Advertisement

Madhu Bangarappa, ಬೇಳೂರು ಧೋರಣೆಯನ್ನು ಖಂಡಿಸಿ ಕಾಂಗ್ರೆಸ್ ಪಕ್ಷದಿಂದ ನಿರ್ಗಮನ: ಹಕ್ರೆ

06:01 PM Apr 17, 2024 | Shreeram Nayak |

ಸಾಗರ: ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಧೋರಣೆಯನ್ನು ಖಂಡಿಸಿ ಕಾಂಗ್ರೆಸ್ ಪಕ್ಷವನ್ನು ತೊರೆದು ಬುಧವಾರ ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ ಅವರ ನೇತೃತ್ವದಲ್ಲಿ ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಗೊಳ್ಳುತ್ತಿರುವುದಾಗಿ ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮಲ್ಲಿಕಾರ್ಜುನ ಹಕ್ರೆ ತಿಳಿಸಿದ್ದಾರೆ.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ8 ಗಂಟೆಗೆ ಸಾಗರದ ಮಹಾಗಣಪತಿ ದೇವಸ್ಥಾನದಿಂದ ಸಾವಿರಾರು ಜನ ಅಭಿಮಾನಿಗಳು, ಕಾರ್ಯಕರ್ತರು, ಮುಖಂಡರು ವಾಹನ ಮೂಲಕ ಶಿವಮೊಗ್ಗಕ್ಕೆ ತೆರಳಿ ಅಲ್ಲಿ ಪಕ್ಷ ಸೇರ್ಪಡೆಯಾಗುತ್ತಿದ್ದೇವೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್, ಮಧು ಎದುರು ಬೇಳೂರು ನಮ್ಮನ್ನೆಲ್ಲಾ ಒಟ್ಟಿಗೆ ತೆಗೆದುಕೊಂಡು ಹೋಗುವ ಭರವಸೆ ನೀಡಿದ್ದರು. ಆದರೆ ಚುನಾವಣೆ ಗೆದ್ದ ನಂತರ ನನ್ನನ್ನು, ನನ್ನ ಬೆಂಬಲಿಗರನ್ನು ಮೂಲೆಗುಂಪು ಮಾಡುತ್ತಿದ್ದಾರೆ. ಹಿಂದೆ ಎರಡು ಬಾರಿ ಶಾಸಕರಾಗಿದ್ದ ಸಂದರ್ಭದಲ್ಲಿ ಸಹ ಹಿರಿಯರನ್ನು ಕಡೆಗಣಿಸುವ ಸಂಪ್ರದಾಯ ಅನುಸರಿಸಿಕೊಂಡು ಬಂದಿದ್ದರು. ಈ ಬಾರಿ ಸಹ ನನ್ನಂತಹ ಅನೇಕ ನಿಷ್ಠಾವಂತರನ್ನು ಕಡೆಗಣಿಸಿದ್ದಾರೆ. ಶಾಸಕರ ಈ ದುರಹಂಕಾರದ ನಡೆಯನ್ನು ಖಂಡಿಸಿ ಬಿಜೆಪಿ ಸೇರುತ್ತಿದ್ದೇವೆ ಎಂದರು.

