Advertisement

ಗೆಹ್ಲೋಟ್ ಗಾಗಿ ನಿಯಮ ಬದಲು; ಗಾಂಧಿ ಕುಟುಂಬದ ನಂಬಿಕಸ್ಥರಿಗೇ ಪಟ್ಟ?

01:14 AM Sep 22, 2022 | Team Udayavani |

ಹೊಸದಿಲ್ಲಿ/ಕೊಚ್ಚಿ: ಇಪ್ಪತ್ತು ವರ್ಷಗಳ ಬಳಿಕ ಎಐಸಿಸಿ ಚುನಾವಣೆಗೆ ವೇದಿಕೆ ಸೃಷ್ಟಿಯಾಗಿದ್ದು, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್ ಅವರೇ ಅಧ್ಯಕ್ಷ ಹುದ್ದೆಗೆ ಏರುವ ಸಾಧ್ಯತೆ ಇದೆ.

Advertisement

ವಿಶೇಷವೆಂದರೆ, ಅಧ್ಯಕ್ಷರಾದರೂ ಮುಖ್ಯಮಂತ್ರಿ ಸ್ಥಾನ ಬಿಡಲು ಒಲ್ಲದ ಗೆಹ್ಲೋಟ್ ಗಾಗಿ ಉದಯಪುರ ಅಧಿವೇಶನದ ನಿರ್ಣಯವನ್ನೇ ಬದಲುಮಾಡಲು ಕಾಂಗ್ರೆಸ್‌ ಮುಂದಾಗಿದೆ ಎಂಬ ಮಾತು ಕೇಳಿಬಂದಿದೆ.

ಬುಧವಾರ ಸಂಜೆ ಅಶೋಕ್‌ ಗೆಹ್ಲೋಟ್ ಅವರು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ, ಸ್ಪರ್ಧೆ ಬಗ್ಗೆ ಚರ್ಚಿಸಿದ್ದಾರೆ. ಸತತ ಎರಡು ಗಂಟೆಗಳ ಕಾಲ ಈ ಮಾತುಕತೆ ನಡೆದಿದೆ. ಈ ವೇಳೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಗೆಹ್ಲೋಟ್ಒಪ್ಪಿದ್ದಾರೆ ಎನ್ನಲಾಗಿದೆ.

ಜತೆಗೆ, ಏಕವ್ಯಕ್ತಿ, ಏಕಹುದ್ದೆ ನಿರ್ಣಯ ತಮಗೆ ಅನ್ವಯವಾಗಬಾರದು ಎಂಬ ಷರತ್ತು ವಿಧಿಸಿದ್ದಾರೆ ಎಂದು ಹೇಳಲಾಗಿದೆ.

ಇದಕ್ಕೆ ಪೂರಕವೆಂಬಂತೆ ಸೋನಿಯಾ, ಗೆಹ್ಲೋಟ್ ಭೇಟಿಯ ವೇಳೆ ಉಪಸ್ಥಿತರಿದ್ದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಅವರು ಮಾತನಾಡಿ, ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಗೆದ್ದವರಿಗೆ ಏಕವ್ಯಕ್ತಿ, ಏಕಹುದ್ದೆ ನಿಯಮ ಅನ್ವಯವಾಗದು ಎಂಬಂತೆ ಮಾತನಾಡಿದ್ದಾರೆ.

Advertisement

ಮಾಹಿತಿ ಪಡೆದ ತರೂರ್‌
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಲು ತುದಿಗಾಲಲ್ಲಿ ನಿಂತಿರುವ ಕೇರಳ ಸಂಸದ ಶಶಿ ತರೂರ್‌ ಅವರು, ಚುನಾವಣ ಉಸ್ತುವಾರಿ ಹೊತ್ತಿರುವ ಮಧುಸೂದನ್‌ ಮಿಸ್ತ್ರಿ ಅವರನ್ನು ಭೇಟಿ ಮಾಡಿ ಚುನಾವಣ ಪ್ರಕ್ರಿಯೆ ಕುರಿತು ಮಾಹಿತಿ ಪಡೆದರು.

