Advertisement

Congratulate: ಸಂಸತ್‌ ಭವನದಲ್ಲಿ ಪ್ರಧಾನಿ ಮೋದಿ – ಡಾ. ವೀರೇಂದ್ರ ಹೆಗ್ಗಡೆ ಭೇಟಿ

01:38 AM Aug 11, 2024 | Team Udayavani |

ಬೆಳ್ತಂಗಡಿ: ಧರ್ಮಸ್ಥಳ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆ.9ರಂದು ಸಂಸತ್‌ ಭವನದಲ್ಲಿ ಭೇಟಿಯಾಗಿ ಮೂರನೇ ಬಾರಿ ಪ್ರಧಾನಿಯಾಗಿರುವುದಕ್ಕೆ ಅಭಿನಂದಿಸಿದರು. ಬಳಿಕ ಶ್ರೀ ಮಂಜುನಾಥ ಸ್ವಾಮಿಯ ಪ್ರಸಾದವನ್ನು ನೀಡಿ ದೇಶಕ್ಕೆ ಇನ್ನೂ ಉತ್ತಮ ಸೇವೆ ಸಲ್ಲಿಸುವಂತಾಗಲಿ ಎಂದು ಆಶೀರ್ವದಿಸಿದರು.

Advertisement

ಅನೇಕ ವಿಷಯಗಳ ಬಗ್ಗೆ ಚರ್ಚಿಸಿದ ಡಾ. ಹೆಗ್ಗಡೆ ಯವರು, ರಾಜ್ಯಸಭಾ ಸಂಸದರ ವ್ಯಾಪ್ತಿಗೆ ಬರುವ ನಿಧಿಯನ್ನು ಬೀದರ್‌ನಲ್ಲಿ ವಿನಿಯೋಗಿಸಿರುವ ಬಗೆಯನ್ನು ಪ್ರಧಾನಿಗೆ ವಿವರಿಸಿದರು. ರಾಜ್ಯಾದ್ಯಂತ ಗ್ರಾಮಾಭಿವೃದ್ಧಿ ಯೋಜನೆಯಿಂದ ನಿರ್ವಹಿಸಲ್ಪಡುವ 10 ಸಾವಿರ ಸಿ.ಎಸ್‌.ಸಿ. ಕೇಂದ್ರಗಳ ಮೂಲಕ ಕೇಂದ್ರ ಸರಕಾರದ ಹಾಗೂ ಸಿ.ಎಸ್‌.ಸಿ.ಯ ಪ್ರಮುಖ ಸೇವೆಗಳನ್ನು ಗ್ರಾಮೀಣ ಜನರ ಮನೆ ಬಾಗಿಲಿಗೆ ತಲುಪಿಸುತ್ತಿರುವ ಬಗ್ಗೆ ಪ್ರಧಾನಿಗೆ ವಿವರಿಸಲಾಯಿತು.

ಬೀದರ್‌ನಲ್ಲಿ ಕ್ಷೀರಕ್ರಾಂತಿ:
ಡಾ| ಹೆಗ್ಗಡೆಯವರು ಬೀದರ್‌ನಲ್ಲಿ ಕ್ಷೀರಕ್ರಾಂತಿಗೆ ಯೋಜಿಸಿದ್ದು, ಕೆ.ಎಂ.ಎಫ್‌. ಸಹಯೋಗದೊಂದಿಗೆ ಅನೇಕ ಹಾಲು ಒಕ್ಕೂಟಗಳನ್ನು ಅಭಿವೃದ್ಧಿಪಡಿಸಿ ಹೈನುಗಾರಿಕೆಯನ್ನು ಪ್ರೋತ್ಸಾಹಿಸಿದ್ದಾರೆ. ಹಾಲು ಸಂಗ್ರಹಕ್ಕೆ ಕಟ್ಟಡಗಳನ್ನು ನಿರ್ಮಿ ಸಿದ್ದಲ್ಲದೆ, ಅತ್ಯಾಧುನಿಕ ಯಂತ್ರಗಳನ್ನು ಒದಗಿಸಿದ್ದಾರೆ. ರೈತರಿಗೆ ಹೈನುಗಾರಿಕೆ ಬಗ್ಗೆ ತರಬೇತಿ ನೀಡಿದ್ದಾರೆ ಎಂದರು.

ಈ ಯೋಜನೆಗಿಂತ ಮೊದಲು ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಪ್ರತಿನಿತ್ಯ 18 ಸಾವಿರ ಲೀಟರ್‌ ಮಾತ್ರ ಇತ್ತು. ಪ್ರಸ್ತುತ 60 ಸಾವಿರ ಲೀಟರ್‌ಗೆ ಏರಿದೆ. ಇದನ್ನು 1 ಲಕ್ಷ ಲೀಟರ್‌ಗೆ ಏರಿಸುವ ಗುರಿ ಇದೆ ಎಂದು ಹೆಗ್ಗಡೆಯವರು ವಿವರಿಸಿದ್ದಕ್ಕೆ, ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.

ಆಯುಷ್ಮಾನ್‌ ಸೇವೆಗೂ ಮೆಚ್ಚುಗೆ:
ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯೊಂದಿಗೆ ಕೇಂದ್ರ ಸರಕಾರದ ಸಿ.ಎಸ್‌.ಸಿ. ಸೇವೆಗಳನ್ನು ಜನರಿಗೆ ನೀಡುವ ಪಾಲುದಾರಿಕೆ ಒಪ್ಪಂದ ಇದೆ. ಆಯುಷ್ಮಾನ್‌ ಭಾರತ್‌ ವಿಮೆಯನ್ನು ಉಚಿತವಾಗಿ ಸಿ.ಎಸ್‌.ಸಿ. ಕೇಂದ್ರಗಳ ಮೂಲಕ ವಿತರಿಸಲಾಗಿದೆ ಎಂದು ಪ್ರಧಾನಿ ಅವರಿಗೆ ವಿವರಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next