ವಿಜಯಪುರ: ಕರ್ನಾಟಕ ಲೋಕಸೇವಾ ಆಯೋಗದ ಪ್ರಥಮ ದರ್ಜೆ ಸಹಾಯಕ ಹುದ್ದೆ ನೇಮಕಾತಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಖಂಡಿಸಿ ರವಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದ ಎಬಿವಿಪಿ ಕಾರ್ಯಕರ್ತರು ಸಮಗ್ರ ತನಿಖೆಗೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ನಗರದ ಮಹಾತ್ಮ ಗಾಂಧಿ ವೃತ್ತದಿಂದ ಡಾ| ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ಎಬಿವಿಪಿ ಕಾರ್ಯಕರ್ತರು, ಕೆಪಿಎಸ್‌ಸಿ ಆಡಳಿತ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಸಂಘಟನೆಯ ರಾಜ್ಯ ಸಹ ಕಾರ್ಯದರ್ಶಿ ಸಚಿನ ಕುಳಗೇರಿ ಮಾತನಾಡಿ, ಕೆಪಿಎಸ್‌ಸಿ ಸ್ಪರ್ಧಾತ್ಮಕ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗುವುದು ಇದೇ ಮೊದಲೇನಲ್ಲ. ಭ್ರಷ್ಟಾಚಾರದ ಮೂಲಕ ಇದೇ ರೀತಿ ಹಲವು ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆ ಎಂಬುದು ಸಾಮಾನ್ಯವಾಗಿದೆ. ಒಂದೇ ತಾಲೂಕಿನಿಂದ ಒಂದೇ ಪರೀಕ್ಷಾ ಕೇಂದ್ರಗಳಿಂದ ನಡೆಸುವ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು ಆಯ್ಕೆ ಆಗಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿ ಆಗಿದೆ.
ರಾಜ್ಯದಲ್ಲಿ ಇಂತಹ ಅಕ್ರಮಗಳು ಮತ್ತು ಭ್ರಷ್ಟಾಚಾರಗಳು ಕೆಪಿಎಸ್ಸಿಯಲ್ಲಿ ಮೇಲಿಂದ ಮೇಲೆ ನಡೆಯುತ್ತಿದ್ದರೂ ಕಡಿವಾಣ ಹಾಕುವ ಯಾವುದೇ ಉಪಾಯ ಕಂಡು ಹಿಡಿಯದ ಕೆಪಿಎಸ್‌ಸಿ ಕ್ರಮಕ್ಕೆ ಹೈಕೋರ್ಟ್ ಕೂಡ ಕಿಡಿ ಕಾರಿದೆ. ಇಂಥ ಹಂತದಲ್ಲೇ ಮತ್ತೆ ಪ್ರಶ್ನೆ ಪತ್ರಿಕೆಗಳು ಸೋರಿಕೆ ಆಗಿರುವುದು ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಮನೋಬಲ ಕುಗ್ಗಿಸಿ ಕೆಪಿಎಸ್ಸಿ ಮೇಲಿರುವ ಭರವಸೆಯನ್ನು ಕಳೆದುಕೊಳ್ಳುವಂತಾಗಿದೆ ಎಂದರು.
ಎಬಿವಿಪಿ ಹಾಸ್ಟೆಲ್ ಪ್ರಾಂತ ಸಹ ಪ್ರಮುಖ ನಿಂಗಣ್ಣ ಮನಗೂಳಿ ಮಾತನಾಡಿ, ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಅ ಧಿಕಾರಿಗಳು ತೊಡಸಿಕೊಂಡಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬರುತ್ತಿದೆ. ಪ್ರಶ್ನೆ ಪತ್ರಿಕೆ ಎಲ್ಲಿಂದ ಬಂತು, ಯಾರು ತಂದುಕೊಟ್ಟಿದ್ದಾರೆ. ಈ ಜಾಲದ ಹಿಂದೆ ಇನ್ನೂ ಯಾರ್ಯಾರಿದ್ದಾರೆ, ಇದರ ಹಿಂದಿರುವ ಕಾಣದ ಕೈಗಳು ಯಾವುದು ಎಂಬುದನ್ನು ಉನ್ನತ ಮಟ್ಟದ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಪರೀಕ್ಷೆಗಳಿಗೆ
ಸಂಬಂಧಪಟ್ಟ ಅವ್ಯವಹಾರಗಳು ಮತ್ತೂಮ್ಮೆ ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಆಗ್ರಹಿಸಿದರು.
ಎಬಿವಿಪಿ ಜಿಲ್ಲಾ ಸಂಚಾಲಕ ಬಸವರಾಜ ಪೂಜಾರಿ, ಸಿದ್ದು ಪತ್ತಾರ, ಐಶ್ವರ್ಯ ಕುಲಕರ್ಣಿ, ಸೃಷ್ಟಿ ಬಿರಾದಾರ, ಪಾಂಡು ಮೋರೆ, ಬಸವರಾಜ ಲಗಳಿ, ಮಹಾಂತೇಶ ಕಂಬಾರ, ಸಹನಾ ಬಿರಾದಾರ, ಕಿರಣ ಸಿಂಪಿ, ನಚಿಕೇತ, ಮನೋಜ್, ಸಂಗಮೇಶ, ಅಮಿತ್, ಶ್ರೀಧರ ಸೇರಿದಂತೆ ಇತರರು ಇದ್ದರು.