ಗೆಹ್ಲೋಟ್ ಸೆ. 24ರಂದು ತಮ್ಮ ಆಪ್ತರೊಬ್ಬರನ್ನು ಕಳುಹಿಸಿ, ನಾಮಪತ್ರಗಳನ್ನು ಪಡೆಯುವರು. ಈ ಮಧ್ಯೆ, ಕಡೆಯ ಒಂದು ಬಾರಿ ರಾಹುಲ್‌ ಮನವೊಲಿಕೆ ಮಾಡುವುದಾಗಿ ಹೇಳಿರುವ ಗೆಹ್ಲೋಟ್, ಗುರುವಾರ ಕೇರಳಕ್ಕೆ ತೆರಳುವರು. ಒಂದು ವೇಳೆ ರಾಹುಲ್‌ ಮನಸ್ಸು ಬದಲಿಸದಿದ್ದರೆ, ತಾವೇ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಸೋಮವಾರ ಗೆಹ್ಲೋಟ್ ನಾಮಪತ್ರ ಸಲ್ಲಿಸಲಿದ್ದಾರೆ.ಹೀಗಾಗಿ ತರೂರ್‌ ಮತ್ತು ಗೆಹ್ಲೋಟ್ ಮಧ್ಯೆ ಸ್ಪರ್ಧೆ ಏರ್ಪಡುವುದು ಖಚಿತವಾಗಿದೆ.

ಯಾರನ್ನೂ ಬೆಂಬಲಿಸಲ್ಲ
ಹಾಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಚುನಾವಣೆಗೆ ಸ್ಪರ್ಧಿಸುವ ಯಾರನ್ನೂ ನೇರವಾಗಿ ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ ಎಂಬುದಾಗಿ ಮೂಲಗಳು ಹೇಳಿವೆ.

ಈ ಹಿಂದೆ ಶಶಿ ತರೂರ್‌ ಭೇಟಿ, ಬುಧವಾರದ ಗೆಹ್ಲೋಟ್ ಭೇಟಿ ವೇಳೆ ಸೋನಿಯಾ ಅವರು ಸ್ಪಷ್ಟವಾಗಿ ಈ ಬಗ್ಗೆ ಹೇಳಿದ್ದಾರೆ ಎಂದು ಹೇಳಲಾಗಿದೆ. ಒಂದು ವೇಳೆ ಯಾರಿಗಾದರೂ ಬೆಂಬಲಿಸಿದರೆ, ಅವರಿಗೆ ಗಾಂಧಿ ಕುಟುಂಬದ ಬೆಂಬಲ ವಿದೆ ಎಂಬ ಸಂದೇಶ ಹೋಗಲಿದೆ ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗಿದೆ.

ರಾಜೀನಾಮೆ ಕೊಡಲೇಬೇಕು
ಒಂದು ವೇಳೆ ಅಶೋಕ್‌ ಗೆಹ್ಲೋಟ್ ಎಐಸಿಸಿ ಅಧ್ಯಕ್ಷರಾದರೆ, ರಾಜಸ್ಥಾನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕು ಎಂದು ಮಧ್ಯಪ್ರದೇಶದ ಕಾಂಗ್ರೆಸ್‌ ನಾಯಕ ದಿಗ್ವಿಜಯ ಸಿಂಗ್‌ ಹೇಳಿದ್ದಾರೆ. ಈಗಾಗಲೇ ಉದಯಪುರ ಅಧಿವೇಶನದಲ್ಲಿ ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ಮಧ್ಯೆ, ರಾಹುಲ್‌ ಅವರೇ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಬೇಕು ಎಂಬುದು ನಾಯಕರ, ಕಾರ್ಯಕರ್ತರ ಆಶಯ ಎಂದು ಸಚಿನ್‌ ಪೈಲಟ್‌ ಅವರು ಹೇಳಿದ್ದಾರೆ. ಸದ್ಯ ಅವರು ರಾಹುಲ್‌ ಜತೆಯಲ್ಲಿ ಕೇರಳದಲ್ಲಿ ಭಾರತ್‌ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next