ಮೈಸೂರು: ಇದು ಮೇಲ್ನೋಟಕ್ಕೆ ಕಾಣುವಷ್ಟು ಸರಳವಲ್ಲ. ಪಕ್ಷದಲ್ಲಿರುವ ಬಣ ರಾಜಕಾರಣದ ಸದ್ದು ಸ್ಫೋಟವಾದ ಬಗೆ ಇದು.
ಮೈಸೂರು ನಗರದ ನರಸಿಂಹರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಅವರ ಚುನಾವಣ ರಾಜಕಾರಣದ ನಿವೃತ್ತಿಯ ದಿಢೀರ್ ಘೋಷಣೆಯು ಮೈಸೂರು ಜಿಲ್ಲಾ ಕಾಂಗ್ರೆಸ್ ರಾಜಕಾರಣದಲ್ಲಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಧೋರಣೆ ವಿರುದ್ಧ ವ್ಯಕ್ತವಾಗಿರುವ ಅಸಮಾಧಾನವಿದು. ತನ್ವೀರ್ ಸೇಠ್ ತಮ್ಮ ನಿರ್ಧಾರದ ಹಿಂದೆ ಆರೋಗ್ಯದ ಸಮಸ್ಯೆಯನ್ನು ಮುಂದಿಟ್ಟಿದ್ದಾರೆ. 2019ರಲ್ಲಿ ಮೈಸೂರಿನಲ್ಲಿ ತಮ್ಮದೇ ಸಮುದಾಯದವರಿಂದ ನಡೆದ ಮಾರಣಾಂತಿಕ ಹಲ್ಲೆಯಿಂದ ಸಾವನ್ನು ಗೆದ್ದು ಬಂದರು. ಹಲ್ಲೆ ನಡೆದ ಅನಂತರ ರಾಜಕಾರಣದ ಉಸಾಬರಿಯೇ ಬೇಡ ಎಂದು ಅವರ ಕುಟುಂಬದಿಂದಲೂ ಒತ್ತಡ ಇದೆ. ಆದರೆ, ಚುನಾವಣ ರಾಜಕಾರಣದ ನಿವೃತ್ತಿ ನಿಲುವಿಗೆ ಇವಿಷ್ಟೇ ಕಾರಣವಲ್ಲ. ಇದರಾಚೆಗೂ ಕಾಂಗ್ರೆಸ್ಸಿನ ಆಂತರಿಕ ಬಣ ರಾಜಕಾರಣವೂ ಅವರಲ್ಲಿ ಬೇಸರ ಮೂಡಿಸಿದೆ ಎನ್ನಲಾಗಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದ ಅನಂತರ ಮೈಸೂರು ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಕೈ ಮೇಲಾಯಿತು. ಮೂಲ ಕಾಂಗ್ರೆಸ್ಸಿಗರು ಬದಿಗೆ ಸರಿದರು. ಹೀಗೆ ಬದಿಗೆ ಸರಿದವರಲ್ಲಿ ಶಾಸಕ ತನ್ವೀರ್ ಸೇಠ್ ಅವರೂ ಒಬ್ಬರು. ಕಾಂಗ್ರೆಸ್‌ನಲ್ಲಿ ತನ್ವೀರ್ ಸೇಠ್ ಯಾವತ್ತೂ ಸಿದ್ದರಾಮಯ್ಯ ಅವರ ಅನುಯಾಯಿ ಎನಿಸಿಕೊಳ್ಳಲಿಲ್ಲ. ಸಚಿವರಾಗಿದ್ದರೂ ಯಾವತ್ತೂ ಸಿದ್ದರಾಮಯ್ಯ ಅವರ ಆಪ್ತ ಬಣದಲ್ಲಿ ಇರಲಿಲ್ಲ. ಜತೆಗೆ ಈಚೆಗೆ ಸಿದ್ದರಾಮಯ್ಯ ಆಪ್ತ ಜಮೀರ್ ಅಹಮದ್ ಖಾನ್ ನರಸಿಂಹರಾಜ ಕ್ಷೇತ್ರಕ್ಕೆ ಆಗಾಗ್ಗೆ ಭೇಟಿ ನೀಡಿ ತನ್ವೀರ್ ಸೇಠ್ ಅವರ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದರು. ಹೈಕಮಾಂಡ್ ಸೂಚಿಸಿದರೆ ನರಸಿಂಹರಾಜ ಕ್ಷೇತ್ರದಿಂದಲೂ ಕಣಕ್ಕೆ ಇಳಿಯಲು ಸಿದ್ಧ ಎಂಬ ಸಂದೇಶ ರವಾನಿಸಿದ್ದರು. ಈ ಜಟಾಪಟಿಯಲ್ಲಿ ಸಿದ್ದರಾಮಯ್ಯ ಮೂಕಪ್ರೇಕ್ಷಕರಾಗಿದ್ದರು.
