ಶಿವಮೊಗ್ಗ: ಮಂಡ್ಲಿ ಬಳಿಯ ಕೃಷ್ಣ ರಾಜೇಂದ್ರ ನೀರು ಸರಬರಾಜು ಘಟಕದ ಬಳಿ ಇರುವ ಖಬರಸ್ಥಾನ್ ಪ್ರದೇಶದ ಸ್ವಚ್ಛತೆಗೆ ಪಾಲಿಕೆ ಮುಂದಾಗಿದ್ದನ್ನು ಖಂಡಿಸಿ ಮುಸ್ಲಿಂ ಸಮುದಾಯದವರು ಪ್ರತಿಭಟನೆ ನಡೆಸಿದರು. ನ್ಯಾಯಾಲಯದ ಆದೇಶವಿಲ್ಲದಿದ್ದರೂ ಪಾಲಿಕೆ ಅಧಿಕಾರಿಗಳು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿದ್ದರಿಂದ ಗೊಂದಲದ ವಾತಾವರಣ ಉಂಟಾಯಿತಲ್ಲದೇ ಮುಸ್ಲಿಂ ಸಮುದಾಯದವರು ಪ್ರತಿಭಟನೆ ನಡೆಸಿದರು.
ಈ ಜಾಗದ ವಿಚಾರ ನ್ಯಾಯಾಲಯದಲ್ಲಿದೆ. ಸ್ವಚ್ಛತೆ ಕಾರ್ಯದ ಬಗ್ಗೆ ಸ್ಥಳೀಯ ಕಾರ್ಪೋರೇಟರ್ ಗೂ ಮಾಹಿತಿ ನೀಡಿಲ್ಲ. ನ್ಯಾಯಾಲಯದ ಆದೇಶವೂ ಇಲ್ಲ. ಈ ಜಾಗದ ವಿಚಾರವಾಗಿ ಈಗಾಗಲೇ ಉತ್ಛ ನ್ಯಾಯಾಲಯದಲ್ಲಿ ಅಪೀಲು ಮಾಡಲಾಗಿದೆ. ಏಕಾಏಕಿ ಯಾವುದೇ ಮುನ್ಸೂಚನೆ ಇಲ್ಲದೇ ಪಾಲಿಕೆ ಅಧಿಕಾರಿಗಳು ಸ್ವಚ್ಛತೆಗೆ ಮುಂದಾಗಿದ್ದು, ಸ್ಥಳೀಯರಲ್ಲಿ ಸಂಶಯ ಮೂಡಿಸಿದೆ ಎಂದು ಪ್ರತಿಭಟನಾಕಾರರು ದೂರಿದರು.
ಈ ವೇಳೆ ಅಧಿಕಾರಿಗಳು ಮನವೊಲಿಸಲು ಯತ್ನಿಸಿದರೂ ಪ್ರಯೋಜನವಾಗಿಲ್ಲ. ಇದು ಗೊಂದಲಕ್ಕೆ ಕಾರಣವಾಯಿತು. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರುವಂತೆ ಪ್ರತಿಭಟನಾಕಾರರು ಪಟ್ಟು ಹಿಡಿದರು. ನ್ಯಾಯಾಲಯದ ಆದೇಶ ಬರುವವರೆಗೆ ಇಲ್ಲಿ ಯಾವುದೇ ರೀತಿಯ ಕಾರ್ಯಾಚರಣೆ ಮಾಡದಂತೆ ಸ್ಥಳೀಯರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಯಥಾಸ್ಥಿತಿ ಮುಂದುವರಿಸಲು ಪಾಲಿಕೆ ಅಧಿಕಾರಿಗಳನ್ನು ಒತ್ತಾಯಿಸಿದರು.
ವಕೀಲ ನಯಾಜ್ ಅಹಮ್ಮದ್, ಜಿಲಾನ್ ರಝಾ, ಮಜರ್, ರಿಯಾಜ್ ಅಹಮ್ಮದ್, ಅಖೀಲ್ ಅಮ್ಜದ್, ಸಮೀವುಲ್ಲಾ ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಇದ್ದರು. ಇದು ಪಾಲಿಕೆ ಜಾಗವಲ್ಲ. ಶಿವಪ್ಪನಾಯಕ ವಂಶಸ್ಥರ ಸಮಾಧಿ ಆ ಜಾಗದಲ್ಲಿ ಇರುವುದರಿಂದ ಇದು ಪ್ರಾಚ್ಯವಸ್ತು ಇಲಾಖೆಗೆ ಸೇರಿದೆ. ಅವರ ಮನವಿ ಮೇರೆಗೆ ಸಮಾಧಿ ಸುತ್ತಮುತ್ತ ಸ್ವತ್ಛತಾ ಕಾರ್ಯ ಕೈಗೊಳ್ಳಲು ಪಾಲಿಕೆ ಸಿಬ್ಬಂದಿ ತೆರಳಿದ್ದಾರೆ. ಇದರಲ್ಲಿ ಗೊಂದಲವಿಲ್ಲ. ಯಾರೂ ಆತಂಕಪಡುವ ಅವಶ್ಯಕತೆ ಇಲ್ಲ. ∙ಸುನಿತಾ ಅಣ್ಣಪ್ಪ, ಮೇಯರ್