Advertisement

‘ನಾಗಬನದಲ್ಲೂ ಕಾಂಕ್ರೀಟ್‌ ವಿನ್ಯಾಸಗಳು’

04:01 PM Jun 04, 2018 | |

ಬೆಳ್ತಂಗಡಿ : ಹಿರಿಯರ ಪರಿಸರದ ಪರಿಕಲ್ಪನೆಯಾದ ನಾಗಬನದಲ್ಲಿ ಇಂತಿಷ್ಟೇ ಬಗೆಯ ವಿಶೇಷ ಬಗೆಯ ಮರಗಳಿರಬೇಕು ಎಂಬ ನಿಯಮವಿತ್ತು. ಅಲ್ಲಿಯೂ ಉರಗ ಹಾಗೂ ಇತರ ವಿವಿಧ ಜೀವಿಗಳು ವಾಸಿಸುತ್ತಿದ್ದವು. ಆದರೆ ಅಲ್ಲಿಯೂ ಕಾಂಕ್ರೀಟ್‌ ಬಳಸಿ ವಿನ್ಯಾಸ ಮೂಡಿಸಲಾಗುತ್ತಿದೆ. ಪರಿಸರದಲ್ಲಿ ಹಾಗೂ ಕಾಡಿನಲ್ಲಿ ಜೀವಿಗಳು ಬದುಕಲು ಬೇಕಾದ ಪೂರಕ ವಾತಾವರಣ ಇಲ್ಲದಿರುವುದರಿಂದ ಪ್ರಾಣಿಗಳು ನಾಡಿನತ್ತ ಧಾವಿಸುತ್ತಿವೆ. ಪರಿಸರಕ್ಕೆ ನಾವು
ಶರಣಾಗದಿದ್ದರೆ, ವಿವಿಧ ರೀತಿಯಲ್ಲಿ ಪರಿಸರ ನಮ್ಮನ್ನು ಶರಣಾಗಿಸುತ್ತದೆ ಎಂದು ಪರಿಸರ ಪ್ರೇಮಿ ಹಾಗೂ ಸಂಪನ್ಮೂಲ ವ್ಯಕ್ತಿ ನಿತ್ಯಾನಂದ ಶೆಟ್ಟಿ ಹೇಳಿದರು.

Advertisement

ಅವರು ಗುರುವಾಯನಕೆರೆಯ ಪೆರೋಡಿತ್ತಾಯಕಟ್ಟೆ ಸರಕಾರಿ ಉನ್ನತೀಕರಿಸಿದ ಪ್ರಾ. ಶಾಲೆಯಲ್ಲಿ ಹಮ್ಮಿಕೊಂಡಿದ್ದ ಗುಬ್ಬಚ್ಚಿ ಗೂಡು ಅಳಿವಿನಂಚಿನಲ್ಲಿರುವ ಪಕ್ಷಿಸಂಕುಲಗಳ ಉಳಿವಿಗೆ ಸಸ್ಯರಾಶಿಗಳ ಮಹತ್ವ ಜಾಗೃತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿ ಮಾತನಾಡಿದರು.

ಹಲವಾರು ಕಾರಣಗಳಿಂದ ಇಂದು ಜೀವಿಗಳು ಬದುಕಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಅರಣ್ಯೀಕರಣ ಮಾಡುವುದರಿಂದ ಪ್ರಾಣಿ, ಪಕ್ಷಿ, ಚಿಟ್ಟೆಗಳ ಸಂತತಿ ಹೆಚ್ಚಿಸಲು ಸಹಾಯವಾಗುತ್ತದೆ ಎಂದರು.

ಸಾಹಿತಿ ಪ. ರಾಮಕೃಷ್ಣ ಶಾಸ್ತ್ರೀ  ಕಾರ್ಯಕ್ರಮ ಉದ್ಘಾಟಿಸಿ, ಮನುಷ್ಯನ ಬೇರೆ ಬೇರೆ ರೀತಿಗಳ ಹವ್ಯಾಸಗಳಿಂದ ಪರಿಸರ ಮಲಿನವಾಗುತ್ತಿದೆ. ಇದರಿಂದ ಬಿಸಿಲಿನ ತಾಪಮಾನವೂ ಹೆಚ್ಚುತ್ತಿದೆ. ನಿಸರ್ಗ ಮನುಷ್ಯನ್ನು ನಿಯಂತ್ರಿಸಬೇಕೇ ಹೊರತು, ನಿಸರ್ಗವನ್ನು ಮನುಷ್ಯ ನಿಯಂತ್ರಿಸುವುದು ಸರಿಯಲ್ಲ. ಹೀಗೇ ಮುಂದುವರಿದರೆ ಜಗತ್ತು ಉಳಿಯುವುದು ಕಷ್ಟಕರ. ಆದ್ದರಿಂದ ಮುಂದಿನ ಪೀಳಿಗೆಯಾದ ಮಕ್ಕಳು ಪರಿಸರವನ್ನು ಉಳಿಸಲು ವೃತ ಅನುಸರಿಸಬೇಕಾಗಿದೆ ಎಂದರು. 

