Advertisement

ಎಂಜಿನಿಯರಿಂಗ್‌ ಶುಲ್ಕ ಹೆಚ್ಚಳಕ್ಕೆ ಖಂಡನೆ

05:57 PM Nov 18, 2021 | Team Udayavani |

ಬಾಗಲಕೋಟೆ: ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಡಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಶುಲ್ಕ ಹೆಚ್ಚಳ ಮಾಡಿದ ಸರ್ಕಾರದ ಕ್ರಮ ಖಂಡಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿದರು.

Advertisement

ಪ್ರತಿಭಟನೆಯಲ್ಲಿ ಎಬಿವಿಪಿ ಕರ್ನಾಟಕ ರಾಜ್ಯ ಹಾಸ್ಟೆಲ್‌ ಪ್ರಮುಖ ಪ್ರಕಾಶ್‌ ಪೂಜಾರ ಮಾತನಾಡಿ, ಕೋವಿಡ್‌ ಹಿನ್ನೆಲೆಯಲ್ಲಿ ಖಾಸಗಿ ಕಾಲೇಜುಗಳ ಎಂಜಿನಿಯರಿಂಗ್‌ ಕೋರ್ಸಿನ ಶುಲ್ಕದಲ್ಲಿ ಯಾವುದೇ ಹೆಚ್ಚಳ ಮಾಡದೆ ಹಿಂದಿನ ವರ್ಷದ ಶುಲ್ಕವನ್ನೇ ಮುಂದುವರಿಸಲು ತೀರ್ಮಾನಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ|ಸಿ ಎನ್‌.ಅಶ್ವತ್‌ ನಾರಾಯಣ್‌ ಅವರು ಈಚೆಗೆ ಹೇಳಿದ್ದರು. ಆದರೆ ಈಗ ಸರಕಾರ ಕೆಲವು ಪರೋಕ್ಷ ಕ್ರಮಗಳ ಮೂಲಕ ಶುಲ್ಕ ಹೆಚ್ಚಳಕ್ಕೆ ದಾರಿ ಮಾಡಿಕೊಡುವ ಆದೇಶ ಹೊರಡಿಸಿದೆ. ಇದರಿಂದಾಗಿ ಎಂಜಿನಿಯರಿಂಗ್‌ ಓದುವ ಕನಸು ಕಂಡಿರುವ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಕನಸು
ಕನಸಾಗಿಯೇ ಉಳಿಯುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಸರ್ಕಾರಿ ಹಾಗೂ ಖಾಸಗಿ ವಿಶ್ವವಿದ್ಯಾಲಯಗಳಲ್ಲಿನ ಸರ್ಕಾರಿ ಕೋಟಾದ ಎಂಜಿನಿಯರಿಂಗ್‌ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿನಿಂದ 83,526 ರೂ. ಹಾಗೂ 90,060 ರೂ.ಗಳಿಗೆ ನಿಗದಿಪಡಿಸಲಾಗಿದೆ. ಹಿಂದಿನ ವರ್ಷ ಈ ಶುಲ್ಕವೂ 58,806 ರೂ. ಹಾಗೂ 65,340 ರೂ. (ವಿಶ್ವವಿದ್ಯಾಲಯ ಶುಲ್ಕ ಒಳಗೊಂಡಂತೆ) ನಿಗದಿಪಡಿಸಲಾಗಿತ್ತು. ಆದರೆ ಸರಕಾರವು 2021-2022ನೇ ಸಾಲಿನಿಂದ 20,000 ರೂ. ಗಳ ಕಾಲೇಜುಗಳ ಇತರ ಶುಲ್ಕ ಹಾಗೂ ಸ್ಕಿಲ್‌ಲ್ಯಾಬ್‌ ಸೌಲಭ್ಯಕ್ಕಾಗಿ 10,000 ರೂ. ರಿಂದ 20,000 ರೂಪಾಯಿವರೆಗೆ ಹೆಚ್ಚುವರಿ ಶುಲ್ಕ ವಸೂಲಿಗೆ ಸರಕಾರ ಕಾಲೇಜುಗಳಿಗೆ
ಅವಕಾಶ ನೀಡಿದೆ. ಇದರಿಂದಾಗಿ 40 ಸಾವಿರ ರೂಪಾಯಿವರೆಗೆ ಹೆಚ್ಚುವರಿಯಾಗಿ ವಿದ್ಯಾರ್ಥಿಯು ನೀಡಬೇಕಾಗಿದೆ ಎಂದರು.

