ಮುಂಬಯಿ: ಮನುಷ್ಯನ ವಿಕಾಸದ ಆಟವು ಹಾವು-ಏಣಿಯಂತೆ. ಹಾವು ಎಂದರೆ ಜಾತೀಯತೆ, ಮತಾಂತರ ಪಿಡುಗು, ಮೂಢನಂಬಿಕೆ, ಹೆಣ್ಣಿನ ಶೋಷಣೆ ಇತ್ಯಾದಿ. ಏಣಿ ಅಂದರೆ ದಾಸರು, ವಚನಕಾರರು, ಬೇಂದ್ರೆ, ಕುವೆಂಪು ಇಂತಹ ಚಿಂತಕರು ಸಾಧಕರು. ಹಾಗಾಗಿ ನಾವೂ ಏಣಿಯನ್ನು ಏರಲು ಇಂತಹ ಸಾಹಿತ್ಯಾಸಕ್ತಿಯನ್ನು ಇರಿಸಿಕೊಳ್ಳಬೇಕು. ಮುಂಬಯಿ ಶಹರ ನಮಗೆ ಅನಾಮಿಕತೆ ನೀಡುತ್ತದೆ. ಅನಾಮಿಕತೆಯಿಂದ ಸಾಹಿತ್ಯ ಹುಟ್ಟುತ್ತದೆ. ಮುಂಬಯಿ ಎನ್ನುವುದು ನನಗೆ ಪರಮ ಮೌಲ್ಯ. ಇಲ್ಲಿ ಬಂದಾಗ ತಲೆಯಲ್ಲಿರುವ ಕಸವನ್ನು ಕಲೆ ಸ್ವತ್ಛ ಮಾಡುತ್ತದೆ. ಮುಂಬಯಿಯವರು ಬಹಳ ದುಡ್ಡು ಮಾಡಿದ್ದಾರೆ ಎಂಬ ಕಲ್ಪನೆ ನಾಡಿನ ಜನತೆಗಿದೆ. ಆದರೆ ವಾಸ್ತವ ಸ್ಥಿತಿ ಹಾಗಿಲ್ಲ. ಇಲ್ಲಿಯ ಜನತೆ ಶ್ರಮ ಜೀವಿಗಳಾಗಿದ್ದು ಭಾಷಾಭಿಮಾನ, ಸಾಮರಸ್ಯದಿಂದ ಶ್ರೀಮಂತರಾಗಿದ್ದಾರೆ. ಆದುದರಿಂದಲೇ ಮುಂಬಯಿಗೆ ತನ್ನದೇ ಆದ ಸ್ವಂತಿಕೆಯ ಅಸ್ತಿತ್ವವಿದೆ. ಅಂತಹ ಅಸ್ತಿತ್ವದ ಲಕ್ಷಣವನ್ನು ಬೆಂಗಳೂರಿನಲ್ಲಿ ಸದ್ಯ ಕಾಣುವಂತಿಲ್ಲ. ಮುಂಬಯಿ ಮಹಾನಗರ ಭೇದಭಾವವಿಲ್ಲದೆ ಪೋಷಿಸುವ ಮಹಾನಗರ ಎಂದು ನಾಡಿನ ಪ್ರಸಿದ್ಧ ಸಾಹಿತಿ ಡಾ| ಜಯಂತ ಕಾಯ್ಕಿಣಿ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಮತ್ತು ಮುಂಬಯಿ ಹಾಗೂ ಉಪನಗರಗಳಲ್ಲಿನ ವಿವಿಧ ಕನ್ನಡ ಸಂಸ್ಥೆಗಳ ಒಗ್ಗೂಡುವಿಕೆಯಲ್ಲಿ ಅಂಧೇರಿ ಪಶ್ಚಿಮದ ಮೊಗವೀರ ಭವನದಲ್ಲಿ ಆಯೋಜಿಸಿರುವ ಹೊರನಾಡ ಕನ್ನಡಿಗರ ದ್ವಿತೀಯ ರಾಷ್ಟ್ರೀಯ ಸಮಾವೇಶದಲ್ಲಿ ನಡೆಸಲ್ಪಟ್ಟ “ಮುಂಬಯಿ ಕನ್ನಡಿಗರು ಸೃಜನಶೀಲ ನೆಲೆಗಳು’ ವಿಚಾರಿತ ಸಮಾವೇಶದಲ್ಲಿ ಫೆ. 10ರಂದು ನಡೆದ ಪ್ರಥಮ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಡಾ| ಕಾಯ್ಕಿಣಿ ಮಾತನಾಡಿದರು.
