Advertisement
ಸಮುದ್ರ ಮತ್ತು ನದಿ ಬದಿ ವ್ಯಾಪ್ತಿ ಹೊಂದಿರುವ ಆಯ್ದ ಪ್ರಮುಖ ರಸ್ತೆಯನ್ನು ಮೇಲ್ದರ್ಜೆಗೇರಿಸುವುದು ಈ ಯೋಜ ನೆಯ ಉದ್ದೇಶ. ನೈಸರ್ಗಿಕ ಅಪಾಯಕಾರಿ ಸನ್ನಿವೇಶ ಎದುರಾದರೆ ಸ್ಥಳೀಯರನ್ನು ಸುಸಜ್ಜಿತ ಮಾರ್ಗದ ಮುಖೇನ ಪರ್ಯಾಯ ಜಾಗಗಳಿಗೆ ಕರೆದೊಯ್ಯಲು ಅವಕಾಶ ಕಲ್ಪಿಸಲಾಗುತ್ತದೆ. ಇದರಂತೆ ಜಪ್ಪಿನ ಮೊಗರು, ಹೊಗೆ ಬಜಾರ್, ಸುಲ್ತಾನ್‌ಬತ್ತೇರಿ, ಸಸಿಹಿತ್ಲು, ಉಳ್ಳಾಲ ಸಹಿತ ಮಂಗ ಳೂರಿನ ಒಟ್ಟು ಆರು ಕಡೆಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಲಿದೆ.
ಹೊಗೆಬಜಾರ್ ರಸ್ತೆ ಕಾಂಕ್ರೀಟ್ ಕಾಮಗಾರಿಗೆ ಒಪ್ಪಿಗೆ ದೊರೆತಿದ್ದು, ಮೊದಲು ಇಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯ ಒಳಚರಂಡಿ ಕಾಮಗಾರಿ ನಡೆದ ತತ್‌ಕ್ಷಣ ರಸ್ತೆ ಕಾಮಗಾರಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
Related Articles
Advertisement
ಎನ್‌ಸಿಆರ್‌ಎಂಪಿ ಯೋಜನೆಯಡಿ ಕರಾವಳಿ ವ್ಯಾಪ್ತಿಯಲ್ಲಿ ವಿಪತ್ತು ನಿರ್ವಹಣೆಗೆ ಬಿಡುಗಡೆಯಾದ ಅನುದಾನದಲ್ಲಿ ಸೈಕ್ಲೋನ್ ಶೆಲ್ಟರ್ ನಿರ್ಮಾಣವಾಗಲಿದೆ. ಚಂಡ ಮಾರುತದಂತಹ ಪ್ರಾಕೃತಿಕ ವಿಕೋಪ ಘಟಿಸಿದಾಗ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಆಶ್ರಯ ಕಲ್ಪಿಸುವ ಸಲುವಾಗಿ ಮಲ್ಟಿ ಪರ್ಪಸ್ ಸೈಕ್ಲೋನ್ ಶೆಲ್ಟರ್‌ಗಳನ್ನು ನಿರ್ಮಾಣವಾಗಲಿದೆ. 35 ಕೋಟಿ ರೂ. ವೆಚ್ಚದಲ್ಲಿ ಇದು ನಿರ್ಮಾಣವಾಗಲಿದ್ದು, ಸಾವಿರ ಮಂದಿಗೆ ಆಶ್ರಯ ನೀಡುವ ಈ ಕಟ್ಟಡ ಚಂಡಮಾರುತ ಸಂದರ್ಭ ದೃಢವಾಗಿ ನಿಲ್ಲುವ ಸಾಮರ್ಥ್ಯ ಹೊಂದಿರಲಿದೆ. ಹೊಸಬೆಟ್ಟು, ಉಳ್ಳಾಲದ ಒಂಬತ್ತು ಕೆರೆ, ಉಡುಪಿ, ಕಾಪು ಮತ್ತು ಕಾರವಾರದ 7 ಕಡೆಗಳಲ್ಲಿ ಸಮುದ್ರದಿಂದ 5 ಕಿ.ಮೀ. ದೂರದಲ್ಲಿ ಶೆಲ್ಟರ್ ನಿರ್ಮಾಣವಾಗಲಿದೆ. ಇದರಲ್ಲಿ ಪುರುಷರು ಮತ್ತು ಮಹಿಳೆಯರಿಗೆ ತಂಗಲು ಪ್ರತ್ಯೇಕ ವ್ಯವಸ್ಥೆ, ಶೌಚಾಲಯ, ಸ್ನಾನದ ಕೋಣೆ, ಅಡುಗೆ ಕೋಣೆ ಇರಲಿದೆ. ಕಟ್ಟಡದ ಸದ್ಬಳಕೆಗಾಗಿ ಶಾಲಾ ಮಕ್ಕಳ ಚಟುವಟಿಕೆಯ ತಾಣ ಹಾಗೂ ಸಮುದಾಯ ಭವನವಾಗಿಯೂ ಬಳಕೆಯಾಗಲಿದೆ.
