Advertisement

ಕಮಾಂಡೋ ಬಂಧನಕ್ಕೆ ವ್ಯಾಪಕ ಖಂಡನೆ

09:11 AM Apr 28, 2020 | mahesh |

ಬೆಳಗಾವಿ: ಮಾಸ್ಕ್ ಧರಿಸಿಲ್ಲ ಎಂಬ ಕಾರಣಕ್ಕೆಸಿಆರ್‌ಪಿಎಫ್‌ ಕೋಬ್ರಾ ವಿಂಗ್‌ ಕಮಾಂಡೋ ಹಾಗೂ ಪೊಲೀಸರ ಮಧ್ಯೆ ನಡೆದ ಜಟಾಪಟಿ ಚರ್ಚೆಗೆ ಗ್ರಾಸವಾಗಿದೆ. ಪೊಲೀಸರ ನಡೆಗೆ ಸಿಆರ್‌ ಪಿಎಫ್‌ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದರೆ ಯೋಧನನ್ನು ವಿಚಾರಣೆ ಮಾಡದೆ ಜೈಲಿಗಟ್ಟಿರುವುದನ್ನು ಬಿಜೆಪಿ ಸಚಿವರು ಖಂಡಿಸಿದ್ದಾರೆ.

Advertisement

ಯೋಧನ ಮೇಲೆ ಪೊಲೀಸರ ವರ್ತನೆ ಬಗ್ಗೆ ಅಸಮಾಧಾನ ತೋರ್ಪಡಿಸಿರುವ ಸಿಆರ್‌ಪಿಎಫ್‌ ಅಧಿಕಾರಿಗಳು ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಪತ್ರ ಬರೆದು ಘಟನೆಯ
ಬಗ್ಗೆ ಖಂಡನೆ ವ್ಯಕ್ತಪಡಿಸಿ, ಪೊಲೀಸರ ಈ ಕ್ರಮವನ್ನು ಪ್ರಶ್ನೆ ಮಾಡಿದ್ದಾರೆ. ಸಚಿನ್‌ ಸಾವಂತ ದಕ್ಷ ಕಮಾಂಡೋ. ದೇಶ ರಕ್ಷಣೆಯಲ್ಲಿ ಸಂಪೂರ್ಣ ತೊಡಗಿಕೊಂಡು ಅನೇಕ ಅಪಾಯಕಾರಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ. ಹೀಗಿರುವಾಗ ರಾಜ್ಯದ ಪೊಲೀಸರು ಅವರ ವಿರುದ್ಧ ನಡೆದುಕೊಂಡ ರೀತಿ ವಿಷಾದ ಉಂಟುಮಾಡಿದೆ ಎಂದು ಸಿಆರ್‌ಪಿಎಫ್‌ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಕರಣ ತೀವ್ರ ವಿವಾದ ಹುಟ್ಟುಹಾಕಿದ ಬೆನ್ನಲ್ಲೇ ಜಿಲ್ಲಾ ಪೊಲೀಸರು ಘಟನೆ ಸಮರ್ಥಿಸಿಕೊಂಡಿರುವುದು ಚರ್ಚೆಗೆ ಎಡೆಮಾಡಿಕೊಟ್ಟಿದೆ. ಇನ್ನೊಂದೆಡೆ ಪೊಲೀಸರ ಕ್ರಮ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ಹುಟ್ಟುಹಾಕಿದೆ.

ಘಟನೆಯ ಸಾರಾಂಶ: ಸಿಆರ್‌ಪಿಆಫ್‌ ಕಮಾಂಡೋ ಬೆಟಾಲಿಯನ್‌ ಫಾರ್‌ ರಿಸೋಲ್ಯೂಟ ಆ್ಯಕ್ಷನ್‌ ವಿಭಾಗದ ಕಮಾಂಡೋ ಸಚಿನ್‌ ಸಾವಂತ ಏ.23ರಂದು ರಜೆಯ ಮೇಲೆ ಊರಿಗೆ ಬಂದಿದ್ದರು. ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಮನೆ ಮುಂದೆ ನಿಂತಿದ್ದ ಸಚಿನ್‌ ಹಾಗೂ ಸದಲಗಾ ಠಾಣೆಯ ಇಬ್ಬರು ಪೇದೆಗಳ ಮಧ್ಯೆ ಮಾರಾಮಾರಿ ನಡೆದಿತ್ತು. ಕೊರೊನಾ ವೈರಸ್‌ ತಡೆಗೆ ಮಾಸ್ಕ್ ಧರಿಸಿಲ್ಲ ಎಂಬ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಕೈ-ಕೈ ಮಿಲಾಯಿಸಿದ್ದರು. ಇದನ್ನು ಗಂಭೀರವಾಗಿ ತೆಗೆದುಕೊಂಡ ಜಿಲ್ಲಾ ಪೊಲೀಸರು ಯೋಧನ ವಿರುದ್ಧ ಪ್ರಕರಣ ದಾಖಲಿಸಿದ್ದಲ್ಲದೆ ಬಂಧಿಸಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ. ಬೆನ್ನಲ್ಲೇ ಠಾಣೆಗೆ ಕರೆದೊಯ್ದು ಕೈಗೆ ಕೋಳ ಹಾಕಿ ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ ಎನ್ನಲಾದ ಫೋಟೊ ಮತ್ತು ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಕಮಾಂಡೋ ಅನ್ನು ಸಾಮಾನ್ಯ ಅಪರಾಧಿಯಂತೆ ಕೈಗೆ ಕೋಳ ತೊಡಿಸಿ ಠಾಣೆಯಲ್ಲಿ ಕೂರಿಸಿರುವುದಕ್ಕೆ ಎಲ್ಲೆಡೆ
ವಿರೋಧ ವ್ಯಕ್ತವಾಗುತ್ತಿದೆ. ಏತನ್ಮಧ್ಯೆ, ಸಿಆರ್‌ಪಿಎಫ್‌ ಅಧಿಕಾರಿಗಳು, ಸೋಮವಾರ ಚಿಕ್ಕೋಡಿ ಡಿವೈಎಸ್‌ಪಿ ಕಚೇರಿಗೆ ಭೇಟಿ ನೀಡಿ ಸಚಿನ್‌ ಮೇಲೆ ವಿಧಿಸಿರುವ ಮೊಕದ್ದಮೆಗಳ ಮಾಹಿತಿ ಪಡೆದಿದ್ದಾರೆ. ಏ.28ರಂದು ಜಾಮೀನು ಸಿಗುವ ಸಾಧ್ಯತೆ ಇದೆ. ಜಾಮೀನು ಸಿಕ್ಕ ತಕ್ಷಣ ಯೋಧ ಸೇವೆಗೆ ಸನ್ನದ್ಧರಾಗಲಿದ್ದಾರೆ ಎಂದು ಬೆಳಗಾವಿಯ ಸಿಆರ್‌ಪಿಎಫ್‌ ಹಿರಿಯ ಅಧಿಕಾರಿ
“ಉದಯವಾಣಿ’ಗೆ ತಿಳಿಸಿದ್ದಾರೆ.

