ನೆಲಮಂಗಲ : ಪಟ್ಟಣದ ರಸೆಗಳನ್ನು ಹೈಟೆಕ್ ಮಾಡಲು 27 ಕೋಟಿ ರೂ.ಹಾಗೂ ಪುಟ್‌ಬಾತ್ ನವೀಕರಿಸಲು 5 ಕೋಟಿ ಬಿಡುಗಡೆಯಾಗಿ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ,ಕೆಲ ಖಾಸಗಿ ವ್ಯಕ್ತಿಗಳು ರಸ್ತೆಗೆ ಕಾಂಕ್ರೀಟ್ ಹಾಕಿ ಇದು ನಮ್ಮ ವಾಹನ ನಿಲುಗಡೆ ಜಾಗ ಎಂದು ನಾಮಫಲಕ ಹಾಕಿಕೊಂಡಿದ್ದಾರೆ.
ಪಟ್ಟಣದ ಅರಿಶಿನಕುಂಟೆ ಸಮೀಪದ ರಸ್ತೆಯಿಂದ ಪುರಸಭೆ ವ್ಯಾಪ್ತಿಯ ಮೂಲಕ ಲೋಹಿತ್‌ನಗರದ ಹೆದ್ದಾರಿ ರಸ್ತೆಯವರೆಗೂ5.7ಕಿ.ಮೀ ರಸ್ತೆಯಿದ್ದು, ರಸ್ತೆಯ ಅಗಲ 25 ಮೀಟರ್‌ನಲ್ಲಿ 2 ಪಥದ ರಸ್ತೆ ನಿರ್ಮಾಣವಾಗಿದೆ. ಅದರಲ್ಲಿ 14.6 ಮೀಡಾಂಬರೀಕರಣವಾದರೆ, 3.5ಮೀಗಳಷ್ಟು ಎರಡು ಕಡೆ ಪುಟ್‌ಬಾತ್ ಜಾಗವನ್ನು ಕೆಲವೆಡೆ ಖಾಸಗಿ ವ್ಯಕ್ತಿಗಳು ಬಾಡಿಗೆ ನೀಡಿರುವ ವಾಣಿಜ್ಯ ಮಳಿಗೆಗೆಗಳ ಪಾರ್ಕಿಂಗ್ ಜಾಗವಾಗಿ ಮಾಡಿಕೊಂಡಿದ್ದಾರೆ.
ವಾಹನ ಚಾಲಕರ ಜೊತೆ ಜಟಾಪಟಿ : ಬಿನ್ನಮಂಗಲದ ಟ್ರೆಂಡ್ ಎಂಬ ಬಟ್ಟೆ ಅಂಗಡಿಯ ಮುಂದಿನ ರಸ್ತೆ ಜಾಗದಲ್ಲಿ ಸಿಮೆಂಟ್ ಕಾಂಕ್ರೀಟ್ ಹಾಕುವ ಮೂಲಕ ತಮ್ಮ ಅಂಗಡಿಗೆ ಬರುವ ವಾಹನಗಳ ನಿಲುಗಡೆಗೆ ಸಿಮೀತಗೊಳಿಸಲಾಗಿದೆ. ಬೇರೆ ವಾಹನಗಳು ರಸ್ತೆ ಪಕ್ಕದಲ್ಲಿ ನಿಲ್ಲಿಸಿಕೊಂಡರೆ ವಾಹನಗಳನ್ನು ಬೇರೆ ಕಡೆ ನಿಲ್ಲಿಸಿಕೊಳ್ಳುವಂತೆ ಎಚ್ಚರಿಕೆ ನೀಡುವುದು. ಇದು ನಮ್ಮ ಜಾಗ ನಾವು ಕಾಂಕ್ರೀಟ್ ಹಾಕಿದ್ದೇವೆ ಎಂದು ಟ್ರೆಂಡ್ ಬಟ್ಟೆ ಅಂಗಡಿ ಸಿಬ್ಬಂದಿ ಹಾಗೂ ಕಟ್ಟಡ ಮಾಲೀಕರು ಪ್ರತಿನಿತ್ಯ ವಾಹನ ಸವಾರರ ಜೊತೆ ಜಟಾಪಟಿ ನಡೆಸುತ್ತಿದ್ದಾರೆ.
ಖಾಸಗಿ ಜಾಗವಲ್ಲ: ಪಟ್ಟಣ ಮುಖ್ಯರಸ್ತೆಯು 25 ಮೀ ವಿಸ್ತೀರ್ಣ ಹೊಂದಿದೆ. ಅದು ಸರ್ಕಾರದ ಆಸ್ತಿಯಾದರೂ, ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡಿ ರಸ್ತೆ ಸಂಚಾರಕ್ಕೆ ಹಾಗೂ ವಾಹನ ಚಾಲಕರಿಗೆ ತೊಂದರೆ ನೀಡುತ್ತಿದ್ದಾರೆ.
ಮೋಸದ ಆರೋಪ : ನಗರಸಭೆ ವ್ಯಾಪ್ತಿಯಲ್ಲಿರುವ ವಾಣಿಜ್ಯ ಕಟ್ಟಡಗಳ ವಿಸ್ತೀರ್ಣಕ್ಕೆ ಅನುಸಾರವಾಗಿ ಕಂದಾಯ ನೀಡಲಾಗುತ್ತಿಲ್ಲ, ಕೆಲ ಅಧಿಕಾರಿಗಳು ಹಾಗೂ ಮಾಲೀಕರ ಹೊಂದಾಣಿಕೆಯಿಂದ ಸರ್ಕಾರಕ್ಕೆ ಲಕ್ಷಾಂತರ ಹಣವನ್ನು ಮೋಸ ಮಾಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈಗಾಗಲೇ ಪುರಸಭೆಯಾಗಿದ್ದ ಪಟ್ಟಣ ನಗರಸಭೆಯಾಗಿ ಘೋಷಣೆಯಾಗಿದ್ದು ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ವಾಣಿಜ್ಯ ಮಳಿಗೆಗೆಗಳ ಕಂದಾಯದ ಸ್ಥಿತಿಗತಿಯ ಬಗ್ಗೆ ಮೇಲಾಧಿಕಾರಿಗಳು ಪಾರದರ್ಶಕವಾಗಿ ಮಾಹಿತಿ ಸಂಗ್ರಹಿಸಬೇಕಾಗಿದೆ