13 ರಾಜ್ಯಗಳಲ್ಲಿ ಅನುಷ್ಠಾನ ದೇಶದ ಒಟ್ಟು 13 ಕರಾವಳಿ ರಾಜ್ಯಗಳಲ್ಲಿ ಎನ್‌ಸಿಆರ್ ಎಂಪಿ ನಿಧಿಯಡಿ ಕಾಂಕ್ರೀಟ್ ರಸ್ತೆ, ಸೈಕ್ಲೋನ್ ಶೆಲ್ಟರ್‌ನಿರ್ಮಾಣವಾಗುತ್ತಿದೆ. ಪ್ರಥಮ ಹಂತದಲ್ಲಿ ಆಂಧ್ರ ಪ್ರದೇಶ ಮತ್ತು ಒಡಿಶಾ, 2ನೇ ಹಂತದಲ್ಲಿ ಮಹಾರಾಷ್ಟ್ರ, ಕೇರಳ, ಕರ್ನಾಟಕ, ಗುಜರಾತ್, 3ನೇ ಹಂತದಲ್ಲಿ ಪಾಂಡಿಚೇರಿ, ತಮಿಳುನಾಡು ಮುಂತಾದ ರಾಜ್ಯಗಳಲ್ಲಿ ಅನುಷ್ಠಾನಗೊಳ್ಳಲಿದೆ. ವಿಶ್ವಬ್ಯಾಂಕ್ ಧನ ಸಹಾಯ, ಕೇಂದ್ರ, ರಾಜ್ಯ ಸರಕಾರದ ಅನುದಾನದಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಕಂದಾಯ ವಿಭಾಗದ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಯೋಜನೆಯ ಕಾಮಗಾರಿಗಳು ನಡೆಯಲಿವೆ. ಆರು ರಸ್ತೆಗಳು ಮೇಲ್ದರ್ಜೆಗೆ
ಚಂಡಮಾರುತ, ಸುನಾಮಿಯಂತಹ ಅಪಾಯ ಎದುರಾದ ಸಂದರ್ಭ ಸಮುದ್ರ, ನದಿ ಬದಿಯ ಜನರನ್ನು ರಕ್ಷಿಸಲು ಅನುಕೂಲವಾಗುವಂತೆ ಮಂಗಳೂರು ವ್ಯಾಪ್ತಿಯ 6 ರಸ್ತೆಗಳಿಗೆ ಎನ್‌ಸಿಆರ್‌ಎಂಪಿ ಅನುದಾನದಡಿಯಲ್ಲಿ ಕಾಂಕ್ರೀಟ್ ಹಾಕಲಾಗುತ್ತದೆ. ಸ್ಥಳೀಯರ ರಕ್ಷಣೆಗೆ ಆದ್ಯತೆ ನೀಡಲು ಸಂಪರ್ಕ ರಸ್ತೆ ಮೇಲ್ದರ್ಜೆಗೇರಿಸುವುದು ಈ ಯೋಜನೆಯ ಉದ್ದೇಶ.
-ವಿಜಯ್ ಕುಮಾರ್,
ವಿಪತ್ತು ನಿರ್ವಹಣಾ ಅಧಿಕಾರಿ ದ.ಕ. ವಿಶೇಷ ವರದಿ