ಮಾಲೂರು: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೂರುನಾಲ್ಕು ವರ್ಷಗಳಿಂದ ದುಡಿಯುತ್ತಿರುವ ಎಂಟು ಹೊರಗುತ್ತಿಗೆ ನೌಕರರನ್ನು ಸೇವೆಯಿಂದ ವಜಾ ಮಾಡಿರುವ ಕ್ರಮ ಖಂಡಿಸಿ ನೌಕರರು ದಲಿತ ಸಂಘಟನೆಗಳ ಜೊತೆ ಪ್ರತಿಭಟನೆ ನಡೆಸಿದರು.
ತಾಲೂಕಿನ 100 ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆಗೆ ಡಿ.ಗ್ರೂಪ್ ಮತ್ತು ಸ್ವಚ್ಛತೆಗಾಗಿ 31 ಮಂದಿಯನ್ನು ನಾಲ್ಕು ವರ್ಷಗಳ ಹಿಂದೆ ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿ ಸರ್ಕಾರ ಅದೇಶ ಹೊರಡಿಸಿತ್ತು. ಪಾಳಿಯಂತೆ ಕೆಲಸ ಮಾಡುತ್ತಿದ್ದ ಸಿಬ್ಬಂದಿಯ ಪೈಕಿ ಎಂಟು ಮಂದಿಯನ್ನು ಸೇವೆಯಿಂದ ವಜಾ ಮಾಡಲು ಮುಂದಾಗಿರುವ ಕ್ರಮ ಖಂಡಿಸಿ, ತಾಲೂಕಿನ ದಲಿತ ಸಂಘಟನೆಗಳ ನೇತೃತ್ವದಲ್ಲಿ ಆಸ್ಪತ್ರೆ ಎದುರು ನೌಕರರು ಹೋರಾಟ ನಡೆಸಿದರು.
ಸೇವೆಗೆ ಹಾಜರಾಗಲು ಮನವಿ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಅಡಳಿತ ವೈದ್ಯಾಧಿಕಾರಿ ಡಾ.ವಸಂತ್‌ಕುಮಾರ್ ಮಾತನಾಡಿ, ಮಾಲೂರು ಆಸ್ಪತ್ರೆಯಲ್ಲಿ ಸ್ವಚ್ಛತಾ ಸಿಬ್ಬಂದಿಯ ಅಗತ್ಯತೆ ಇದೆ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳು ಮತ್ತು ಇಲಾಖೆ ನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿದೆ. ನೌಕರರ ಸೇವೆ ಮುಂದುವರಿಸುವಂತೆ ಕ್ಷೇತ್ರದ ಶಾಸಕರಿಗೂ ಮನವಿ ಮಾಡಲಾಗಿದೆ. ಪ್ರತಿಭಟನೆ ನಿಲ್ಲಿಸಿ ಸೇವೆಗೆ ಹಾಜಗುವಂತೆ ಮನವಿ ಮಾಡಿದರು.
ಜಿಲ್ಲಾ ಮಟ್ಟದಲ್ಲಿ ಟೆಂಡರ್ ಕರೆದು ಸೇವೆ ಮುಂದುವರಿಕೆ: ಆದರೂ ಸ್ಥಳಕ್ಕೆ ಜಿಲ್ಲಾ ಆರೋಗ್ಯಾಧಿಕಾರಿಗಳು ಬರುವವರೆಗೂ ಹೋರಾಟ ಕೈಬಿಡಲ್ಲ ಎಂದು ಪಟ್ಟು ಹಿಡಿದರು. ನಂತರ ಅಧಿಕಾರಿ ಡಾ.ವಿಜಯಕುಮಾರ್ ಸ್ಥಳಕ್ಕೆ ಆಗಮಿಸಿ ಸರ್ಕಾರದ ನಿಯಮದಂತೆ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಶೇ.25 ಉದ್ಯೋಗಗಳನ್ನು ಕಡಿತಗೊಳಿಸಬೇಕಿದೆ. ಅದರೆ, ಆಸ್ಪತ್ರೆಯಲ್ಲಿ ಹೆಚ್ಚುವರಿ ನೌಕರರ ಅಗತ್ಯ ಇರುವ ಕಾರಣ, ಜಿಲ್ಲಾ ಮಟ್ಟದಲ್ಲಿಯೇ ಟೆಂಡರ್ ಕರೆದು ಸೇವೆ ಮುಂದುವರಿಸಲು ಕ್ರಮವಹಿಸಲಾಗಿದೆ ಎಂದರು.
ಈ ಬಾರಿಯೂ ಯಾವುದೇ ನೌಕರರನ್ನು ಸೇವೆಯಿಂದ ವಜಾಗೊಳಿಸದೇ, ಸ್ಥಳೀಯ ಶಾಸಕರ ಸಮ್ಮುಖದಲ್ಲಿ ಜಿಲ್ಲಾ ಪಂಚಾಯ್ತಿ ಅನುಮತಿ ಮೇರೆಗೆ ಹೊರಗುತ್ತಿಗೆ ಟೆಂಡರ್ ಕರೆಯುವಂತೆ ತಾಲೂಕು ಅಧಿಕಾರಿಗಳಿಗೆ ಸೂಚಿಸಿದರು.
ವೈದ್ಯರ ಹುದ್ದೆ ಭರ್ತಿ ಮಾಡಿ: ಪ್ರತಿಭಟನೆಯ ನೇತೃತ್ವ ವಹಿಸಿದ್ದ ದಲಿತ ಸಿಂಹ ಸೇನೆಯ ರಾಜ್ಯಾಧ್ಯಕ್ಷ ತಿಪ್ಪಸಂದ್ರ ಶ್ರೀನಿವಾಸ್ ಮಾತನಾಡಿ, ತಾಲೂಕಿನ ಬಡಜನತೆಯ ಪಾಲಿಗೆ ಸಾರ್ವಜನಿಕ ಆಸ್ಪತ್ರೆಯೇ ಆಧಾರವಾಗಿದೆ. ಇಲ್ಲಿ ಉತ್ತಮ ವೈದ್ಯರು ಇದ್ದಾರೆ. ಮೂಳೆ, ಪ್ರಸೂತಿ ತಜ್ಞರ ಕೊರತೆ ಇದೆ. ಈ ಕೂಡಲೇ ಖಾಲಿ ವೈದ್ಯರ ಹುದ್ದೆ ಭರ್ತಿ ಮಾಡುವಂತೆ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಕೆ.ಎಂ.ಸಂದೇಶ್, ಸುರೇಶ್, ಸಿದ್ದಿಕ್, ಹೇಮಂತ್, ನರಸಿಂಹಮೂರ್ತಿ, ತಿಮ್ಮರಾಯಪ್ಪ, ಚಂದ್ರಕಲಾ ಮತ್ತಿತರರು ಇದ್ದರು.