Advertisement

ನಿಧಾನ ಕೌಂಟಿಂಗ್‌: ನೋಟು ಎಣಿಸೋದು ಮುಗಿದಿಲ್ವಾ?

05:55 AM Jul 28, 2017 | Team Udayavani |

ಹೊಸದಿಲ್ಲಿ: ನೋಟು ಅಮಾನ್ಯ ವಿಷಯ ಗುರುವಾರ ಕೂಡ ಲೋಕಸಭೆಯಲ್ಲಿ ಪ್ರತಿ ಧ್ವನಿಸಿದೆ. 2016ರ ನವೆಂಬರ್‌ನಲ್ಲಿ ನೋಟು ಅಮಾನ್ಯ ಮಾಡಿದ ಅನಂತರ, 500 ಹಾಗೂ 1000 ರೂ. ಮುಖಬೆಲೆಯ ಎಷ್ಟು ನೋಟುಗಳು ಬ್ಯಾಂಕ್‌ನಲ್ಲಿ ಜಮೆ ಆಗಿವೆ ಎಂಬ ಲೆಕ್ಕವನ್ನು ಕೇಂದ್ರ ಸರಕಾರ ಮುಚ್ಚಿಡಲು ಕಾರಣವೇನು? ಇನ್ನೂ ನೋಟು ಎಣಿಸುವ ಕಾರ್ಯ ಮುಗಿದಿಲ್ಲವೇ? ಎಂದು ಕಾಂಗ್ರೆಸ್‌ ಹಾಗೂ ಟಿಎಂಸಿ ಸದಸ್ಯರು ಪ್ರಶ್ನಿಸಿದ್ದಾರೆ.

Advertisement

2016ರ ಕಂಪೆನಿಗಳ ಕಾಯ್ದೆ ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್‌ ಸಂಸದ ಕೆ.ವಿ. ಥಾಮಸ್‌, ನೋಟುಗಳು ಅಮಾನ್ಯಗೊಂಡು ಎಂಟು ತಿಂಗಳು ಕಳೆದಿದ್ದರೂ ‘ನಾವಿನ್ನೂ ನೋಟುಗಳನ್ನು ಎಣಿಸುತ್ತಿದ್ದೇವೆ’ ಎಂದು ಆರ್‌ಬಿಐ ಗವರ್ನರ್‌ ಹೇಳುತ್ತಿದ್ದಾರೆ. ಈ ವಿಷಯ ಗೌಪ್ಯವಾಗಿಡಲು ಕಾರಣವೇನು ಎಂದು ಪ್ರಶ್ನಿಸಿದರು. ಇದಕ್ಕೆ ದನಿಗೂಡಿಸಿದ ಟಿಎಂಸಿ ಸಂಸದ ಸೌಗತ ರಾಯ್‌, ‘ಈವರೆಗೆ ಎಷ್ಟು ಹಣ ಸಂಗ್ರಹವಾಗಿದೆ ಎಂದು ಆರ್‌ಬಿಐ ಮಾಹಿತಿ ನೀಡಲೇಬೇಕು’ ಎಂದು ಪಟ್ಟು ಹಿಡಿದರು.

ಆಡ್ವಾಣಿ – ರಾಹುಲ್‌ ಚರ್ಚೆ: ಗುರುವಾರ ಕಲಾಪ ಆರಂಭವಾಗುವ ಮುನ್ನವೇ ಸದನ ಪ್ರವೇಶಿಸಿದ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ, ಬಿಜೆಪಿ ಹಿರಿಯ ನಾಯಕ ಲಾಲಕೃಷ್ಣ ಆಡ್ವಾಣಿ ಅವರ ಬಳಿ ತೆರಳಿ ಐದು ನಿಮಿಷಕ್ಕೂ ಹೆಚ್ಚು ಹೊತ್ತು ಮಾತುಕತೆ ನಡೆಸಿದರು. ಆದರೆ ಆಡ್ವಾಣಿ ಅವರೊಂದಿಗೆ ರಾಹುಲ್‌ ಬಿಹಾರದ ರಾಜಕೀಯ ಬೆಳವಣಿಗೆ ಕುರಿತು ಚರ್ಚಿಸಿರಬಹುದು ಎನ್ನಲಾಗಿದೆ. ಕಲಾಪ ಆರಂಭವಾಗುತ್ತಿದ್ದಂತೆ ‘ಗೋ ರಕ್ಷಕರು’ ಸೇರಿ ಹಲವು ವಿಷಯಗಳನ್ನು ಮುಂದಿಟ್ಟುಕೊಂಡ ವಿಪಕ್ಷಗಳ ಸದಸ್ಯರು ಗದ್ದಲ ಸೃಷ್ಟಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next