ಇಂಫಾಲ: ಮಣಿಪುರದಲ್ಲಿ ಚುನಾವಣಾ ಪೂರ್ವ ಮೈತ್ರಿಯಲ್ಲಿ ಕಾಂಗ್ರೆಸ್, ಸಿಪಿಐ, ಸಿಪಿಐ (ಎಂ), ಫಾರ್ವರ್ಡ್ ಬ್ಲಾಕ್, ಆರ್‌ಎಸ್‌ಪಿ ಮತ್ತು ಜೆಡಿ ಸೇರಿ ಆರು ಪಕ್ಷಗಳು ಪ್ರಗತಿಶೀಲ ಜಾತ್ಯತೀತ ಒಕ್ಕೂಟ (ಎಂಪಿಎಸ್‌ಎ) ರಚಿಸಿ ಬಿಜೆಪಿ ವಿರುದ್ಧ ಸಮರ ಸಾರಿವೆ.
ಶನಿವಾರ ಕಾಂಗ್ರೆಸ್ ಭವನದಲ್ಲಿ ಆರು ರಾಜಕೀಯ ಪಕ್ಷಗಳು ಜಂಟಿಯಾಗಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮೈತ್ರಿಯನ್ನು ಪ್ರಕಟಿಸಲಾಯಿತು.
ಮಣಿಪುರದ ಉಸ್ತುವಾರಿ ಎಐಸಿಸಿ ಚುನಾವಣಾ ವೀಕ್ಷಕ ಜೈರಾಮ್ ರಮೇಶ್, ರಾಜ್ಯದ ಮಾಜಿ ಮುಖ್ಯಮಂತ್ರಿ ಒಕ್ರಾಮ್ ಇಬೋಬಿ ಸಿಂಗ್ ಮತ್ತು ಎಡಪಕ್ಷಗಳ ಪ್ರತಿನಿಧಿ ಮೊಯರಂಗತೇಮ್ ನಾರಾ ಸಿಂಗ್ ಸಭೆಯಲ್ಲಿ ಭಾಗವಹಿಸಿದ್ದರು.
ಮಣಿಪುರದಲ್ಲಿ ಅಧಿಕಾರಕ್ಕೆ ಬಂದರೆ 18 ಅಂಶಗಳ ಕಾರ್ಯಸೂಚಿಯನ್ನು ಜಾರಿಗೆ ತರಲು ಒಪ್ಪಿಕೊಂಡಿದ್ದೇವೆ ಎಂದು ಎಂಪಿಎಸ್‌ಎ ನಾಯಕರು ಹೇಳಿದ್ದಾರೆ.
ಮಣಿಪುರದ ಪ್ರಾದೇಶಿಕ ಸಮಗ್ರತೆ ಮತ್ತು ರಾಜ್ಯದ ಐತಿಹಾಸಿಕ ಗಡಿಗಳನ್ನು ಉಳಿಸುವುದು, ಮಣಿಪುರದ ಜನರಿಗೆ ಅನುಕೂಲವಾಗುವಂತೆ ಉಚಿತ ಆರೋಗ್ಯ ರಕ್ಷಣೆಯ ಹಕ್ಕನ್ನು ಜಾರಿಗೊಳಿಸುವುದು, ರಾಜ್ಯದ ಯುವಕರಿಗೆ ನಿರುದ್ಯೋಗ ಭತ್ಯೆ ನೀಡುವುದು, ರಾಜ್ಯದಲ್ಲಿ ಕೋಮು ಸೌಹಾರ್ದತೆಯನ್ನು ಕಾಪಾಡುವುದು ಮತ್ತು ಮಣಿಪುರದ ಪ್ರತಿ ಕುಟುಂಬಕ್ಕೂ ಜೀವನೋಪಾಯದ ಆದಾಯವನ್ನು ಖಾತ್ರಿಪಡಿಸುವ ಮೂಲಕ ಆರ್ಥಿಕ ನ್ಯಾಯವನ್ನು ತಲುಪಿಸಲು ನಾಯಕರು ಹೇಳಿದರು.
60 ಸದಸ್ಯ ಬಲದ ಮಣಿಪುರ ವಿಧಾನಸಭೆಗೆ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.