ಬೆಳ್ತಂಗಡಿ: ಮಚ್ಚಿನ ಗ್ರಾಮದ ವಾರ್ಡ್ ನಂ. 5ರ ನೇರೋಲ್‌ಪಲ್ಕೆ- ಕುಕ್ಕಿಲ, ಮಾಯಿಲೋಡಿಗೆ ಸಾಗುವ ಸುಮಾರು 1 ಕಿ.ಮೀ. ಮಣ್ಣಿನ ರಸ್ತೆ ಸರಿಪಡಿಸಿದ 74ರ ಹರೆಯದ ಕೋಡಿ ನಾಣ್ಯಪ್ಪ ಗೌಡ ಅವರ ಕೆಲಸವನ್ನು ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷರು, ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಶಂಸಿಸಿದ್ದಾರೆ. ಶಾಸಕ ಹರೀಶ್ ಪೂಂಜ ಅವರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಾಣ್ಯಪ್ಪ ಗೌಡರ ಸಾಧನೆ ಬಗ್ಗೆ ಉದಯ ವಾಣಿ ರವಿವಾರ ವಿಶೇಷ ವರದಿ ಪ್ರಕಟಿಸಿತ್ತು. ಮುಂದೆ ಈ ರಸ್ತೆಯನ್ನು ಕಾಂಕ್ರೀಟ್ ರಸ್ತೆಯಾಗಿಸುವಲ್ಲಿ ಯೋಜನೆ ರೂಪಿಸಲಾಗು ವುದು ಎಂದು ಗ್ರಾ.ಪಂ. ತಿಳಿಸಿದೆ. ಮಾ. 21ರಂದು ಕೂಡ ನಾಣ್ಯಪ್ಪ ಗೌಡರು ಕಾಮಗಾರಿ ಮುಂದುವರಿ ಸಿದ್ದು ಚರಂಡಿಯಲ್ಲಿ ತುಂಬಿದ್ದ ಕಸಕಡ್ಡಿ ತೆರವುಗೊಳಿಸಿದ್ದಾರೆ. ಸ್ಥಳೀಯರು ಇವರ ಸೇವೆಯನ್ನು ಗುರುತಿಸಿ ಪ್ರೋತ್ಸಾಹಿಸಿದ್ದಾರೆ.
ಸ್ಥಳಕ್ಕೆ ಮಚ್ಚಿನ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಗೌರಿಶಂಕರ್, ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ, ಉಪಾಧ್ಯಕ್ಷೆ ಡೀಕಮ್ಮ, ಸದಸ್ಯರಾದ ಚೇತನ್ ಪಲ್ಲತಲ, ಶುಭಕರ ಭೇಟಿ ನೀಡಿದ್ದಾರೆ.
ಗ್ರಾ.ಪಂ.ನಿಂದ ಅಭಿನಂದನೆ :
ನೂತನ ಗ್ರಾ.ಪಂ. ಆಡಳಿತವು ನಾಣ್ಯಪ್ಪ ಗೌಡರ ಸೇವೆಯನ್ನು ಗೌರವಿಸಿದೆ. ಶಾಸಕ ಹರೀಶ್ ಪೂಂಜ ಅವರ ಸಲಹೆಯಂತೆ ಕಾಂಕ್ರೀಟ್ ರಸ್ತೆಗೆ ಕ್ರಿಯಾಯೋಜನೆ ರಚಿಸಲಾಗುವುದು. ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ವಾರ್ಡ್ ನಂ.5ರ ಸದಸ್ಯರ ಒಂದು ತಿಂಗಳ ಗೌರವಧನ ಸಹಿತ ಗ್ರಾ.ಪಂ.ನಿಂದ ಸ್ವತ್ಛತೆಯಡಿ 5 ಸಾವಿರ ರೂ., ಎನ್.ಆರ್.ಜಿ.ಯಲ್ಲಿ ನಾಣ್ಯಪ್ಪರಿಗೆ ಕೂಲಿ ಮೊತ್ತ ಒದಗಿಸಲಾಗುವುದು.
-ಚಂದ್ರಕಾಂತ್ ನಿಡ್ಡಾಜೆ, ಮಚ್ಚಿನ ಗ್ರಾ.ಪಂ. ಅಧ್ಯಕ್ಷ