ರಾಮನಗರ: ಪರಿಸರ ದಿನಾಚರಣೆ ಅಂಗವಾಗಿ ತಾಲೂಕಿನ ಎಲ್ಲಾ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಲ್ಪವೃಕ್ಷದ ಸಸಿ ನೆಡಲು ಸಂಕಲ್ಪ ಮಾಡುತ್ತೇನೆ ಎಂದು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಅಧ್ಯಕ್ಷ ಡಿ.ಕೆ.ನಾರಾಯಣಸ್ವಾಮಿ ಹೇಳಿದರು.
ನಗರದ ಗುರುಭವನದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಅವರು ಮಾತನಾಡಿದರು. ಕಲ್ಪವೃಕ್ಷದ ಸಸಿ ನೆಡುವ ಕಾರ್ಯಕ್ರಮದ ಮೂಲಕ ತಮ್ಮ ಅಧ್ಯಕ್ಷ ಸ್ಥಾನದ ಕರ್ತವ್ಯ ಆರಂಭವಾಗಲಿದೆ. ತಮಗೆ ಸಿಕ್ಕಿರುವ ಅಧ್ಯಕ್ಷ ಸ್ಥಾನದಿಂದ ತಮ್ಮ ಹೊಣೆಗಾರಿಕೆ ಹೆಚ್ಚಾಗಿದ್ದು, ಪ್ರಾಥಮಿಕ ಶಾಲಾ ಶಿಕ್ಷಕರ ದನಿಯಾಗಿ ಕರ್ತವ್ಯ ನಿರ್ವಹಿಸುವುದಾಗಿ ತಿಳಿಸಿದರು.
ಶಿಕ್ಷಕರ ಸಮಸ್ಯೆ ಪರಿಹರಿಸುವೆ: 2014-19ನೇ ಅವಧಿ ಕೊನೆಯ ಹಂತದಲ್ಲಿ ತಮಗೆ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಪ್ರಾಥಮಿಕ ಶಾಲಾ ಶಿಕ್ಷಕರ ಸಮಸ್ಯೆಗಳು ಸಾಕಷ್ಟಿವೆ. ತಮ್ಮ ಶಕ್ತಿ ಮೀರಿ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನ ಪಡುತ್ತೇನೆ. ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸ್ಥಾನವನ್ನು ಎಲ್ಲಾ ವರ್ಗದವರಿಗೂ ಸಿಗುವಂತೆ ಸಮಾನ ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ತಮಗೂ ಅಧಿಕಾರ ಸಿಕ್ಕಿದೆ. ಸಂಘ ತೆಗೆದುಕೊಂಡ ಐತಿಹಾಸಿಕ ನಿರ್ಣಯ ಇದಾಗಿತ್ತು. ಅಧ್ಯಕ್ಷರಾಗಿದ್ದ ಶಿವಸ್ವಾಮಿ, ಗುರುಮೂರ್ತಿ, ಇಂದ್ರಮ್ಮ ಅವರ ಮಾರ್ಗದರ್ಶನ ಮತ್ತು ಸಂಘದ ಎಲ್ಲಾ ಸದಸ್ಯರ ಸಹಕಾರದಲ್ಲಿ ತಮ್ಮ ಅಧಿಕಾರವನ್ನು ನಿಭಾಯಿಸಲಿದ್ದೇನೆ. ತಾಲೂಕಿನ 750 ಶಿಕ್ಷಕರ ದನಿಯಾಗುವುದಾಗಿ ಹೇಳಿದರು.
ಶಿಕ್ಷಕರ ಸಮಸ್ಯೆಗೆ ಸ್ಪಂದಿಸಿರುವ ತೃಪ್ತಿಯಿದೆ: ನಿರ್ಗಮಿತ ಅಧ್ಯಕ್ಷೆ ಇಂದ್ರಮ್ಮ.ಕೆ.ಬಾಬುಗೌಡ ಮಾತನಾಡಿ, ತಮ್ಮ 15 ತಿಂಗಳ ಅಧ್ಯಕ್ಷ ಅವಧಿಯಲ್ಲಿ ಇಲಾಖೆಯ ಅಧಿಕಾರಿಗಳ ಸಹಕಾರದಿಂದ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿರುವ ತೃಪ್ತಿ ತಮಗಿದೆ. ಅಲ್ಲದೆ ಸಂಘದಲ್ಲಿ ಎಲ್ಲ ಸದಸ್ಯರ ಸಹಕಾರ ಮಾರ್ಗದರ್ಶನ ಸಿಕ್ಕಿದ್ದರಿಂದ ತಾವು ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಯಿತು. ಕಾರ್ಯನಿರ್ವ ಹಣೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದರು. ನೂತನ ಅಧ್ಯಕ್ಷ ಡಿ.ಕೆ.ನಾರಾ ಯಣಸ್ವಾಮಿ ಅವರನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಎಂ.ಕಾಂತರಾಜು, ನಿಕಟ ಪೂರ್ವ ಅಧ್ಯಕ್ಷರಾದ ಗುರುಮೂರ್ತಿ, ಶಿವಸ್ವಾಮಿ, ಕಾರ್ಯದರ್ಶಿ ನಾರಾಯಣಸ್ವಾಮಿ ಪದಾಧಿಕಾರಿ ಗಳಾದ ಸಿ.ಆರ್.ರಮಾ, ಮೊಹಸಿನ್, ಶಿವಪ್ರಕಾಶ್, ರೇಣುಕಯ್ಯ ಮತ್ತು ಸಿ.ಎನ್. ನಾಗರಾಜು ಸನ್ಮಾನಿಸಿ ಗೌರವಿಸಿದರು.