ನವದೆಹಲಿ : ಅಡ್ಡ ಮತದಾನದ ಕಾರಣದಿಂದ ಹರಿಯಾಣದಲ್ಲಿ ರಾಜ್ಯಸಭಾ ಚುನಾವಣೆಯಲ್ಲಿ ಸೋತ ಒಂದು ದಿನದ ನಂತರ, ಕಾಂಗ್ರೆಸ್ ವಿಪ್ ಮುರಿದ ಶಾಸಕ ಕುಲದೀಪ್ ಬಿಷ್ಣೋಯ್ ಅವರನ್ನು ಪಕ್ಷದ ಎಲ್ಲಾ ಸ್ಥಾನಗಳಿಂದ ಉಚ್ಛಾಟಣೆ ಮಾಡಿದೆ.
ಹಿಸಾರ್‌ನ ಆದಂಪುರ ಕ್ಷೇತ್ರದ ಶಾಸಕ ಬಿಷ್ಣೋಯ್ ಅವರು ಪಕ್ಷದ ಅಭ್ಯರ್ಥಿ ಅಜಯ್ ಮಾಕನ್‌ಗೆ ಮತ ಹಾಕಿರಲಿಲ್ಲ ಮತ್ತು ಆಡಳಿತಾರೂಢ ಬಿಜೆಪಿ-ಜೆಜೆಪಿ ಬೆಂಬಲಿಸಲ್ಪಟ್ಟ ಸ್ವತಂತ್ರ ಅಭ್ಯರ್ಥಿ ಕಾರ್ತಿಕೇಯ ಶರ್ಮಾ ಪರವಾಗಿ ಅಡ್ಡ ಮತದಾನ ಮಾಡಿದರು ಎಂದು ಹರಿಯಾಣ ಕಾಂಗ್ರೆಸ್ ಆರೋಪಿಸಿದೆ.
ಕಾಂಗ್ರೆಸ್ 31 ಶಾಸಕರನ್ನು ಹೊಂದಿತ್ತು ಮತ್ತು ಹರಿಯಾಣದಿಂದ ರಾಜ್ಯಸಭಾ ಸ್ಥಾನವನ್ನು ಗೆಲ್ಲಲು ಅಷ್ಟು ಮತಗಳ ಅಗತ್ಯವಿತ್ತು, ಒಬ್ಬ ಶಾಸಕರು ಅಡ್ಡ ಮತದಾನ ಮಾಡಿದ್ದು, ಮತ್ತು ಇನ್ನೊಬ್ಬರ ಮತವನ್ನು ರದ್ದುಗೊಳಿಸಿದ್ದು ಕಾಂಗ್ರೆಸ್ ಸೋಲಿಗೆ ಕಾರಣವಾಯಿತು.
“ಕಾಂಗ್ರೆಸ್ ಅಧ್ಯಕ್ಷರು ಕುಲದೀಪ್ ಬಿಷ್ಣೋಯ್ ಅವರನ್ನು ತಕ್ಷಣವೇ ಜಾರಿಗೆ ಬರುವಂತೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ವಿಶೇಷ ಆಹ್ವಾನಿತ ಹುದ್ದೆ ಸೇರಿದಂತೆ ಅವರ ಎಲ್ಲಾ ಪಕ್ಷದ ಸ್ಥಾನಗಳಿಂದ ಉಚ್ಚಾಟಿಸಿದ್ದಾರೆ” ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಿಷ್ಣೋಯ್, ನಾನು ಪಕ್ಷದ ಯಾವುದೇ ಸಭೆಗಳಿಗೆ ಹಾಜರಾಗಿಲ್ಲ ಮತ್ತು ನನ್ನ ಆತ್ಮಸಾಕ್ಷಿಯಂತೆ ಮತ ಚಲಾಯಿಸಿದ್ದೇನೆ ಎಂದು ಹೇಳಿದ್ದಾರೆ.