ಕಳೆದ ಮೂರು ದಶಕಗಳಿಂದ ಎನ್‌ಎಸ್‌ಯುಐ, ಯುವ ಕಾಂಗ್ರೆಸ್, ಜಿಲ್ಲಾ ಕಾಂಗ್ರೆಸ್ ಸೇರಿದಂತೆ ಪಕ್ಷದ ವಿವಿಧ ಸ್ತರಗಳಲ್ಲಿ ಕೆಲಸ ಮಾಡಿ ಪಕ್ಷ ಸಂಘಟನೆ ಮಾಡಿದ್ದೇನೆ. ಅನಿವಾರ್ಯವಾಗಿ ಕಾಂಗ್ರೆಸ್‌ಗೆ ಗುಡ್‌ಬೈ ಹೇಳಲು ತೀರ ಬೇಸರ ಎನಿಸುತ್ತಿದೆ. ದೇಶದ ಹಿತದೃಷ್ಟಿಯಿಂದ, ನರೇಂದ್ರ ಮೋದಿಯವರ ಸಮರ್ಥ ನಾಯಕತ್ವವನ್ನು ಒಪ್ಪಿ, ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹಾಲಿ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಗೆಲ್ಲಿಸಬೇಕು ಎನ್ನುವ ಉದ್ದೇಶದಿಂದ ಬಿಜೆಪಿ ಸೇರುತ್ತಿದ್ದೇನೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜಕುಮಾರ್ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡುವಾಗ ಯಾರ ಅಭಿಪ್ರಾಯವನ್ನು ಕೇಳಿಲ್ಲ. ಸಚಿವ ಮಧು, ಶಾಸಕ ಗೋಪಾಲಕೃಷ್ಣ ಲೋಕಸಭಾ ಚುನಾವಣೆ ನಂತರ ನಿಷ್ಟಾವಂತರನ್ನು ಕಡೆಗಣಿಸಿದ್ದಕ್ಕೆ ಪಶ್ಚಾತಾಪ ಪಡುತ್ತಾರೆ ಎಂದು ಹೇಳಿದರು.

ನಾನು ಕಾಗೋಡು ತಿಮ್ಮಪ್ಪ ಅವರ ನಾಯಕತ್ವದಲ್ಲಿ ಕೆಲಸ ಮಾಡಿಕೊಂಡು ಬಂದವನು. ನನಗೆ ರಾಜಕೀಯ ಕ್ಷೇತ್ರದಲ್ಲಿ ಪ್ರೋತ್ಸಾಹ ನೀಡಿದವರು ಎಸ್. ಬಂಗಾರಪ್ಪ. ಆದರೆ ಬೇಳೂರು ಗೆದ್ದ ಮೇಲೆ ಕಾಂಗ್ರೆಸ್ ಪಕ್ಷದಲ್ಲಿ ಕಾಗೋಡು ತಿಮ್ಮಪ್ಪ ಅವರ ಮಾತಿಗೆ ಬೆಲೆ ಇಲ್ಲ. ಬೇಳೂರಿಗೆ ತಾಕತ್ತಿದ್ದರೆ ಕಾಂಗ್ರೆಸ್ ಪಕ್ಷದ ಹೆಸರು ಬಳಸದೆ ಗೆದ್ದು ಬರಲಿ ನೋಡೋಣ ಎಂದು ಸವಾಲು ಹಾಕಿದ ಹಕ್ರೆ, ಕ್ಷೇತ್ರವ್ಯಾಪ್ತಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸಾಮರ್ಥ್ಯಸೌಧದಲ್ಲಿ ಕೆಡಿಪಿ ಸಭೆ ನಡೆಸಬೇಕಾದ ಶಾಸಕರು ಪ್ರವಾಸಿ ಮಂದಿರದಲ್ಲಿ ಸಭೆ ನಡೆಸುತ್ತಿದ್ದಾರೆ. ಮರಳು ಮಾಫಿಯಾ ಮಿತಿಮೀರಿದ್ದು, ಮಾಸೂರಿನಲ್ಲಿರುವ ಮದ್ಯದಂಗಡಿ ಯಾರ ಹೆಸರಿನಲ್ಲಿ ನಡೆಯುತ್ತಿದೆ ಎನ್ನುವುದನ್ನು ಅವರೇ ಸ್ಪಷ್ಟಪಡಿಸಬೇಕು ಎಂದರು.

Advertisement

ಗೋಷ್ಠಿಯಲ್ಲಿ ಗಣಪತಿ ಹೆನಗೆರೆ, ನಾಗರಾಜ್ ಮಜ್ಜಿಗೆರೆ, ಅರುಣ್ ಪೂಜಾರಿ, ಸ್ವಾಮಿಗೌಡ, ಕೃಷ್ಣಮೂರ್ತಿ, ವೆಂಕಟೇಶ್ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next