ಪೊಲೀಸರ ನಡೆಯನ್ನು ತೀವ್ರವಾಗಿ  ಖಂಡಿಸಿರುವ ಸಿಆರ್‌ಪಿಎಫ್‌ ಅಧಿಕಾರಿ ಸಂಜಯ ಅರೋರಾ ಅವರು, ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ ಸೂದ್‌ ಅವರಿಗೆ ಪತ್ರ ಬರೆದು ಸಿಆರ್‌ಪಿಎಫ್‌ ಕೋಬ್ರಾ ವಿಂಗ್‌ ಕಮಾಂಡೋ ಮೇಲೆ ನಡೆಸಿರುವ ಹಲ್ಲೆ ಅಮಾನವೀಯವಾಗಿದೆ. ಸಿಆರ್‌ಪಿಎಫ್‌ ಕೂಡ ದೇಶದ ಪ್ರತಿಷ್ಠಿತ ರಕ್ಷಣಾ ಪಡೆ ಆಗಿದೆ. ಯೋಧನ ಮೇಲೆ ಪೊಲೀಸರು ನಡೆಸಿರುವ ಹಲ್ಲೆ ಖಂಡನೀಯ. ಜತೆಗೆ ಎಫ್‌ಐಆರ್‌ ದಾಖಲಿಸುವ ಮುನ್ನ ನಮ್ಮ ಅಧಿಕಾರಿಗಳನ್ನು ಸಂಪರ್ಕಿಸಬೇಕಾಗಿತ್ತು. ಆದರೆ ಈ ರೀತಿ ಮಾಡದೇ ಇರುವುದು ನೋವಿನ ಸಂಗತಿ. ಪೊಲೀಸರು ಬಹಳ ಹೀನಾಯವಾಗಿ ನಡೆದುಕೊಂಡಿದ್ದಾರೆ. ಇದೆಲ್ಲವನ್ನು ಕೂಡಲೇ ಗಮನಿಸುವಂತೆ ಪತ್ರ ಬರೆದಿದ್ದಾರೆ.

ನಿಯಮ ಉಲ್ಲಂಘಿಸದಂತೆ ಪೊಲೀಸರು ಹೇಳಿದಾಗ ಸಚಿನ್‌ ಪೇದೆಯೊಬ್ಬರ ಕೊರಳು ಪಟ್ಟಿ ಹಿಡಿದು ಹಲ್ಲೆ ನಡೆಸಿದ್ದಾರೆ. ಕರ್ತವ್ಯ ನಿರತ ಪೇದೆಗಳ ಮೇಲೆ ಹಲ್ಲೆ ನಡೆಸಿದ್ದಕ್ಕೆ ಬಂಧಿಸಲಾಗಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಅಪೂರ್ಣ ವಿಡಿಯೋ ಹರಿದಾಡುತ್ತಿದೆ. ಪೂರ್ತಿ ವಿಡಿಯೋ ನೋಡಿದರೆ ಘಟನೆಯ ಮಾಹಿತಿ ಅರ್ಥವಾಗುತ್ತದೆ. ಕಾನೂನು ಪ್ರಕಾರವೇ ನಾವು ಕ್ರಮ ಕೈಗೊಂಡಿದ್ದೇವೆ. 
● ಲಕ್ಷ್ಮಣ ನಿಂಬರಗಿ, ಎಸ್‌ಪಿ ಬೆಳಗಾವಿ

Advertisement

ಮನೆಯ ಮುಂದೆ ವಾಹನ ತೊಳೆಯುತ್ತಿದ್ದ ಯೋಧನನ್ನು ಕೇವಲ ಮಾಸ್ಕ್ ಧರಿಸಿಲ್ಲ ಎನ್ನುವ ಕಾರಣಕ್ಕೆ ಬಂಧಿಸಿರುವುದು ಖಂಡನೀಯ. ಕೈದಿಯಂತೆ ಕೈಕೋಳ ತೊಡಿಸಿ ಬಂಧಿಸಿ ರುವುದನ್ನು ಯಾವುದೇ ಕಾರಣಕ್ಕೂ ಸಮರ್ಥನೆ ಮಾಡಲು ಸಾಧ್ಯವಿಲ್ಲ.
● ರಮೇಶ ಜಾರಕಿಹೊಳಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next