ಧಾರವಾಡ: ಕವಿವಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ (ಡಿ) ದರ್ಜೆಯ 52 ಜನರನ್ನು ಅನಧಿಕೃತವಾಗಿ ನೇಮಕ ಮಾಡಲಾಗಿದೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ ಕೆಲ ಅಭ್ಯರ್ಥಿಗಳು ಕವಿವಿ ಆಡಳಿತ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಕವಿವಿಯಲ್ಲಿನ ಹೊರಗುತ್ತಿಗೆಯ 52 ಡಿ ದರ್ಜೆಯ ಅಭ್ಯರ್ಥಿಗಳ ನೇಮಕಾತಿಯಲ್ಲಿ ಕವಿವಿಯಲ್ಲಿ ಕೆಲಸ ಮಾಡುವ ನೌಕರರ ಸಂಬಂಧಿಗಳು, ಪ್ರಾಧ್ಯಾಪಕರ ಮಕ್ಕಳು ಹಾಗೂ ಅವರ ಸೊಸೆಯಂದಿರನ್ನು ಮಾತ್ರ ಪರಿಗಣಿಸಲಾಗಿದೆ. ಅವರು ಅರ್ಜಿ ಕೂಡ ಹಾಕಿಲ್ಲ. ಅವರ ಕಡೆಗೆ ಹಣ ಪಡೆದು ಆಯ್ಕೆ ಮಾಡಲಾಗಿದೆ. ಈ ಕುರಿತು ಹಲವು ದಾಖಲೆಗಳು ನಮ್ಮ ಬಳಿ ಇವೆ ಎಂದು ನೊಂದ ಅಭ್ಯರ್ಥಿ ರಾಜು ಗಿಡದಹುಬ್ಬಳ್ಳಿ ದೂರಿದ್ದಾರೆ.
ಟೆಂಡರ್ ಎಜೆನ್ಸಿ ಪಾವಟೆ ಎಂಬುವವರನ್ನು ಈ ಬಗ್ಗೆ ಪ್ರಶ್ನಿಸಿದರೆ ಅವರು, ಕುಲಪತಿಗಳ ಲಿಸ್ಟ್ ಪ್ರಕಾರ ನಾನು ನೇಮಕ ಮಾಡಿರುವೆ ಎಂದು ಹೇಳುತ್ತಾರೆ. ಈ ಮೂಲಕ ಅರ್ಜಿ ಸಲ್ಲಿಸಿದ ನಮ್ಮಂತಹ ಬಡ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಲಾಗಿದೆ. ಈ ಕುರಿತು ಸಮಗ್ರ ತನಿಖೆಯಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು. ಜೊತೆಗೆ ನೂತನವಾಗಿ ಟೆಂಡರ್ ಕರೆಯಬೇಕು ಎಂದು ಒತ್ತಾಯಿಸಿದ್ದಾರೆ.
ನನ್ನ ಪತಿ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದಲ್ಲಿ 20 ವರ್ಷಗಳ ಕಾಲ ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸಿದ್ದಾರೆ. ಅವರ ನಿಧನವಾಗಿ ಒಂದು ವರ್ಷ ಕಳೆದಿದೆ. ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ಅಲ್ಲದೇ ಪತಿಯ ನಿಧನದ ನಂತರ ಅವರ ಪಿಎಫ್ ಹಣ ಕೂಡ ನೀಡುತ್ತಿಲ್ಲ. ಕವಿವಿಯಿಂದ ಯಾರು ಹಣ ಕೇಳಿಲ್ಲ. ಆದರೂ ಹಣ ನೀಡಿದವರನ್ನು ಆಯ್ಕೆ ಮಾಡಲಾಗಿದೆ. ಪತಿಯ 20 ವರ್ಷದ ಸೇವೆ ಪರಿಗಣಿಸಿ ಜೀವನ ನಿರ್ವಹಣೆಗಾಗಿ ಮಗನ ವಿದ್ಯಾಭ್ಯಾಸಕ್ಕಾಗಿ ವಿವಿಯಲ್ಲಿ ಕೆಲಸ ನೀಡಬೇಕು ಎಂದು ನೊಂದ ಅಭ್ಯರ್ಥಿ ಸರೋಜಾ ಆಗ್ರಹಿಸಿದರು. ಈ ಕುರಿತಂತೆ ಕುಲಪತಿ, ಕುಲಸಚಿವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಪಣಿರಾಜು, ಸಂತೋಷ ಬೈಲವಾಡ, ನವೀನ ಜಾಕೋಜಿ, ಗಣೇಶ ಬಾವಿ ಸೇರಿದಂತೆ ಹಲವರು ಇದ್ದರು.