Advertisement

ಕಲಬುರ್ಗಿ ಹತ್ಯೆ ತನಿಖೆ ವಿಳಂಬಕೆ ಖಂಡನೆ

10:18 AM Aug 31, 2017 | Team Udayavani |

ಕಲಬುರಗಿ: ಸಾಂಸ್ಕೃತಿಕ ಚಿಂತಕ, ನೇರ ನುಡಿ, ನಿಷ್ಠುರವಾದಿ ಡಾ|ಎಂ.ಎಂ.ಕಲಬುರಗಿ ಹತ್ಯೆಯಾಗಿ ಎರಡು ವರ್ಷವಾದರೂ ಸರಕಾರಹತ್ಯೆಕೋರರನ್ನು ಬಂಧಿಸದೇ ಇರುವುದನ್ನು ಖಂಡಿಸಿ ಬುಧವಾರಸಂಜೆ ಪ್ರಗತಿಪರ ಸಂಘಟನೆಗಳ ಮುಖಂಡರು, ವಿದ್ಯಾರ್ಥಿಗಳು,ಹೋರಾಟಗಾರರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಪತ್ರ ಬರೆದು, ರಾಜ್ಯದಲ್ಲಿ ಪ್ರಜಾಪ್ರಭುತ್ವ ಇದೆಯೋ ಇಲ್ಲವೋ ಎನ್ನುವ ಅನುಮಾನ ಮೂಡಿಸಿದೆ. ನಿಜಕ್ಕೂ ಇದು ರಾಜ್ಯದ ಜನತೆ ತಲೆ ತಗ್ಗಿಸುವ ವಿಚಾರ. ಹತ್ಯೆಯಾಗಿ ಸೆ. 30ಕ್ಕೆ ಎರಡು ವರ್ಷವಾದರೂ, ಸರಕಾರ ಇನ್ನೂವರೆಗೂ ಹತ್ಯೆ ಮಾಡಿದವರನ್ನು ಬಂಧಿಸುವ, ಶಿಕ್ಷಿಸುವ ಧೈರ್ಯ ಮಾಡಿಲ್ಲ ಎನ್ನುವುದು ಖೇದಕರ ವಿಷಯವಾಗಿದೆಎಂದು ದೂರಿದ್ದಾರೆ.

Advertisement

ಭಾರತದಲ್ಲಿ ದಾಬೋಲ್ಕರ್‌, ಪನ್ಸಾರೆ ಅವರನ್ನು ಹತ್ಯೆ ಮಾಡಲಾಗಿದೆ. ಮಹಾರಾಷ್ಟ್ರದಲ್ಲೂ ಹತ್ಯೆಕೋರರನ್ನು ಬಂಧಿಸಿಲ್ಲ. ರಾಜ್ಯದಲ್ಲಿ ಕಲಬುರ್ಗಿ ಹತ್ಯೆ ಹಲವಾರು ಪ್ರಶ್ನೆ ಹುಟ್ಟು ಹಾಕಿದೆ. ಸಿದ್ದರಾಮಯ್ಯ ಸರಕಾರ ಈ ನಿಟ್ಟಿನಲ್ಲಿ ಸುಮ್ಮನಿರುವುದು ರಾಜ್ಯದ ಜನತೆಗೆ ಕ್ಷೇಮವಲ್ಲ. ಇದು ಪ್ರಜಾಪ್ರಭುತ್ವವನ್ನು ಅಣಕಿಸುತ್ತಿದೆ. ಅಲ್ಲದೆ, ಕೋಮುವಾದಿಗಳಿಗೆ ಉತ್ತರ ಕರ್ನಾಟಕ ಬಿಟ್ಟು ಕೊಡುವ ಎಲ್ಲಾ ಸನ್ನಿವೇಶಗಳು ಕಂಡು ಬರುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಹತ್ಯೆಕೋರರು ಸಿಗದೆ ಇರುವುದು ನೋಡಿದರೆ ಸರಕಾರ ಮೊಸಳೆ ಕಣ್ಣೀರು ಸುರಿಸುತ್ತಿದೆ. ಎರಡು ವರ್ಷವಾದರೂ ಒಂದು ಚಿಕ್ಕ ಸುಳಿವು ಸಿಕ್ಕಲ್ಲ ಎನ್ನುವುದಾದರೆ ಸರಕಾರ ಹಾಗೂ ಪೊಲೀಸ್‌ ಇಲಾಖೆ ಎಷ್ಟು ದೈನೇಸಿ ಸ್ಥಿತಿ ತಲುಪಿದೆ ಎನ್ನುವುದು ತಿಳಿಯುತ್ತದೆ. ಕಲಬುರ್ಗಿ ಹತ್ಯೆ ಒಬ್ಬ ವ್ಯಕ್ತಿಯ ಹತ್ಯೆಯಲ್ಲ. ಅದೊಂದು ತತ್ವದ, ಬಹು ಸಂಖ್ಯಾತರ ಸಂಸ್ಕೃತಿಯ ಮೇಲಿನ ದಾಳಿಯಾಗಿದೆ. ಒಂದು ಸತ್ಯದ, ಬೆಳಕಿನ ಹತ್ಯೆಯಾಗಿದೆ ಎಂದು ಪ್ರತಿಭಟನಾಕಾರರು
ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಕೆ.ನೀಲಾ, ಡಾ| ಮೀನಾಕ್ಷಿ ಬಾಳಿ, ರವೀಂದ್ರ ಶಾಬಾದಿ, ಕೆ.ಪ್ರಕಾಶ, ಡಾ| ಕಾಶಿನಾಥ ಅಂಬಲಗಿ,
ರಾಷ್ಟ್ರೀಯ ಬಸವದಳದ ಆರ್‌.ಜಿ. ಶೆಟಕಾರ್‌, ಉದ್ಯೋಗ ಖಾತ್ರಿ ಕಾರ್ಮಿಕ ಸಂಘಟನೆ ಡಾ| ಪ್ರಭು ಖಾನಾಪುರೆ. ಸುಮೇದ ಪ್ರಕಾಶನದ ದತ್ತಾತ್ರೇಯ ಇಕ್ಕಳಕಿ, ದಲಿತ ಸಂಘಟನೆಯ ಅರ್ಜುನ ಭದ್ರೆ, ಸೋಮಣ್ಣ ನಡಕಟ್ಟಿ , ದಕ್ಷಿಣಾಯನ, ಮಾನವ ಬಂಧತ್ವ ವೇದಿಕೆಯ ನಾಗೇಂದ್ರ ಜಾವಳಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next