Advertisement
ಯಾವುದೇ ಕಾರ್ಯದಲ್ಲಿ ಯಶಸ್ಸು ಸಾಧಿಸಬೇಕಾದರೆ ಕಠಿನ ಶ್ರಮ, ಶ್ರದ್ಧೆ ಜತೆಗೆ ದೃಢವಾದ ನಿರ್ಧಾರವಿರಬೇಕು. ಬದುಕನ್ನು ಪ್ರೀತಿಸಿದ ದೇಶದ ಮಹಾನ್ ವಿಜ್ಞಾನಿ, ಮಾಜಿ ರಾಷ್ಟ್ರಪತಿ ಡಾ| ಎ.ಪಿ.ಜೆ ಅಬ್ದುಲ್ ಕಲಾಂ ಹೇಳುವಂತೆ ಸೂರ್ಯನಂತೆ ಪ್ರಜ್ವಲಿಸಬೇಕಾದರೆ ಸೂರ್ಯನಂತೆ ಉರಿಯಬೇಕು. ನಾವು ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಗಳಿಸಬೇಕಾದರೂ ಅದು ಮೊದಲು ನಮ್ಮ ನರನಾಡಿಗಳಲ್ಲಿ ತುಂಬಿಕೊಂಡಿರಬೇಕು ಮತ್ತು ಅದೇ ಉಸಿರಾಗಿರಬೇಕು.
Related Articles
Advertisement
ಯಶಸ್ಸು ಎಂಬುದು ಒಂದು ರೀತಿಯ ತಪಸ್ಸು, ನಾವು ಯಾವ ವಿಚಾರದ ಕುರಿತು ಸತತವಾಗಿ ಯೋಚಿಸುತ್ತೇವೆಯೊ, ಚಿಂತಿಸುತ್ತೇವೆಯೊ ಅಥವಾ ಅಭ್ಯಾಸಿಸುತ್ತೇವೆಯೋ ಅದಕ್ಕೆ ನಮ್ಮ ಶಕ್ತಿ ಸಾಮರ್ಥ್ಯವನ್ನೆಲ್ಲ ಧಾರೆಯೆರೆಯುವ ಮನಸ್ಸು ಮಾಡುತ್ತೇವೆಯೋ ಆಗ ಮಾತ್ರ ನಮ್ಮ ಗುರಿ ತಲುಪಲು ಸಾಧ್ಯವಾಗುತ್ತದೆ. ವಿಜ್ಞಾನಿಯಾಗಿದ್ದ ಆಲ್ಬರ್ಟ್ ಐನ್‌ಸ್ಟಿನ್ ಕೂಡ ಈ ವಿಚಾರವನ್ನು ದೃಢವಾಗಿ ನಂಬಿದ್ದರಲ್ಲದೆ ಅದರಂತೆ ನಡೆದು ಸಾಧನೆಯ ಶಿಖರ ಏರಿದರು. ಯಶಸ್ಸು ಅಥವಾ ಸಾಧನೆ ಎನ್ನುವುದು ಕೇವಲ ಒಂದು ನಿರ್ಧಾರ ಅಥವಾ ಒಂದು ಬಾರಿ ಶ್ರಮ ಹಾಕಿದಾಕ್ಷಣ ಲಭಿಸದು. ಹಾಗೊಂದು ವೇಳೆ ನಮ್ಮ ಸಣ್ಣ ಪರಿಶ್ರಮ ಅಥವಾ ಪ್ರಯತ್ನದಿಂದ ಇಂಥದ್ದೊಂದು ಯಶಸ್ಸು ಲಭಿಸಿದರೂ ಅದು ಕ್ಷಣಿಕ. ಯಶಸ್ಸು ಅಥವಾ ಸಾಧನೆ ಶಾಶ್ವತವಾಗಿರಬೇಕು ಎಂದಾದರೆ ನಮ್ಮ ಮನಸ್ಸು ಏಕಾಗ್ರತೆಯಿಂದ ಕೂಡಿದ್ದು ನೋಟ ಗುರಿಯತ್ತಲೇ ನೆಟ್ಟಿರಬೇಕು. ಇದಕ್ಕೆ ಸತತ ಪರಿಶ್ರಮ ಅಥವಾ ಪ್ರಯತ್ನ ಜತೆಗೂಡಿದಾಗ ಯಶಸ್ಸು ನಮ್ಮ ಸ್ವತ್ತಾಗುವುದು ನಿಸ್ಸಂಶಯ. ಪ್ರತಿಯೊಬ್ಬ ಸಾಧಕನಿಗೂ ಅವನ ಸಾಮರ್ಥ್ಯದ ಬಗ್ಗೆ ಆತ್ಮವಿಶ್ವಾಸವಿರಬೇಕು. ಮರದ ಮೇಲೆ ಕುಳಿತ ಹಕ್ಕಿಗೆ ಕೊಂಬೆ ಮುರಿದು ಬೀಳುವ ಭಯವಿರದು. ಏಕೆಂದರೆ ಅದು ನಂಬಿರುವುದು ಮರದ ದೊಡ್ಡ ರಂಬೆ ಯನ್ನಲ್ಲ, ತನ್ನದೇಯಾದ ರೆಕ್ಕೆಯನ್ನು. ಅಂತೆಯೇ ಮಾನವನು ಕೂಡ ಛಲದಿಂದ ಸಾಧನೆಯತ್ತ ಮುಖ ಮಾಡಿದ್ದೇ ಆದಲ್ಲಿ ಅವನಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ.
– ತೇಜಸ್ವಿನಿ ಕಾಂತರಾಜ್, ಬೆಂಗಳೂರು