ಇದು ಕರಾವಳಿಯ ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣ ಒದಗಿಸಿದೆ.
ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿದ್ದ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಅವರು ಇತ್ತೀಚಿನ ದಿನದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರ ನಿಲುವುಗಳ ವಿರುದ್ಧ ಬಹಿರಂಗವಾಗಿ ಅಸಮಾಧಾನ ತೋಡಿಕೊಳ್ಳುವ ಮೂಲಕ ಸುದ್ದಿಯಾಗಿದ್ದರು.
ಪೂಜಾರಿಯವರ ಈ ಘಟನೆಗಳಿಂದಾಗಿ ಪಕ್ಷದ ಕೆಲವರಿಗೆ, ಬಿಲ್ಲವ ಸಮಾಜ ಹಾಗೂ ಪೂಜಾರಿ ಬೆಂಬಲಿಗರಲ್ಲಿಯೂ ಅಸಮಾಧಾನಕ್ಕೆ ಕಾರಣವಾಗಿತ್ತು. ಹೀಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನಾರ್ದನ ಪೂಜಾರಿ ಅವರ ನಡೆ ಹೇಗಿರಬಹುದು ಎಂಬ ಸಹಜ ಕುತೂಹಲ ರಾಜಕೀಯ ವಲಯದಲ್ಲಿ ಸೃಷ್ಟಿಯಾಗಿತ್ತು.
ಇಂತಹ ಸಂದರ್ಭದಲ್ಲಿಯೇ ರಮಾನಾಥ ರೈ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಜನಾರ್ದನ ಪೂಜಾರಿಯವರ ಮನೆಗೆ ಭೇಟಿ ನೀಡಿ ಆಶೀರ್ವಾದ ಪಡೆಯುವ ಮೂಲಕ ತಮ್ಮ ಮಧ್ಯೆ ಯಾವುದೇ ಕೋಪ-ತಾಪಗಳಿಲ್ಲ ಎನ್ನುತ್ತ ಬಿಲ್ಲವ ಮತಗಳತ್ತ ದೃಷ್ಟಿ ಇಟ್ಟಿದ್ದಾರೆ. ರೈ ಅವರು ಪೂಜಾರಿಯವರ ಮನೆಗೆ ಭೇಟಿ ನೀಡಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಸುದ್ದಿ ಸಾಮಾಜಿಕ ಜಾಲತಾಣಗಳ ಮೂಲಕ ಹರಿದಾಡುತ್ತಲೇ ಈ ಕುರಿತಂತೆ ಪರ-ವಿರೋಧ ಚರ್ಚೆ ಕೂಡ ಶುರುವಾಯಿತು. ಅಧಿಕಾರದಲ್ಲಿದ್ದಾಗ ಪೂಜಾರಿ ಅವರನ್ನು ಪರಿಗಣಿಸದೆ, ಈಗ ಅಧಿಕಾರಕ್ಕೆ ಬರುವ ಕಾರಣಕ್ಕಾಗಿ ಮನೆಗೆ ಭೇಟಿ ನೀಡುತ್ತಿದ್ದಾರೆ ಎಂಬ ಬಗ್ಗೆಯೂ ಚರ್ಚೆಗೆ ವೇದಿಕೆ ಒದಗಿಸಿತು.
ಇದರ ಮಧ್ಯೆ ಮಾಜಿ ಸಚಿವ ಹಾಗೂ ಕಾಪು ಶಾಸಕ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ವಿನಯ್ ಕುಮಾರ್ ಸೊರಕೆ, ಮಂಗಳೂರು ದಕ್ಷಿಣ ವಿ.ಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೊ, ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೊದಿನ್ ಬಾವಾ ಸೇರಿದಂತೆ ಹಲವು ಜನಪ್ರತಿನಿಧಿಗಳು ಪೂಜಾರಿಯವರ ಮನೆಗೆ ದೌಡಾಯಿಸಿದ್ದಾರೆ. ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದು ಇತ್ತೀಚೆಗೆ ತೊರೆದು, ಜೆಡಿಎಸ್ ಸೇರ್ಪಡೆಗೊಂಡಿರುವ ಕೆ.ಅಶ್ರಫ್ ಅವರು ಕೂಡ ಪೂಜಾರಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.
ರಾಹುಲ್ ಭೇಟಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯಕ್ಕೆ ಮಾ. 20ರಂದು ಆಗಮಿಸಿ, ಜನಾರ್ದನ ಪೂಜಾರಿ ಅವರನ್ನು ಭೇಟಿ ನೀಡುವ ಮೂಲಕ ಬಿಲ್ಲವ ಸಮುದಾಯದ ಮತದಾರರ ಮನಸ್ಸು ಗೆಲ್ಲುವ ಪ್ರಯತ್ನಕ್ಕೆ ಚಾಲನೆ ನೀಡಿದ್ದರು. ಜತೆಗೆ, ಹಿರಿಯ ನಾಯಕರಾದ ಜನಾರ್ದನ ಪೂಜಾರಿ ಅವರ ಮಾರ್ಗದರ್ಶನ ಪಕ್ಷಕ್ಕೆ ಅಗತ್ಯವಾಗಿದೆ ಎಂಬ ಸಂದೇಶವನ್ನು ಇತರರಿಗೆ ಸಾರಿದ್ದರು. ಇದರ ಪರಿಣಾಮವೇ ಎಂಬಂತೆ, ಇದೀಗ ಕಾಂಗ್ರೆಸ್‌ನ ಟಿಕೆಟ್ ಪಡೆದ ಕಾಂಗ್ರೆಸ್ ನಾಯಕರು ಜನಾರ್ದನ ಪೂಜಾರಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುತ್ತಿದ್ದಾರೆ.