ಗೋರಖ್‌ಪುರ, ಉತ್ತರ ಪ್ರದೇಶ : ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಸುಳ್ಳಿನ ಕಂತೆ ಎಂದು ಹೇಳಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ರಾಷ್ಟ್ರೀಯ ಭದ್ರತೆಯನ್ನು ನಿರ್ವಹಿಸುವಲ್ಲಿ ವಿರೋಧ ಪಕ್ಷಗಳು ಹೊಣೆಗೇಡಿಗಳಂತೆ ವರ್ತಿಸುತ್ತಿವೆ ಎಂದು ಕಟುವಾಗಿ ಟೀಕಿಸಿದ್ದಾರೆ.
ಬಿಜೆಪಿ ಯುವ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಪುಲ್ವಾಮಾ ಉಗ್ರ ದಾಳಿ ಮತ್ತು ಅದಕ್ಕೆ ಪ್ರತೀಕಾರವಾಗಿ ಭಾರತೀಯ ವಾಯು ಪಡೆಯಿಂದ ನಡೆದಿದ್ದ ಪಾಕ್ ಬಾಲಾಕೋಟ್ ಉಗ್ರ ಶಿಬಿರಗಳ ಮೇಲಿನ ಬಾಂಬ್ ದಾಳಿಯನ್ನು ಉಲ್ಲೇಖೀಸಿದರು.
ವಿರೋಧ ಪಕ್ಷಗಳು ಈ ಬಗ್ಗೆ ನೀಡುತ್ತಿರುವ ದೇಶ ವಿರೋಧಿ ಹೇಳಿಕೆಗಳನ್ನು ಪಾಕಿಸ್ಥಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಪರವಾಗಿ ಬಳಸಿಕೊಳ್ಳುತ್ತಿದೆ; ಈ ಬಗ್ಗೆ ಪ್ರತಿಪಕ್ಷಗಳು ದೇಶದ ಹಿತಾಸಕ್ತಿಯಲ್ಲಿ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಇಂದು ಮಂಗಳವಾರ ಬಿಡುಗಡೆಗೊಳಿಸಿರುವ 55 ಪುಟಗಳ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ತನ್ನ 55 ವರ್ಷಗಳ ಆಡಳಿತೆಯ ವೈಫಲ್ಯಗಳನ್ನು ವ್ಯಕ್ತಪಡಿಸಿದೆ ಎಂದು ಯೋಗಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಭಯೋತ್ಪಾದನೆಯ ವಿಷಯದಲ್ಲಿ ಶೂನ್ಯ ಸಹನೆಯ ನೀತಿಯನ್ನು ಅನುಸರಿಸುತ್ತಿರುವುದು ದೇಶದ ಭದ್ರತಾ ಹಿತಾಸಕ್ತಿಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಯೋಗಿ ಹೇಳಿದರು.