Advertisement

ತಪ್ಪೊಪ್ಪಿಕೊಂಡ ಬಸ್‌ ನಿರ್ವಾಹಕ

08:05 AM Sep 10, 2017 | Harsha Rao |

ಗುರುಗ್ರಾಮ: ಇಲ್ಲಿನ ರ್ಯಾನ್‌ ಇಂಟರ್‌ನ್ಯಾಷನಲ್‌ ಶಾಲೆಯಲ್ಲಿ ಶುಕ್ರವಾರ ನಡೆದ 2ನೇ ತರಗತಿ ವಿದ್ಯಾರ್ಥಿ ಪ್ರಧುಮನ್‌ ಹತ್ಯೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಬಾಲಕನನ್ನು ಕೊಂದಿದ್ದು ತಾನೇ ಎಂದು ಶಾಲಾ ಬಸ್‌ ಕಂಡಕ್ಟರ್‌ ತಪ್ಪೊಪ್ಪಿಕೊಂಡಿದ್ದು, 2 ದಿನಗಳ ಕಾಲ ಆತನನ್ನು ಪೊಲೀಸ್‌ ವಶಕ್ಕೆ ಒಪ್ಪಿಸಲಾಗಿದೆ.

Advertisement

ಲೈಂಗಿಕ ದೌರ್ಜನ್ಯ ನಡೆಸಲು ಹೋಗಿ ಮಗುವನ್ನು ಕೊಂದಿದ್ದಾಗಿ ಬಸ್‌ ನಿರ್ವಾಹಕ ಅಶೋಕ್‌ ಕುಮಾರ್‌ ಹೇಳಿದ್ದಾನೆ. ಆದರೆ, ಇದರಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ. 7 ದಿನಗಳೊಳಗೆ ಪ್ರಕರಣ ಸಂಬಂಧ ಆರೋಪಪಟ್ಟಿ ಸಲ್ಲಿಸುತ್ತೇವೆ ಎಂದು ಶನಿವಾರ ಗುರುಗ್ರಾಮ ಪೊಲೀಸ್‌ ಆಯುಕ್ತ ಸಂದೀಪ್‌ ಖೀರ್ವಾರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅಲ್ಲದೆ, ಶಾಲೆಯು ಭದ್ರತಾ ನಿಯಮಗಳನ್ನು ಪಾಲಿಸಿತ್ತೋ, ಇಲ್ಲವೋ ಎಂಬುದರ ಪರಿಶೀಲನೆಗೆ ಮೂವರು ಸದಸ್ಯರ ಸಮಿತಿ ನೇಮಕ ಮಾಡಲಾಗಿದ್ದು, ಸೋಮವಾರ ವರದಿ ಕೈಗೆ ಸಿಗಲಿದೆ ಎಂದಿದ್ದಾರೆ.

ಇದೇ ವೇಳೆ, ರ್ಯಾನ್‌ ಶಾಲೆಯ ಪ್ರಾಂಶುಪಾಲೆ ನೀರಜಾ ಭಾತ್ರಾರನ್ನು ಅಮಾನತು ಮಾಡಲಾಗಿದ್ದು, ಎಲ್ಲ ಭದ್ರತಾ ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ. ಶುಕ್ರವಾರ ಬೆಳಗ್ಗೆ 8.30ರ ವೇಳೆಗೆ ಬಾಲಕ ಪ್ರಧುಮನ್‌ನ ಶವ ಕತ್ತು ಸೀಳಿದ ಸ್ಥಿತಿಯಲ್ಲಿ ಟಾಯ್ಲೆಟ್‌ನಲ್ಲಿ ಪತ್ತೆಯಾಗಿತ್ತು.

ಸಿಬಿಐ ತನಿಖೆಗೆ ಒತ್ತಾಯ: ಶನಿವಾರವೂ ಶಾಲೆಯ ಮುಂದೆ ಪ್ರತಿಭಟನೆ ನಡೆಸಿರುವ ವಿದ್ಯಾರ್ಥಿಗಳ ಹೆತ್ತವರು, ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿದ್ದಾರೆ. ಇನ್ನೊಂದೆಡೆ, ಸಿಬಿಎಸ್‌ಇ ಕೂಡ ಇಬ್ಬರು ಸದಸ್ಯರ ಸತ್ಯಶೋಧನಾ ಸಮಿತಿ ರಚಿಸಿದೆ. ಪ್ರಕರಣ ಕುರಿತು 2 ದಿನಗಳೊಳಗೆ ವರದಿ ನೀಡುವಂತೆ ಸಮಿತಿಯು ಶಾಲಾ ಆಡಳಿತ ಮಂಡಳಿಗೆ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next