Advertisement
ಹೊಸದಿಲ್ಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯದರ್ಶಿ ರಾಜೇಶ್ ಭೂಷಣ್ ಈ ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಒಮಿಕ್ರಾನ್‌ಗೆ ಯಾವ ರೀತಿಯ ಚಿಕಿತ್ಸೆ ಎಂಬ ಬಗ್ಗೆ ಇದ್ದ ಜಿಜ್ಞಾಸೆಯೂ ನಿವಾರಣೆಯಾದಂತಾಗಿದೆ. ಡೆಲ್ಟಾ ರೂಪಾಂತರಿ ಹೆಚ್ಚಿನ ಪ್ರಮಾಣದಲ್ಲಿ ಹಬ್ಬುತ್ತದೆ. ಇದರಿಂದಾಗಿ ಕೊರೊನಾ ಸಂಖ್ಯೆಯೂ ಹೆಚ್ಚಾಗುತ್ತದೆ ಎಂದು ಭೂಷಣ್ ಇದೇ ಸಂದರ್ಭದಲ್ಲಿ ವಿವರಿಸಿದರು.
ದೇಶದಲ್ಲಿ ಪತ್ತೆಯಾಗಿರುವ 181 ಒಮಿಕ್ರಾನ್ ಪ್ರಕರಣಗಳ ಪೈಕಿ, ಶೇ.91 ಮಂದಿ 2 ಡೋಸ್ ಲಸಿಕೆ ಪಡೆದಿದ್ದಾರೆ. ಮೂವರಿಗೆ ಬೂಸ್ಟರ್ ಡೋಸ್ ನೀಡಲಾಗಿದೆ ಎಂದರು ಭೂಷಣ್. ಶೇ.70ರಷ್ಟು ಒಮಿಕ್ರಾನ್ ಕೇಸ್‌ಗಳು ಲಕ್ಷಣ ರಹಿತವಾಗಿವೆ ಮತ್ತು ಸೋಂಕಿತರಲ್ಲಿ ಶೇ.61 ಮಂದಿ ಪುರುಷರು ಎಂದು ವಿವರಿಸಿದ್ದಾರೆ. ನಾಲ್ಕನೇ ಅಲೆ: ಜಗತ್ತಿನಲ್ಲಿ ಕೊರೊನಾದ ನಾಲ್ಕನೇ ಅಲೆ ಉಂಟಾಗಿದೆ. ಒಟ್ಟಾರೆ ಪಾಸಿಟಿವಿಟಿ ಪ್ರಮಾಣ ಶೇ.6.1. ಹೀಗಾಗಿ, ದೇಶವಾಸಿಗಳೂ ಮುತುವರ್ಜಿಯಿಂದ ಮುನ್ನೆಚ್ಚರಿಕೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮನವಿ ಮಾಡಿದ್ದಾರೆ. ಡೆಲ್ಟಾಗೆ ಹೋಲಿಕೆ ಮಾಡಿದರೆ ಒಮಿಕ್ರಾನ್ ಕ್ಷಿಪ್ರವಾಗಿ ಹರಡುತ್ತದೆ. 1.5 ದಿನಗಳಿಂದ 3 ದಿನಗಳಲ್ಲಿ ಕೇಸ್ ದ್ವಿಗುಣಗೊಳ್ಳುತ್ತದೆ ಎಂದಿದ್ದಾರೆ. ದೇಶದ ಶೇ.61ರಷ್ಟು ಮಂದಿಗೆ 2 ಡೋಸ್ ಲಸಿಕೆ ನೀಡಲಾಗಿದೆ ಎಂದಿದ್ದಾರೆ.
Related Articles
Advertisement
358ಕ್ಕೆ ಏರಿಕೆ: ಗುರುವಾರದಿಂದ ಶುಕ್ರವಾರದ ಅವಧಿಯಲ್ಲಿ ದೇಶದಲ್ಲಿ 122 ಒಮಿಕ್ರಾನ್ ರೂಪಾಂತರಿ ಪ್ರಕರಣಗಳ ಸಂಖ್ಯೆ ದೃಢಪಟ್ಟಿದೆ. ಹೀಗಾಗಿ, ಒಟ್ಟು ಕೇಸ್‌ಗಳ ಸಂಖ್ಯೆ 358ಕ್ಕೆ ಏರಿಕೆಯಾಗಿದೆ. ಈ ಪೈಕಿ 114 ಮಂದಿ ಚೇತರಿಸಿಕೊಂಡಿದ್ದಾರೆ. ಒಟ್ಟು 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅದು ದೃಢಪಟ್ಟಿದೆ. ಇನ್ನು ದಿನವಹಿ ಕೊರೊನಾ ಸೋಂಕುಗಳ ಸಂಖ್ಯೆ 24 ಗಂಟೆಗಳಲ್ಲಿ 6,650 ಹೊಸ ಪ್ರಕರಣಗಳು ಮತ್ತು ಇದೇ ಅವಧಿಯಲ್ಲಿ 374 ಮಂದಿ ಸಾವಿಗೀಡಾಗಿದ್ದಾರೆ.