ಸರಕಾರ ಈ ಹಿಂದಿನ ವರ್ಷಗಳಲ್ಲಿ ಕಾಲೇಜುಗಳಲ್ಲಿ ಈ ರೀತಿ ಹೆಚ್ಚಿನ ಶುಲ್ಕವನ್ನು ಪಡೆಯದಂತೆ ನಿವೃತ್ತ ನ್ಯಾಯಾಧಿಧೀಶರ ನೇತೃತ್ವದ ಶುಲ್ಕ ನಿಯಂತ್ರಣ ಸಮಿತಿಯ ಮೂಲಕ ಕಡಿವಾಣ ಹಾಕಲಾಗಿತ್ತು. ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವ ಹಾಗೆ ಸರ್ಕಾರವೇ ಈ ಎಲ್ಲ ಹೆಚ್ಚುವರಿ ಶುಲ್ಕಗಳನ್ನು ವಿದ್ಯಾರ್ಥಿಗಳಿಂದ ವಸೂಲಿ ಮಾಡಿ ಕಾಲೇಜುಗಳಿಗೆ ನೀಡುತ್ತಿದೆ.

ಅದೇ ರೀತಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿನ ಶುಲ್ಕಗಳಿಗೂ ಹಾಗೂ ಸರ್ಕಾರಿ ಅನುದಾನಿತ ಎಂಜಿನಿಯರಿಂಗ್‌ ಕಾಲೇಜಿನ ಶುಲ್ಕಗಳಿಗೂ 40 ಸಾವಿರ ರೂಪಾಯಿಗಳವರೆಗೆ ಹೆಚ್ಚಳ ಮಾಡಲಾಗಿದೆ. ಕೋವಿಡ್‌ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಪೋಷಕರಿಗೆ ಸರಕಾರ ಪರೋಕ್ಷವಾಗಿ ಹೆಚ್ಚಳ ಮಾಡಿರುವ ಶುಲ್ಕ ಹೊರೆಯಾಗಲಿದೆ ಎಂದು ಹೇಳಿದರು.

Advertisement

ಬಡ-ಪ್ರತಿಭಾವಂತ ವಿದ್ಯಾರ್ಥಿಗಳ ಮತ್ತು ಕೋವಿಡ್‌ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವ ಪಾಲಕರ, ಪೋಷಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಶುಲ್ಕ ಹೆಚ್ಚಳಕ್ಕೆ ಹೊರಡಿಸಿರುವ ಆದೇಶವನ್ನು ತಕ್ಷಣಕ್ಕೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಎಬಿವಿಪಿ ಜಿಲ್ಲಾ ಸಹ ಸಂಚಾಲಕ ಉನ್ನತ ಬೇವಿನಕಟ್ಟಿ, ತಾಲೂಕು ಸಂಚಾಲಕ ಪ್ರಶಾಂತ ಮುರನಾಳ, ಕಾರ್ಯಕರ್ತರಾದ ಶ್ರೇಯಸ್‌ ಶೆಟ್ಟಿ, ಹಯವದನ ದೇಸಾಯಿ, ಓಂಕಾರ್‌ ಪೀಪಲ್‌, ಚನ್ನಪ್ಪ ಈಜೇರಿ, ಧಿಧೀರಜ್‌ ವರ್ನೆಕರ, ಸುಹಾಸ್‌ ಬಡಿಗೇರ, ಸ್ವಸ್ತಿಕ್‌ ಶೆಟ್ಟಿ, ಹರ್ಷ ಚಂಡಕ್‌, ಅಭಿಷೇಕ್‌ ಓತಗೇರಿ, ನವೀನ ಉಳ್ಳಾಗಡ್ಡಿ, ಪವನ್‌ ಪೇಟ್ಕರ,
ಮನೋಜ್‌ ನಾಯ್ಕರ, ಸುನಿಲ್‌ ಹಳ್ಳೂರ, ಕೃಷ್ಣ ಮುಂತಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next