Advertisement

ಅಲ್ಪಸಂಖ್ಯಾತರು, ದಲಿತರ ಮೇಲೆ ಹಲ್ಲೆಗೆ ಖಂಡನೆ

06:45 AM Jul 06, 2019 | Team Udayavani |

ಶಿಡ್ಲಘಟ್ಟ: ದೇಶಾದ್ಯಂತ ಮತೀಯ ಶಕ್ತಿಗಳು, ಅಲ್ಪಸಂಖ್ಯಾತರ ಮತ್ತು ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಹಾಗೂ ಈ ಸಮುದಾಯಗಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ವಿವಿಧ ಸಂಘಟನೆಗಳ ಸದಸ್ಯರು ನಗರದಲ್ಲಿ ಶುಕ್ರವಾರ ಬೃಹತ್‌ ಪ್ರತಿಭಟನೆ ನಡೆಸಿದರು.

Advertisement

ನಗರದ ಜಾಮೀಯಾ ಮಸೀದಿಯಿಂದ ಮೆರವಣಿಗೆ ನಡೆಸಿದ ಮುಸ್ಲಿಮರು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಬಲವಂತವಾಗಿ ಜೈಶ್ರೀರಾಮ್‌ ಘೋಷಣೆ: ದೇಶದ ಪವಿತ್ರ ಸ್ಥಳವೆಂದು ಗುರುತಿಸಿರುವ ಲೋಕಸಭೆಯಲ್ಲಿ ಧಾರ್ಮಿಕ ಭಾವನೆಗಳು ಕೆರಳಿಸುವಂತಹ ಧರ್ಮೀಯ ಘೋಷಣೆಗಳನ್ನು ಕೂಗಿ ಪವಿತ್ರ ಸ್ಥಾನಕ್ಕೆ ಅಗೌರವ ತರುವ ಕೆಲಸ ಮಾಡುತ್ತಿದ್ದಾರೆ.

ಜಾರ್ಖಂಡ್‌ನ‌ಲ್ಲಿ ಜೈಶ್ರೀ ರಾಮ್‌ ಮತ್ತು ಜೈ ಹನುಮಾನ ಎಂದು ಬಲವಂತವಾಗಿ ಹೇಳಿಸುವ ಮೂಲಕ ತಬ್ರೇಜ್‌ ಅನ್ಸಾರಿ ಎಂಬ ಯುವಕನ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿದರು. ಇಂತಹ ಆತಂಕಕಾರಿ ಘಟನೆ ನಡೆದರೂ ಕೇಂದ್ರ ಸರ್ಕಾರ ಯಾವುದೇ ರೀತಿಯ ಕ್ರಮ ಜರುಗಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕ್ರಮ ಜರುಗಿಸಲು ನಿರ್ಲಕ್ಷ್ಯ: ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ದಲಿತ ಯುವಕ ದೇವಸ್ಥಾನದಲ್ಲಿ ಪ್ರವೇಶ ಮಾಡಿದ ವಿಚಾರವನ್ನು ಮುಂದಿಟ್ಟುಕೊಂಡು ಆತನನ್ನು ಅರೆಬೆತ್ತಲೆ ಮಾಡಿ ಮೆರವಣಿಗೆ ನಡೆಸಿದ್ದಾರೆ. ದೇಶಾದ್ಯಂತ ಮುಸ್ಲಿಮರು ಮತ್ತು ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದ್ದರೂ ಸಹ ಕೇಂದ್ರ ಸರ್ಕಾರ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಲು ನಿರ್ಲಕ್ಷ್ಯ ವಹಿಸಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

Advertisement

ಭಾರತೀಯ ಜನತಾ ಪಾರ್ಟಿಯ ಮುಖಂಡರೊಬ್ಬರು ಮುಸ್ಲಿಂ ಸಮುದಾಯದ ಮಹಿಳೆಯರನ್ನು ಮನೆಯಿಂದ ಹೊರಗಡೆ ಕರೆದೊಯ್ದು ಅತ್ಯಾಚಾರ ಮಾಡಬೇಕೆಂದು ಬಹಿರಂಗವಾಗಿ ಹೇಳಿಕೆ ನೀಡಿ ಆತಂಕ ಸೃಷ್ಟಿಸುವ ಕೆಲಸ ಮಾಡಿದರೂ ಸಹ ಕೇಂದ್ರ ಸರ್ಕಾರ ಮೌನ ವಹಿಸಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ರಾಷ್ಟ್ರಪತಿಗಳು ದೇಶದಲ್ಲಿ ದಲಿತರು-ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಜಾಮೀಯಾ ಮಸೀದಿಯ ಪದಾಧಿಕಾರಿಗಳು, ಮದೀನಾ ಮಸೀದಿಯ ಪದಾಧಿಕಾರಿಗಳು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿ ತಹಶೀಲ್ದಾರ್‌ ಮೂಲಕ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next