ಜರ್ಮನಿಯಲ್ಲಿ ಮೊದಲ ಸಾವು: ಜರ್ಮನಿಯಲ್ಲಿ ಒಮಿಕ್ರಾನ್ ರೂಪಾಂತರಿಯಿಂದಾಗಿ ಮೊದಲ ಸಾವು ಸಂಭವಿಸಿರುವುದಾಗಿ ಜರ್ಮನಿಯ ರಾಬರ್ಟ್ ಕೋಚ್ ಇನ್‌ಸ್ಟಿಟ್ಯೂಟ್ ಗುರುವಾರ ತಿಳಿಸಿದೆ. ಹೊಸ ರೂಪಾಂತರಿಗೆ ಜಗತ್ತಿನಲ್ಲಿ ಇದು ಮೂರನೇ ಸಾವು. ಅಮೆರಿಕ, ಯು.ಕೆ.ಯಲ್ಲಿ ತಲಾ ಒಬ್ಬರು ಅಸುನೀಗಿದ್ದರು.ಮುಂಬಯಿ, ದಿಲ್ಲಿಯಲ್ಲಿ ಹೆಚ್ಚಳ: ಮಹಾರಾಷ್ಟ್ರದಲ್ಲಿ ಶುಕ್ರವಾರ 680 ಹೊಸ ಕೇಸ್‌ಗಳು ದೃಢಪಟ್ಟಿವೆ. ಜತೆಗೆ 20 ಒಮಿಕ್ರಾನ್ ಕೇಸ್‌ಗಳೂ ಖಚಿತಪಟ್ಟಿವೆ. ದಿಲ್ಲಿಯಲ್ಲಿ 180 ಹೊಸ ಪ್ರಕರಣಗಳು ದೃಢಪಟ್ಟಿವೆ. ಈ ಎಲ್ಲ ಬೆಳವಣಿ ಗೆಗಳ ನಡುವೆ ಮಹಾರಾಷ್ಟ್ರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆಯ ವರೆಗೆ ಸಾರ್ವಜನಿಕ ಸ್ಥಳಗಳಲ್ಲಿ ಐವರು ಸೇರುವಂತಿಲ್ಲ. ಸಿನೆಮಾ ಹಾಲ್‌ಗಳಲ್ಲಿ ಮತ್ತು ಜಿಮ್‌ಗಳಲ್ಲಿ ಶೇ.50ರ ಮಿತಿಯನ್ನು ಮತ್ತೆ ಹೇರಲಾಗಿದೆ. ಒಮಿಕ್ರಾನ್ ಕಡಿಮೆ ತೀವ್ರತೆಯದ್ದು
ಭಾರತ ಸೇರಿದಂತೆ ಜಗತ್ತಿನಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ಅದರಿಂದ ಉಂಟಾಗುವ ಪರಿಣಾಮ ಅಲ್ಪ ಪ್ರಮಾಣದ್ದು. ದಕ್ಷಿಣ ಆಫ್ರಿಕಾ, ಸ್ಕಾಟ್ಲೆಂಡ್, ಇಂಗ್ಲೆಂಡ್‌ನ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಈ ಅಭಿಪ್ರಾಯಕ್ಕೆ ಬರಲಾಗಿದೆ. ಒಮಿಕ್ರಾನ್ ದೃಢಪಟ್ಟರೂ ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ತೀರಾ ಕಡಿಮೆ ಇರುತ್ತದೆ. ಮೂರು ರಾಷ್ಟ್ರಗಳ ಅಧ್ಯಯನದ ಪ್ರಕಾರ ಒಮಿಕ್ರಾನ್‌ನಿಂದಾಗಿ ಪರಿಸ್ಥಿತಿ ಕೈಮೀರಿ ಹೋಗಿರುವ ಪ್ರಮಾಣ ಕಡಿಮೆ. ಇದೇ ವೇಳೆಅಮೆರಿಕ ಮತ್ತು ಐರೋಪ್ಯ ಒಕ್ಕೂಟದ ಕೆಲವು ಭಾಗಗಳಲ್ಲಿ ಕೆಲವು ದಿನಗಳಿಂದ ಡೆಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಡೆಲ್ಟಾ ಮತ್ತು ಒಮಿಕ್ರಾನ್ ಎರಡೂ ಸೇರಿ ಉಂಟಾಗಿರುವ ಹೊಸ ರೂಪಾಂತರಿ ಇದಾಗಿದೆ. ವಿಜ್ಞಾನಿಗಳ ಪರಿಶೀಲನೆ
ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಬೂಸ್ಟರ್ ಡೋಸ್ ಬೇಕೋ ಬೇಡವೋ ಎಂಬ ಬಗ್ಗೆ ಸರಕಾರದ ವಿಜ್ಞಾನಿಗಳ ತಂಡ ಪರಿಶೀಲನೆ ನಡೆಸುತ್ತಿದೆ. ಜಗತ್ತಿನ ಇತರ ರಾಷ್ಟ್ರಗಳಲ್ಲಿ ಬೂಸ್ಟರ್ ಡೋಸ್ ನೀಡಿದ ಬಳಿಕ ಲಭ್ಯವಾಗಿರುವ ಅಂಶಗಳನ್ನು ಅಧ್ಯಯನ ನಡೆಸಲಾಗುತ್ತಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿಯ ಮಹಾನಿರ್ದೇಶಕ ಡಾ| ಬಲರಾಮ ಭಾರ್ಗವ ಹೇಳಿದ್ದಾರೆ. ಹೊಸದಿಲ್ಲಿಯಲ್ಲಿ ಮಾತನಾಡಿದ ಅವರು, ಬೂಸ್ಟರ್ ಡೋಸ್ ನೀಡಬೇಕೇ ಎಂಬ ಬಗ್ಗೆ ವಿಜ್ಞಾನಿಗಳ ಸಮಿತಿ ಹಲವು ಹಂತದಲ್ಲಿ ಸಮಾಲೋಚನೆ ನಡೆಸಿದೆ. ಲಸಿಕೆ ಹಾಕಿಸುವುದಕ್ಕಾಗಿ ಇರುವ ರಾಷ್ಟ್ರೀಯ ತಾಂತ್ರಿಕ ಸಮಿತಿ ಕೂಡ ಈ ಬಗ್ಗೆ ಪರಿಶೀಲನೆ ನಡೆಸಿದೆ. ಅಂತಿಮವಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.