ಜಮೀರ್ ಮೈಸೂರಿನ ಕೆಲವು ಅಸೆಂಬ್ಲಿ ಕ್ಷೇತ್ರಗಳಿಗೂ ಭೇಟಿ ನೀಡಿ ತಮ್ಮ ರಾಜಕೀಯ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದು, ಬೆಂಬಲಿಗರ ಪಡೆಯನ್ನು ಕಟ್ಟಿಕೊಳ್ಳುತ್ತಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಅವರ ಆಶೀರ್ವಾದವೂ ಇದೆ. ಜಮೀರ್ ಮೈಸೂರಿಗೆ ಬಂದಾಗ ಕಾಂಗ್ರೆಸ್‌ನಲ್ಲಿರುವ ತನ್ವೀರ್ ಸೇಠ್ ವಿರೋಧಿಗಳೇ ಜಮೀರ್ ಅವರನ್ನು ಸುತ್ತುವರೆಯುತ್ತಾರೆ. ಇದು ತನ್ವೀರ್ ಸೇಠ್ ಅವರಲ್ಲಿ ಬೇಸರ ಮೂಡಿಸಿದೆ. ಇನ್ನೊಂದೆಡೆ ಸೇಠ್ ಅವರ ಕೆಲವು ರಾಜಕೀಯ ವಿರೋಧಿಗಳನ್ನು ಕಾಂಗ್ರೆಸ್‌ಗೆ ಸೆಳೆಯಲು ಕಾಂಗ್ರೆಸ್ ಮುಖಂಡರು ಮಾತುಕತೆ ನಡೆಸಿದ್ದಾರೆ. ಇನ್ನು ಮೈಸೂರು ವಿಭಾಗ ಮಟ್ಟದ ಕಾಂಗ್ರೆಸ್ ಪ್ರಚಾರ ಸಮಿತಿಗೆ ಉಸ್ತುವಾರಿಯನ್ನಾಗಿ ವರುಣಾ ಕ್ಷೇತ್ರದ ಶಾಸಕ ಡಾ| ಯತೀಂದ್ರ ಸಿದ್ದರಾಮಯ್ಯ ಅವರನ್ನು ನೇಮಿಸಲಾಗಿದೆ. ತಾವು ಹಿರಿಯ ಶಾಸಕರಾಗಿರುವಾಗ ತಮ್ಮನ್ನು ಕಡೆಗಣಿಸಿರುವುದು ಅಸಮಾಧಾನಕ್ಕೆ ಮತ್ತೂಂದು ಕಾರಣ.
