Advertisement

ಲೆನಿನ್‌ ಪ್ರತಿಮೆ ಧ್ವಂಸಕ್ಕೆ ಖಂಡನೆ

11:55 AM Mar 08, 2018 | |

ಕಲಬುರಗಿ: ತ್ರಿಪುರಾ ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಸಂದರ್ಭದಲ್ಲಿ ಬೆಲೋನಿಯಾ ಕಾಲೇಜ್‌ ಚೌಕ್‌ ಬಳಿಯಿದ್ದ ಲೆನಿನ್‌ ಪ್ರತಿಮೆ ಧ್ವಂಸಗೊಳಿಸಿರುವ ಕ್ರಮ ಖಂಡಿಸಿ ಎಸ್‌ಯುಸಿಐ(ಕಮ್ಯುನಿಷ್ಟ್) ಕಾರ್ಯಕರ್ತರು ನಗರದ ಸರ್ದಾರ ಪಟೇಲ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ವಿ.ನಾಗಮ್ಮಾಳ, ಇಂತಹ ಜನತಂತ್ರ ವಿರೋಧಿ ಕೃತ್ಯ ಖಂಡನೀಯ. ಲೆನಿನ್‌ ಕೇವಲ ರಷ್ಯಾದ ನಾಯಕರಲ್ಲ. ಮೊದಲ ಸಮಾಜವಾದಿ ಸಮಾಜ ಸ್ಥಾಪಿಸಿ ಇಡೀ ವಿಶ್ವದ ಎದುರು ಹೊಸ ಸಮಾಜದ ಮಾದರಿಯಿಟ್ಟವರು.
 
ಸಮ ಸಮಾಜದ, ಸರ್ವರಿಗೂ ನ್ಯಾಯ ದೊರಕಿಸಿಕೊಡುವ, ಎಲ್ಲರಿಗೂ ಗೌರವಯುತ ಬದುಕು ಖಾತ್ರಿಪಡಿಸುವ ವ್ಯವಸ್ಥೆ ರೂಪಿಸಿದ ಮಹಾನ್‌ ವ್ಯಕ್ತಿ, ವಿಶ್ವದ ನಾಯಕ. ದುಡಿಯುವ ವರ್ಗಕ್ಕೆ ದಾರಿ ದೀಪ. ಅಂತಹ ಮಹಾನ್‌ ನಾಯಕರ ಪ್ರತಿಮೆ ಧ್ವಂಸಗೊಳಿಸಿರುವುದು ಅಧಿಕಾರದ ಮದ ಎತ್ತಿ ತೋರಿಸುತ್ತದೆ ಎಂದು ಆಕ್ರೋಶ್ಯವ್ಯಕ್ತಪಡಿಸಿದರು.
 
ಹಿಂದೂತ್ವ ಬೋಧಿಸುವ ಬಿಜೆಪಿ ತಾನೆಷ್ಟು ಅಸಹಿಷ್ಣು ಎಂಬುದನ್ನು ಈ ಕೃತ್ಯದ ಮೂಲಕ ಎತ್ತಿ ತೋರಿಸಿದೆ ಎಂದು ಟೀಕಿಸಿದ ಅವರು, ಈ ಕೃತ್ಯ ತಡೆಯುವಲ್ಲಿ ವಿಫಲವಾದ ಆಡಳಿತ ವ್ಯವಸ್ಥೆ ಹಾಗೂ ಪೊಲೀಸ್‌ ವ್ಯವಸ್ಥೆ ತನ್ನ ಹೊಣೆ ಹೊರಬೇಕು ಎಂದು ಆಗ್ರಹಿಸಿದರು.

ಪಕ್ಷ ಬಹುಮತಗಳಿಸಿ, ಸರ್ಕಾರ ರಚಿಸುವ ಪೂರ್ವದಲ್ಲಿ ಇಂತಹ ಕೃತ್ಯಕ್ಕೆ ಕೈಹಾಕಿದ ಬಿಜೆಪಿ ಉಳಿದ ಐದು ವರ್ಷದವರೆಗೆ ಏನೆಲ್ಲ ಮಾಡಲಿದೆಯೋ ಎಂದು ಆತಂಕ ವ್ಯಕ್ತಪಡಿಸಿದರು. ಎಸ್‌.ಎಂ. ಶರ್ಮಾ ಮಾತನಾಡಿ, ಪ್ರತಿಮೆ ಧ್ವಂಸದ ಬಗ್ಗೆ ತನಿಖೆ ನಡೆಸುವಂತೆ ಹಾಗೂ ಪ್ರತಿಮೆಗೆ ಘಾಸಿಗೊಳಿಸಿದವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸಿದರು. ವಿ.ಜಿ. ದೇಸಾಯಿ, ಡಾ| ಸೀಮಾ ದೇಶಪಾಂಡೆ, ಮಹೇಶ ಎಸ್‌.ಬಿ., ಸಂತೋಷ ಹಿರವೇ, ಗೌರಮ್ಮ ಸಿ.ಕೆ., ಹಣಮಂತ ಎಸ್‌.ಎಚ್‌., ಭೀಮಾಶಂಕರ ಪಾಣೆಗಾಂವ, ಅಭಯಾ ದಿವಾಕರ ಪ್ರತಿಭಟನೆಯಲ್ಲಿದ್ದರು.

