ಬೆಂಗಳೂರು: ಐಟಿ ಇಲಾಖೆ ಅಧಿಕಾರಿಯ ಮಗನ ಅಪಹರಣ ಮತ್ತು ಕೊಲೆ ಪ್ರಕರಣದ ನಾಲ್ಕನೇ ಆರೋಪಿಗೆ ಹೈಕೋರ್ಟ್ ಗುರುವಾರ ಷರತ್ತುಬದ್ಧ ಜಾಮೀನು ನೀಡಿದೆ.
ಜಾಮೀನು ಕೋರಿ ಮಂಗಳೂರು ಮೂಲದ ಕಿರಣ್ ಪೈ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಬಿ.ಎ. ಪಾಟೀಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿದ್ದು, ಷರತ್ತು ಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.
ಆರೋಪಿಯು 2ಲಕ್ಷ ರೂ. ಮೊತ್ತದ ಬಾಂಡ್ ನೀಡಬೇಕು. ಪೂರ್ವಾನುಮತಿ ಇಲ್ಲದೆ ವಿಚಾರಣಾ ನ್ಯಾಯಾಲಯದ ವ್ಯಾಪ್ತಿ ಬಿಟ್ಟು ಹೋಗಬಾರದು. ಪ್ರತಿ ತಿಂಗಳ ಮೊದಲ ತಾರೀಕಿಗೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಹಾಜರಾಗಿ ಸಹಿ ಹಾಕಬೇಕು ಎಂದು ನ್ಯಾಯಪೀಠ ಷರತ್ತು ವಿಧಿಸಿದೆ.
ಪ್ರಕರಣವೇನು?: ಆದಾಯ ತೆರಿಗೆ ಇಲಾಖೆಯ ಅಧಿಕಾರಿ ನಿರಂಜನ್ ಅವರ ಪುತ್ರ ಶರತ್ (19) ಅವರನ್ನು 2017ರ ಸೆಪ್ಟೆಂಬರ್ 12ರಂದು ಆರೋಪಿಗಳು ಅಪಹರಿಸಿದ್ದರು. ಬಿಡುಗಡೆ ಮಾಡಲು 50 ರೂ. ಲಕ್ಷ ನೀಡುವಂತೆ ಶರತ್ ತಂದೆಗೆ ಬೇಡಿಕೆ ಇರಿಸಿದ್ದರು.
ವಿಷಯ ಪೊಲೀಸರಿಗೆ ಗೊತ್ತಾಗಿದೆ ಎಂದು ತಿಳಿದು ಆರೋಪಿಗಳು ಕುತ್ತಿಗೆಗೆ ವೈರ್ ಬಿಗಿದು ಶರತ್‌ನನ್ನು ಕೊಲೆ ಮಾಡಿ ಶವವನ್ನು ರಾಮೋಹಳ್ಳಿ ಕೆರೆಯಲ್ಲಿ ಎಸೆದಿದ್ದರು ಎಂದು ಜ್ಞಾನಭಾರತಿ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಯಲ್ಲಿ ಹೇಳಿದ್ದಾರೆ.