ಈ ಮಧ್ಯೆ ಮುಂಬರುವ ಚುನಾವಣೆಯಲ್ಲಿ ತಮಗೆ ಟಿಕೆಟ್ ಕೈತಪ್ಪಬಹುದು ಎಂಬ ಆತಂಕವೂ ಸೇಠ್ ಅವರಲ್ಲಿದೆ. ಈ ಎಲ್ಲ ಕಾರಣಕ್ಕೆ ಅವರು ಅನಾರೋಗ್ಯದ ಕಾರಣ ನೀಡಿ ಕಳೆದ ಡಿಸೆಂಬರ್‌ನಲ್ಲಿಯೇ ಚುನಾವಣ ರಾಜಕಾರಣದಿಂದ ನಿವೃತ್ತಿ ಘೋಷಿಸಿ ಪಕ್ಷದ ಹೈಕಮಾಂಡ್‌ಗೆ ಪತ್ರ ಬರೆದಿದ್ದಾರೆ. ಆದರೆ, ಅವರ ಈ ನಿಲುವನ್ನು ಪಕ್ಷದ ವರಿಷ್ಠರು ಒಪ್ಪಿಲ್ಲ. ತನ್ವೀರ್ ಸೇಠ್ ಅಸೆಂಬ್ಲಿ ಚುನಾವಣೆಗೆ ಟಿಕೆಟ್ ಕೋರಿ ಕೆಪಿಸಿಸಿಗೆ ಅರ್ಜಿಯನ್ನೂ ಹಾಕಿದ್ದಾರೆ. ಮಾಜಿ ಮೇಯರ್ ಅಯೂಬ್ ಖಾನ್ ಅವರೂ ಕಾಂಗ್ರೆಸ್ ಟಿಕೆಟ್‌ಗಾಗಿ ನರಸಿಂಹರಾಜ ಕ್ಷೇತ್ರದಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಅಲ್ಪಸಂಖ್ಯಾಕರ ನಾಯಕರಾಗಲಿಲ್ಲ
ತಂದೆ ಅಜೀಜ್ ಸೇಠ್ ಅವರ ನಿಧನದ ಅನಂತರ 2002ರಲ್ಲಿ ನಡೆದ ಉಪ ಚುನಾವಣೆಯಲ್ಲಿ ತನ್ವೀರ್ ಸೇಠ್ ಗೆದ್ದರು. ಅಂದಿನಿಂದ ತನ್ವೀರ್ ಸೇಠ್ ಸತತ ಐದು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಮುಸ್ಲಿಂ ಮತದಾರರು ಅಧಿಕ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ಹಿಂದುತ್ವದ ಹೋರಾಟವೂ ಇದೆ. ತನ್ವೀರ್ ಸೇಠ್ ಮುಸ್ಲಿಮರ ಮತಗಳಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳ ಮತಗಳನ್ನು ಪಡೆದು ಈ ಕ್ಷೇತ್ರದಿಂದ ಆಯ್ಕೆಯಾಗುತ್ತಿದ್ದಾರೆ. ತನ್ವೀರ್ ಸೇಠ್ ಕ್ಷೇತ್ರದಲ್ಲಿ ಎಲ್ಲರನ್ನೂ ಒಳಗೊಳ್ಳುವ ಶಾಸಕ. ಐದು ಬಾರಿ ಶಾಸಕರಾಗಿ, ಧರ್ಮಸಿಂಗ್ ಹಾಗೂ ಸಿದ್ದರಾಮಯ್ಯ ಸರಕಾರದಲ್ಲಿ ಸಚಿವರಾಗಿದ್ದರೂ ತಮ್ಮ ನಾಯಕತ್ವದ ಪ್ರಭಾವ, ವರ್ಚಸನ್ನು ಕ್ಷೇತ್ರದಿಂದಾಚೆಗೆ ವಿಸ್ತರಿಸಿಕೊಳ್ಳುವ ಗೋಜಿಗೆ ಹೋಗಿಲ್ಲ. ಅವರ ಈ ಧೋರಣೆ ಬಗ್ಗೆ ಕಾಂಗ್ರೆಸ್ಸಿನ ಒಂದು ವಲಯದಲ್ಲಿ ಅಸಮಾಧಾನವಿದೆ. ಅಲ್ಪಸಂಖ್ಯಾಕ ವರ್ಗದಲ್ಲಿ ರಾಜ್ಯ ಮಟ್ಟದ ನಾಯಕರಾಗಿ ಹೊರಹೊಮ್ಮುವ ಅವಕಾಶವಿದ್ದರೂ ಅವರು ಆ ನಿಟ್ಟಿನಲ್ಲಿ ಪ್ರಯತ್ನವನ್ನೇ ಮಾಡಲಿಲ್ಲ ಎಂಬುದು ಅವರ ಕೆಲವು ಬೆಂಬಲಿಗರ ಬೇಸರ.
-ಕೂಡ್ಲಿ ಗುರುರಾಜ