Advertisement

ಪಠ್ಯ-ಪುಸ್ತಕ ಪರಿಷ್ಕರಣಾ ಸಮಿತಿ ನಿರ್ಧಾರಕ್ಕೆ ಖಂಡನೆ

06:32 PM May 21, 2022 | Team Udayavani |

ಗದಗ: ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ತೀರ್ಮಾನಗಳು ದೇಶದ ಸಮಗ್ರತೆ, ಸೌಹಾರ್ದತೆ ತತ್ವಗಳಿಗೆ ವ್ಯತಿರಿಕ್ತವಾಗಿದ್ದು, ತಕ್ಷಣ ಅಂತಹ ನಿರ್ಧಾರ ಕೈಬಿಡಬೇಕೆಂದು ಬಂಡಾಯ ಸಾಹಿತಿ ಬಸವರಾಜ ಸೂಳಿಭಾವಿ ಆಗ್ರಹಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 9 ಮತ್ತು 10 ನೇ ತರಗತಿ ಪಠ್ಯಕ್ರಮದಲ್ಲಿ ಭಾರೀ ಬದಲಾವಣೆ ತರಲಾಗುತ್ತಿದೆ. ದೇಶಕ್ಕಾಗಿ ತ್ಯಾಗ, ಬಲಿದಾನ ನೀಡಿರುವ ಮಹನೀಯರ ಅಧ್ಯಾಯಗಳನ್ನು ಕೈಬಿಡುವ ಹುನ್ನಾರ ನಡೆಸಿದೆ. ದೇಶ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಲು ಯುವಜನರಿಗೆ ಪ್ರೇರಣಾ ಶಕ್ತಿಯಾಗಿದ್ದ ಭಗತ್‌ ಸಿಂಗ್‌ರಂತಹ ಕ್ರಾಂತಿ ಚೇತನಗಳ ಅಧ್ಯಾಯಗಳನ್ನು ಕೈಬಿಡುವ ಬಗ್ಗೆ ಪಠ್ಯ ಪರಿಷ್ಕರಣಾ ಸಮಿತಿಯಿಂದಲೇ ಪ್ರಸ್ತಾಪಿಸಪಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭಗತ್‌ ಸಿಂಗ್‌, ನಾರಾಯಣಗುರು ಪೆರಿಯಾರ್‌, ಸಾರಾ ಅಬೂಬಕರ್‌ ಅವರ ಕುರಿತಾದ ಪಾಠಗಳನ್ನು ತೆಗೆದು ಹಾಕಿ, ಆರ್‌ಎಸ್‌ಎಸ್‌ ಸಂಸ್ಥಾಪಕರಲ್ಲಿ ಒಬ್ಬರಾದ ಕೇಶವ ಹೆಡಗೆವಾರ್‌ ಅವರ ಭಾಷಣಗಳನ್ನು ಸೇರ್ಪಡೆಗೊಳಿಸುತ್ತಿರುವುದು ಸರಿಯಲ್ಲ ಎಂದು ಎಚ್ಚರಿಸಿದರು.

ಬಸವ ಅನುಯಾಯಿ ನಿವೃತ್ತ ಇಂಜಿನಿಯರ್‌ ಅಶೋಕ ಬರಗುಂಡಿ ಮಾತನಾಡಿ, 12ನೇ ಶತಮಾನದಲ್ಲಿ ಸಮ ಸಮಾಜ ನಿರ್ಮಾಣಕ್ಕೆ ಕಾರಣರಾದ ವಿಶ್ವಗುರು ಬಸವಣ್ಣನೇ ಈ ದೇಶದ ಲೋಕತಂತ್ರದ ದೇಗುಲ ಸಂಸತ್ತಿಗೆ ಅಡಿಪಾಯ ಹಾಕಿದ್ದಾರೆ ಎಂದು ಪ್ರಧಾನಿ ಮೋದಿ ಬಣ್ಣಿಸುತ್ತಾರೆ. ಮತ್ತೊಂದೆಡೆ ಅವರದ್ದೇ ಪಕ್ಷ ಆಡಳಿತದಲ್ಲಿರುವ ಕರ್ನಾಟಕದಲ್ಲಿ ಬಸವಣ್ಣನ ಅಧ್ಯಾಯವನ್ನೂ ಕೈಬಿಡುವ ದುಸ್ಸಾಹಸ ನಡೆದಿದೆ. ಈ ಮೂಲಕ ಜನಮಾನಸದಿಂದ ಶರಣರು, ಅವರ ವಚನಗಳನ್ನು ದೂರ ಮಾಡುವ ಪ್ರಯತ್ನ ನಡೆದಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಬಸವಣ್ಣ ಹಾಗೂ ಶರಣರ ವಚನಗನ್ನು ಪಠ್ಯದಿಂದ ಕೈಬಿಟ್ಟಲ್ಲಿ ರಾಜ್ಯಾದ್ಯಂತ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಕಾರ್ಯದರ್ಶಿ ಶೇಖಣ್ಣ ಕವಳಿಕಾಯಿ, ಮುತ್ತು ಬಿಳಿಯಲಿ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next