Advertisement

ಕಲಾವಿದರ ಮೇಲೆ ದಬ್ಬಾಳಿಕೆಗೆ ಖಂಡನೆ; ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮನವಿ

01:17 AM Mar 19, 2024 | Team Udayavani |

ಮಂಗಳೂರು: ನಾಟಕ, ಯಕ್ಷಗಾನ, ಸಿನೆಮಾ ಕ್ಷೇತ್ರಗಳ ಕಲಾವಿದರ ಮೇಲೆ ಕೆಲವರಿಂದ ದಬ್ಬಾಳಿಕೆ, ದೌರ್ಜನ್ಯ ನಡೆಯುತ್ತಿರುವುದು ಖಂಡನೀಯ ಎಂದು ಆರೋಪಿಸಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯ ಕಲಾವಿದರು ಸೋಮವಾರ ದ.ಕ. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Advertisement

ತುಳು ನಾಟಕ ಕಲಾವಿದರ ಒಕ್ಕೂಟದ ಆಶ್ರಯದಲ್ಲಿ ಕರಾವಳಿ ಜಿಲ್ಲೆಯ ಜಿಲ್ಲಾ ರಂಗ ಸಮ್ಮಿಲನ ವೇದಿಕೆ, ಕೋಸ್ಟಲ್‌ವುಡ್‌ ಕಲಾವಿದರ ಮತ್ತು ತಂತ್ರಜ್ಞಾನ ಸಹಕಾರಿ ಒಕ್ಕೂಟ, ಕರಾವಳಿ ಚಲನಚಿತ್ರ ಹಾಗೂ ಯಕ್ಷಗಾನ ಕಲಾವಿದರ ನೇತೃತ್ವದಲ್ಲಿ ಮಂಗಳೂರಿನ ಡಾನ್‌ಬಾಸ್ಕೋ ಸಭಾಂಗಣದಲ್ಲಿ ಒಟ್ಟು ಸೇರಿದ 500ಕ್ಕೂ ಅಧಿಕ ಕಲಾವಿದರು ಮಹತ್ವದ ಸಭೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕರಾವಳಿಯ ಯಾವುದೇ ಯಕ್ಷಗಾನ, ನಾಟಕ ಅಥವಾ ಸಿನೆಮಾ ತಂಡವೂ ದೇವರು-ದೈವವನ್ನು ಅಥವಾ ಯಾವುದೇ ಆರಾಧನಾ ಕ್ರಮವನ್ನು ಹೀಯಾಳಿಸದೆ, ಅದರ ಮಹತ್ವವನ್ನು ಸಾರುವ ಅಪರೂಪದ ಕಥೆಗಳನ್ನು ಪ್ರದರ್ಶನದಲ್ಲಿ ಕೊಡುತ್ತಿದೆ. ಆರಾಧನೆಯ ಪಾವಿತ್ರ್ಯಕ್ಕೆ ಭಂಗ ತರುವಂತಹ ಯಾವುದೇ ದೃಶ್ಯ ಅಥವಾ ಸಂಭಾಷಣೆಯನ್ನೂ ನಾಟಕ ತಂಡಗಳು ಮಾಡುತ್ತಿಲ್ಲ. ಆದರೆ ಇತ್ತೀಚೆಗೆ ಕೆಲವರು ನಾಟಕವನ್ನು ನೋಡದೆ ಕೇವಲ ನಾಟಕದ ಶೀರ್ಷಿಕೆ ನೋಡಿ ನಾಟಕ-ಕಲಾವಿದರ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆ. ಕೆಲವರ ಕುಮ್ಮಕ್ಕಿನಿಂದ ಕೆಲವು ಸಂಘಟನೆಯವರು ಕಲಾತಂಡಗಳ ಮೇಲೆ ಸವಾರಿ ಮಾಡುವ ಹಾಗೂ ಅನಾವಶ್ಯಕ ತೊಂದರೆ ನೀಡುವ ಘಟನೆ ನಡೆಯುತ್ತಿದೆ ಎಂದು ಮನವಿಯಲ್ಲಿ ದೂರಲಾಗಿದೆ.

ಕರಾವಳಿಯಲ್ಲಿ 1,700ಕ್ಕೂ ಅಧಿಕ ಕಲಾವಿದರು, 40ಕ್ಕೂ ಹೆಚ್ಚು ತಂಡಗಳಿದ್ದು ನೂರಾರು ಕುಟುಂಬಗಳು ಇದರ ಆದಾಯ ಮೂಲವನ್ನೇ ನಂಬಿಕೊಂಡಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಪ್ರಮುಖರಾದ ಕಿಶೋರ್‌ ಡಿ. ಶೆಟ್ಟಿ, ದೇವದಾಸ್‌ ಕಾಪಿಕಾಡ್‌, ವಿಜಯಕುಮಾರ್‌ ಕೊಡಿಯಾಲ್‌ಬೈಲ್‌, ಲಕ್ಷ್ಮಣ್‌ ಕುಮಾರ್‌ ಮಲ್ಲೂರು, ಅಶೋಕ್‌ ಶೆಟ್ಟಿ ಸರಪಾಡಿ, ಮಧು ಬಂಗೇರ ಕಲ್ಲಡ್ಕ, ಪ್ರಕಾಶ್‌ ಶೆಟ್ಟಿ ಧರ್ಮನಗರ, ಕೃಷ್ಣ ಜಿ.ಮಂಜೇಶ್ವರ, ತಮ್ಮ ಲಕ್ಷ್ಮಣ, ಕೆ.ಕೆ. ಗಟ್ಟಿ, ಜಗನ್‌ ಪವಾರ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next