ಸಮಾಜವಾದಿ ಚಿಂತನೆ ಮೇಲೆ ಕೋಮುವಾದಿ ದಾಳಿ
ವಾಡಿ:
ತ್ರಿಪುರ ರಾಜ್ಯದಲ್ಲಿ ಸ್ಥಾಪಿಸಲಾಗಿದ್ದ ವಿಶ್ವ ನಾಯಕ ಕಾಮ್ರೇಡ್‌ ವಿ.ಐ.ಲೆನಿನ್‌ ಅವರ ಪ್ರತಿಮೆ ಧ್ವಂಸಗೊಳಿಸುವ ಮೂಲಕ ಕೋಮುವಾದಿ ಶಕ್ತಿಗಳು ಅಟ್ಟಹಾಸ ಮೆರೆದಿವೆ. ಸಮಾಜವಾದಿ ಚಿಂತನೆಗಳ ಮೇಲೆ ಕ್ರೌರ್ಯ ಪ್ರದರ್ಶಿಸಿವೆ ಎಂದು ಸೋಷಲಿಸ್ಟ್‌ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ (ಎಸ್‌ಯುಸಿಐ) ಕಮ್ಯುನಿಸ್ಟ್‌ ಪಕ್ಷದ ಸ್ಥಳೀಯ ಸಮಿತಿ ಕಾರ್ಯದರ್ಶಿ ಕಾಮ್ರೇಡ್‌ ಆರ್‌.ಕೆ. ವೀರಭದ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತ್ರಿಪುರ ರಾಜ್ಯದ ಬೆಲೋನಿಯಾ ಕಾಲೇಜ್‌ ವೃತ್ತದಲ್ಲಿದ್ದ ಲೆನಿನ್‌ ಪ್ರತಿಮೆಯನ್ನು ಬಿಜೆಪಿ ಶಕ್ತಿಗಳು ತೀವ್ರವಾದ ದ್ವೇಷದಿಂದ ಮತ್ತು ಅಧಿ ಕಾರದ ಮದದಿಂದ ಧ್ವಂಸಗೊಳಿವೆ. ಕೋಮುವಾದಿ ಶಕ್ತಿಗಳು ತ್ರಿಪುರದಲ್ಲಿ ಅಧಿಕಾರಕ್ಕೇರುತ್ತಿದ್ದಂತೆ ವ್ಯವಸ್ಥಿತ ಪಿತೂರಿ ನಡೆಸಿವೆ ಎಂದು ಆರೋಪಿಸಿದ್ದಾರೆ. ಇಂತಹ ಜನತಂತ್ರ ವಿರೋಧಿ  ಕೃತ್ಯ ಖಂಡನಾರ್ಹವಾಗಿದೆ. ಲೆನಿನ್‌ ಕೇವಲ ರಷ್ಯಾದ ನಾಯಕರಲ್ಲ. ಮೊದಲ ಸಮಾಜವಾದಿ ಸಮಾಜ ಸ್ಥಾಪಿಸಿ, ಇಡೀ ವಿಶ್ವದ ಮುಂದೆ ಹೊಸದೊಂದು ಸಮಾಜದ ಮಾದರಿ ಇಟ್ಟವರು.

Advertisement

ವಿಶ್ವದಾದ್ಯಂತ ದುಡಿಯುವ ಜನಸಮುದಾಯಕ್ಕೆ ದಾರಿದೀಪವಾಗಿದ್ದಾರೆ. ಅಂತಹ ಲೆನಿನ್‌ರ ನೆನಪಿಗಾಗಿ ಸ್ಮಾರಕ ನಿರ್ಮಿಸಲಾಗಿತ್ತು. ದೇಶದ ದುಡಿಯುವ ಜನಸಮುದಾಯದ ಅತೀವ ಆದರ-ಗೌರವಗಳಿಗೆ ಪಾತ್ರವಾಗಿರುವ ಪ್ರತಿಮೆಯೊಂದನ್ನು ಅಧಿಕಾರದ ಮದದಿಂದ ನಾಶಮಾಡುವುದು ಎಂದರೆ ಅದು ಲೆನಿನ್‌ ಅವರಿಗೆ ಎಸಗುವ ಅಪಚಾರವಲ್ಲ, ಬದಲಿಗೆ ಜನತಂತ್ರಕ್ಕೆ ಎಸಗುವ ಅಪಮಾನ ಎಂದು ದೂರಿದ್ದಾರೆ. ಇಡೀ ಘಟನಾವಳಿಗಳ ಬಗ್ಗೆ ಸಮಗ್ರವಾದ ತನಿಖೆ ನಡೆಯಬೇಕು. 

ಪ್ರತಿಮೆ ಘಾಸಿಗೊಳಿಸಿದ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಮೂಲ ಸ್ಥಳದಲ್ಲಿ ಪುನಃ ಲೆನಿನ್‌ ಅವರ ಪ್ರತಿಮೆ ಸ್ಥಾಪಿಸಬೇಕು ಎಂದು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next