ಪಣಜಿ: ಕೇಂದ್ರ ಸರಕಾರವು ತಾಕತ್ತಿದ್ದರೆ ರಫೇಲ್ ಹಗರಣದ ಸಮಗ್ರ ತನಿಖೆಯನ್ನು ಸಂಯುಕ್ತ ಸಂಸದೀಯ ಸಮಿತಿಯ ಮೂಲಕ ನಡೆಸಬೇಕು ಎಂದು ಕಾಂಗ್ರೆಸ್ ನಾಯಕಿ ಅಲ್ಕಾ ಲಾಂಬಾ ಸವಾಲು ಹಾಕಿದ್ದಾರೆ.
ಪಣಜಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರಕಾರವು ರಫೇಲ್ ಯುದ್ಧ ವಿಮಾನ ಖರೀದಿಯ ಕರಾರು ಮಾಡಿಕೊಳ್ಳುವ ಸಂದರ್ಭದಲ್ಲಿ ಕೋಟ್ಯಂತರ ರೂ ಅವ್ಯವಹಾರ ನಡೆಸಿದ್ದು, ಒಂದಾದ ಮೇಲೊಂದು ಪುರಾವೆಗಳು ಹೊರಬೀಳುತ್ತಿದೆ. ಈ ಅವ್ಯವಹಾರವನ್ನು ಮುಚ್ಚಿಡಲು ಬಿಜೆಪಿಯು ಹಲವು ಉಪಾಯ ಮಾಡಿದರೂ ಕೂಡ ಭ್ರಷ್ಟಾಚಾರ ಮತ್ತು ಇದರಲ್ಲಿ ಶಾಮೀಲಾಗಿರುವ ದಲಾಲರ ಕೃತ್ಯ ಹೊರಬೀಳುತ್ತಿದೆ ಎಂದರು.
ದೇಶದ ಅರ್ಥವ್ಯವಸ್ಥೆ ಮತ್ತು ಸುರಕ್ಷತೆ ಆತಂಕದ ಸ್ಥಿತಿಯಲ್ಲಿದೆ. ರಫೇಲ್ ಡೀಲ್‍ನಲ್ಲಿನ ಭ್ರಷ್ಟಾಚಾರ ಮುಚ್ಚಿಡಲು ಪ್ರಧಾನಿ ನರೇಂದ್ರ ಮೋದಿ ಸರಕಾರ ನಡೆಸಿರುವ ಆಪರೇಶನ್ ಕವರ್ ಅಪ್ ಪುನಃ ಬೆಳಕಿಗೆ ಬಂದಿದೆ. ಬಿಜೆಪಿ ಸರಾಕಾರವು ರಾಷ್ಟ್ರೀಯ ಸುರಕ್ಷತೆಯನ್ನು ಬಲಿ ನೀಡಿದೆ. ಭಾರತೀಯ ನೌಕಾದಳವನ್ನು ಆತಂಕಕ್ಕೆ ತಳ್ಳಿದೆ. ದೇಶದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಠ ಮಾಡಿದೆ ಎಂದು ಅಲ್ಕಾ ಲಾಂಬಾ ಆರೋಪಿಸಿದರು.
ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿರುವಾಗ 126 ರಫೆಲ್ ಯುದ್ಧ ವಿಮಾನ ಖರೀದಿಗೆ ಕರಾರು ಮಾಡಿಕೊಂಡಿತ್ತು. ಪ್ರತಿ ವಿಮಾನಕ್ಕೆ 526 ಕೋಟಿ ದರ ನಿಗದಿಯಾಗಿತ್ತು. ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ 36 ವಿಮಾನ ಖರೀದಿಗೆ ಕರಾರು ಮಾಡಿಕೊಂಡಿತು. ಪ್ರತಿ ವಿಮಾನಕ್ಕೆ 1670 ಕೋಟಿ ರೂ ದರ ನಿಗದಿ ಮಾಡಿಕೊಂಡಿತು. ಇದರಿಂದಾಗಿ ದೇಶಕ್ಕೆ 41,000 ಕೋಟಿ ರೂ ನಷ್ಠವಾಗಿದೆ ಎಂದು ಅಲ್ಕಾ ಆರೋಪಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪ್ರದೇಶಾಧ್ಯಕ್ಷ ಗಿರೀಶ್ ಚೋಡಣಕರ್, ಸಂಕಲ್ಪ ಅಮೋಣಕರ್ ಉಪಸ್ಥಿತರಿದ್ದರು.