ಪ್ರಾಣಿ, ಪಕ್ಷಿಗಳನ್ನು ಸ್ವತ್ಛಂದವಾಗಿ ಓಡಾಡಲು, ಹಾರಾಡಲು ಬಿಡಬೇಕು. ಅವುಗಳನ್ನು ಗೂಡಿನಲ್ಲಿ ಬಂಧಿಸಿಟ್ಟರೆ ಅವು ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತವೆ. ಹಕ್ಕಿಗಳಿಗೆ ಆಹಾರ ನೀಡುತ್ತೇವೆ, ಆದರೆ ಉಪ್ಪು ಸೇರಿಸಿದ ಆಹಾರ ಪಕ್ಷಿಗಳಿಗೆ ವಿಷಮಯವಾಗುತ್ತದೆ. ಆದ್ದರಿಂದ ಹಕ್ಕಿಗಳಿಗೆ ಆಹಾರ ನೀಡುವಾಗ ಎಚ್ಚರ ವಹಿಸಬೇಕು. ಹಕ್ಕಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೆ ಕೀಟಗಳು ನಿಯಂತ್ರಣಕ್ಕೆ ಬರುತ್ತವೆ. ನಿಸರ್ಗವನ್ನು ಬೆಳೆಸಿದರೆ ನಮ್ಮನ್ನು ನಾವು ಬೆಳೆಸಿಕೊಂಡ ಹಾಗೆ ಎಂದರು.

Advertisement

ಸಂಪನ್ಮೂಲ ವ್ಯಕ್ತಿ ರಮ್ಯಾ ಮಾತನಾಡಿ, ಪ್ರಾಣಿ, ಪಕ್ಷಿಗಳಿಗೆ ಆಹಾರ, ನೀರು ಇಡಲು ಮಕ್ಕಳು ಸಮಯಾವಕಾಶ ವಿನಿಯೋಗಿಸುವುದು ಅಗತ್ಯ. ಮಳೆಗಾಲದಲ್ಲಿ ಗಿಡ ನೆಡುವ ಮೂಲಕ ಪರಿಸರದ ಅಭಿವೃದ್ಧಿ ನಡೆಸಲು ಕೊಡುಗೆ ನೀಡಬೇಕು. ಇಲ್ಲವಾದಲ್ಲಿ ಪ್ರಾಣಿ-ಪಕ್ಷಿಗಳನ್ನು ಮೃಗಾಲಯಗಳಲ್ಲಿ ನೋಡಬೇಕಾದ ಪರಿಸ್ಥಿತಿ ಉಂಟಾಗಲಿದೆ ಎಂದರು.

ಪರಿಸರ ಪ್ರೇಮಿ ಹಾಗೂ ಸಂಪನ್ಮೂಲ ವ್ಯಕ್ತಿ ನಿತ್ಯಾನಂದ ಶೆಟ್ಟಿ ಮಕ್ಕಳಿಗೆ ಪಕ್ಷಿಗಳಿಗೆ ನೀರು ಇಡುವುದು ಹಾಗೂ ಆಹಾರ ಇಡುವ ವಿಧಾನದ ಪ್ರಾತ್ಯಕ್ಷಿಕೆ ನೀಡಿದರು. ಮುಖ್ಯೋಪಾಧ್ಯಾಯಿನಿ ಪದ್ಮಾವತಿ ಎನ್‌. ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು. ದೇವದಾಸ ನಾಯಕ್‌ ಕಾರ್ಯಕ್ರಮ ನಿರೂಪಿಸಿದರು.

ಜೀವ ಸಂಕುಲ ಸಂರಕ್ಷಣೆ
ಪರಿಸರದಲ್ಲಿ ಪ್ರಾಣಿ, ಪಕ್ಷಿ, ಚಿಟ್ಟೆ ಮೊದಲಾದ ಜೀವಿಗಳಿದ್ದು, ಯಾವುದಕ್ಕೂ ಹಾನಿ ಮಾಡದೆ ಸಂರಕ್ಷಣೆ ಮಾಡುವತ್ತ ಗಮನ ಹರಿಸಬೇಕು. ಇದರಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ಮನೆಯಲ್ಲಿಯೇ ಪಕ್ಷಿಗಳಿಗೆ ನೀರು ಇಡಲು ಹಾಗೂ ಗೂಡುಕಟ್ಟಿಕೊಳ್ಳಲು ಪೂರಕವಾಗುವ ವ್ಯವಸ್ಥೆ ಮಾಡಬೇಕು. ಆಹಾರವನ್ನು ಇಡುವ ಪರಿಪಾಠವನ್ನು ಬೆಳೆಸಿಕೊಳ್ಳುವುದೂ ಉತ್ತಮ.
 -ನಿತ್ಯಾನಂದ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next