ಮುಂಬಯಿ : “ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ನೂತನ ಕಾಯಿದೆಯಡಿ ನನ್ನ ಆಸ್ತಿಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದರಿಂದ ನನಗೆ ಸಾಲ ಕೊಟ್ಟವರಿಗೆ ಯಾವುದೇ ಪ್ರಯೋಜನವಾಗದು” ಎಂದು ಲಂಡನ್‌ನಿಂದ ಭಾರತಕ್ಕೆ ಗಡೀಪಾರಾಗುವ ಹಂತದಲ್ಲಿರುವ ಮದ್ಯ ದೊರೆ ವಿಜಯ್ ಮಲ್ಯ ಅವರು ಬಾಂಬೆ ಹೈಕೋರ್ಟಿಗೆ ಹೇಳಿದ್ದಾರೆ.
ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯಿದೆಯಡಿ ತನ್ನನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಪಿಎಂಎಲ್‌ಎ ಕಾಯಿದೆಯಡಿ ಕಳೆದ ಜನವರಿ 5ರಂದು ಘೋಷಿಸಲಾದ ಆದೇಶವನ್ನು ವಿಜಯ್ ಮಲ್ಯ ಅವರು ಬಾಂಬೆ ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದಾರೆ.
ದೇಶಭ್ರಷ್ಟ ಆರ್ಥಿಕ ಅಪರಾಧಗಳ ಕಾಯಿದೆಯ ಪ್ರಕಾರ ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸಲ್ಪಡುವ ವ್ಯಕ್ತಿಯ ಆಸ್ತಿಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಜಾರಿ ನಿರ್ದೇಶನಾಲಯಕ್ಕೆ ಅಧಿಕಾರ ಇರುತ್ತದೆ.
ಮಲ್ಯ ಅವರ ವಕೀಲ ಅಮಿತ್ ದೇಸಾಯಿ ಅವರು ಬಾಂಬೆ ಹೈಕೋರ್ಟ್ ನಲ್ಲಿ ಜಸ್ಟಿಸ್ ಐ ಎ ಮಹಾಂತಿ ಮತ್ತು ಜಸ್ಟಿಸ್ ಎ ಎಂ ಬದರ್ ಅವರ ವಿಭಾಗೀಯ ಪೀಠಕ್ಕೆ “ಮಲ್ಯ ಅವರ ಆಸ್ತಿಪಾಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಳ್ಳುವುದರಿಂದ ಮಲ್ಯ ಅವರಿಗೆ ಸಾಲಕೊಟ್ಟವರಿಗೆ ಯಾವುದೇ ಪ್ರಯೋಜನವಾಗದು” ಎಂದು ಹೇಳಿದರು.
ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದು ಅತ್ಯಂತ ಕ್ರೂರ ಕ್ರಮ. ಈ ಹೊತ್ತಿನ ಅಗತ್ಯವೇನೆಂದರೆ ಬ್ಯಾಂಕುಗಳು ಮತ್ತು ಸಾಲಕೊಟ್ಟವರೊಂದಿಗೆ ಬಾಕಿ ಚುಕ್ತಾ ಬಗ್ಗೆ ಮಾತುಕತೆ ನಡೆಸುವುದೇ ಆಗಿದೆ ಎಂದು ದೇಸಾಯಿ ಕೋರ್ಟಿಗೆ ಹೇಳಿದರು.