ದಾವಣಗೆರೆ: ದಾವಣಗೆರೆಯ ಹದಡಿ ರಸ್ತೆಯಲ್ಲಿನ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ನಡೆದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಗೃಹಜ್ಯೋತಿ ಉದ್ಘಾಟನಾ ಸಮಾರಂಭ ಗೊಂದಲ, ಗದ್ದಲದ ವೇದಿಕೆ ಆಯಿತು.
ಹರಿಹರದ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಮಾತನಾಡುತ್ತಿದ್ದ ಸಂದರ್ಭದಲ್ಲಿ, ಕೇಂದ್ರ ಸರ್ಕಾರವನ್ನು, ಮೋದಿಯವರನ್ನು ಏನಾದರೂ ಕೇಳಿ ಹತ್ತು ಕೆಜಿ ಅಕ್ಕಿ ಘೋಷಣೆ ಮಾಡಿದೀರಾ… ಎಂದು ಪ್ರಶ್ನಿಸಿದಾಗ ಗದ್ದಲ ಉಂಟಾಯಿತು.
ಕಾಂಗ್ರೆಸ್ ಸರ್ಕಾರದ ಯೋಜನೆಗಳ ಬಗ್ಗೆ ಮಾತನಾಡಿ ಎಂದು ಒತ್ತಾಯಿಸಿದರು. ನಾನು ವಿರೋಧ ಪಕ್ಷದ ಸದಸ್ಯನಾಗಿ ಕೆಲವಾರು ಸಮಸ್ಯೆಗಳ ಬಗ್ಗೆ ಹೇಳುವುದು ನನ್ನ ಕರ್ತವ್ಯ, ಸರ್ಕಾರದ ಎಲ್ಲ ಯೋಜನೆಗಳು ಯಶಸ್ವಿಯಾಗಲಿ ಮತ್ತು ಶುಭವಾಗಲಿ ಎಂದು ಬಯಸುತ್ತೇನೆ. ಯೋಜನೆಯ ಜಾರಿ ಜೊತೆಗೆ ಸಾರ್ವಜನಿಕ ಸಮಸ್ಯೆಗಳ ನಿಗಾ ವಹಿಸಬೇಕು ಎಂದು ಹೇಳುವುದು ನನ್ನ ಕರ್ತವ್ಯ ಎಂದು ಸಮಜಾಯಿಷಿ ನೀಡಿದರು.
ಇದನ್ನೂ ಓದಿ:UP: ಅಪ್ರಾಪ್ತ ಬಾಲಕರಿಗೆ ಮೂತ್ರ ಕುಡಿಸಿ, ಗುದದ್ವಾರಕ್ಕೆ ಮೆಣಸಿನ ಕಾಯಿ ಹಾಕಿ ಚಿತ್ರಹಿಂಸೆ
ಆದರೆ, ಸಭಾಂಗಣದಲ್ಲಿದ್ದವರು ಕೇಳಲಿಲ್ಲ. ನೀವು ಒಬ್ಬೊಬ್ಬರೇ ನಿಂತು ಮಾತನಾಡಿದರೆ ನಾನು ಜಾಗ ಬಿಟ್ಟು ಕದಲುವುದೇ ಇಲ್ಲ. ಇದು ಸರ್ಕಾರಿ ಕಾರ್ಯಕ್ರಮ ಎಂಬ ಎಚ್ಚರ ಇರಲಿ. ಹಾಗಿದ್ದರೆ ನನ್ನನ್ನು ಕರೆಯಲೇ ಬಾರದಿತ್ತು ಎಂದು ಹರೀಶ್ ಹೇಳಿದರು. ಈ ವೇಳೇ ಸಾಕಷ್ಟು ಗೊಂದಲ, ಗದ್ದಲ ಏರ್ಪಟ್ಟಿತು.
ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಶಾಸಕರಾದ ಕೆ.ಎಸ್. ಬಸವಂತಪ್ಪ, ದೇವೇಂದ್ರಪ್ಪ ಇತರರು ಗದ್ದಲ ಮಾಡದಂತೆ ಮನವಿ ಮಾಡಿದರು. ಆದರೂ, ಗದ್ದಲ ನಿಲ್ಲಲಿಲ್ಲ. ಇದರಿಂದ ಬೇಸತ್ತ ಹರೀಶ್ ಭಾಷಣ ಅರ್ಧಕ್ಕೆ ನಿಲ್ಲಿಸಿದರು. ಕೊನೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಲ್ಲಿಕಾರ್ಜುನ್ ಮಾತನಾಡುವಂತೆ ಕೋರಿದರು. ಹರೀಶ್ ಮಾತು ಮುಂದಯವರೆಸಿದರು. ಎಲ್ಲ ಗ್ಯಾರಂಟಿ ಯೋಜನೆ ಯಶಸ್ವಿಯಾಗಲಿ, ಶುಭವಾಗಲಿ ಎಂದು ಹರೀಶ್ ಹೇಳಿ ಭಾಷಣ ಮುಗಿಸಿದರು.