ಸಮ್ಮೇಳನಾಧ್ಯಕ್ಷ ಡಾ| ಮನು ಬಳಿಗಾರ್ ಉಪಸ್ಥಿತಿಯಲ್ಲಿ ನಡೆಸಲ್ಪಟ್ಟ ಗೋಷ್ಠಿಯಲ್ಲಿ “ಪ್ರದರ್ಶಕ ಕಲೆಗಳು’ ವಿಷಯದಲ್ಲಿ ಪತ್ರಕರ್ತ ಶ್ರೀನಿವಾಸ ಜೋಕಟ್ಟೆ, ಚಲನಚಿತ್ರ-ರಂಗಭೂಮಿ ವಿಷಯವಾಗಿ ಡಾ| ಮಮತಾ ರಾವ್, “ಸಾಹಿತ್ಯ’ ವಿಷಯದಲ್ಲಿ ಡಾ| ಗಣೇಶ ಎನ್. ಉಪಾಧ್ಯ ಬಹಳ ನಿಖರವಾಗಿ ಪ್ರಕರವಾಗಿ ಪ್ರಬಂಧಗಳನ್ನು ಮಂಡಿಸಿದರು. ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಮತ್ತು ಹಿರಿಯ ಸಾಹಿತಿ ಮಿತ್ರಾ ವೆಂಕಟ್ರಾಜ್ ಮುಂಬಯಿ ಅವರು ಪ್ರತಿಕ್ರಿಯಿಸಿದರು. ಚೆಂಬೂರು ಕರ್ನಾಟಕ ಸಂಘದ ಅಧ್ಯಕ್ಷ ನ್ಯಾಯವಾದಿ ಎಚ್. ಕೆ. ಸುಧಾಕರ ಅರಾಟೆ ಸ್ವಾಗತಿಸಿದರು. ರಂಗ ಕಲಾವಿದೆ ಅಹಲ್ಯಾ ಬಲ್ಲಾಳ್ ಗೋಷ್ಠಿ ನಿರ್ವಹಿಸಿದರು. ಗೋರೆಗಾಂವ್ ಕರ್ನಾಟಕ ಸಂಘದ ಅಧ್ಯಕ್ಷ ರಮೇಶ್ ಶೆಟ್ಟಿ ಪಯ್ಯರ್ ವಂದಿಸಿದರು. ಪ್ರಸಿದ್ಧ ಲೇಖಕ, ಮಧ್ಯ ಪ್ರದೇಶದ ಅಮರಕಂಟಕ ಅಲ್ಲಿನ ಇಂದಿರಾ ಗಾಂಧಿ ರಾಷ್ಟ್ರೀಯ ಬುಡಕಟ್ಟು ವಿವಿಯ ಕುಲಪತಿ ಪ್ರೊ| ತೇಜಸ್ವಿ ಕಟ್ಟಿàಮನಿ ಅಧ್ಯಕ್ಷತೆಯಲ್ಲಿ ದ್ವಿತೀಯ ಗೋಷ್ಠಿಯು “ಹೊರನಾಡ ಕನ್ನಡಿಗರ ಸವಾಲುಗಳು’ ವಿಚಾರವಾಗಿ ನಡೆಸಲ್ಪಟ್ಟಿದ್ದು ಶೈಕ್ಷಣಿಕ-ವಿಷಯದಲ್ಲಿ ಪ್ರೊ| ಕೆ.ಬಿ. ತಾರಕೇಶ್ವರ, ಔದ್ಯೋಗಿಕ-ವಿಷಯದಲ್ಲಿ ಮೊಗವೀರ ಬ್ಯಾಂಕ್ ಲಿಮಿಟೆಡ್‌ನ ಕಾರ್ಯಾಧ್ಯಕ್ಷ ಸದಾನಂದ ಎಸ್. ಕೋಟ್ಯಾನ್, ಸಾಂಸ್ಕೃತಿಕ-ವಿಷಯದಲ್ಲಿ ಸಾಹಿತಿ ಡಾ| ಚಂದ್ರಕಾಂತ ಪೋಕಳೆ ಪ್ರಬಂಧ ಮಂಡಿಸಿದರು.
ಡಾ| ಗುರುಲಿಂಗಪ್ಪ ದಭಾಲೆ ಸೊಲ್ಲಾಪುರ, ಜಿ.ವಿ. ವಿಠuಲ್ ದೆಹಲಿ ಮತ್ತು ಕಾಂತಿ ಶೆಟ್ಟಿ ಡೊಂಬಿವಲಿ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಸಾಹಿತ್ಯ ಬಳಗ ಮುಂಬಯಿ ಅಧ್ಯಕ್ಷ ಎಚ್.ಬಿ.ಎಲ್. ರಾವ್ ಸ್ವಾಗತಿಸಿದರು. ಮುಂಬಯಿ ವಿವಿ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್. ಶೆಟ್ಟಿ ಗೋಷ್ಠಿ ನಿರ್ವಹಿಸಿದರು. ಕುಲಾಲ ಸಂಘ ಮುಂಬಯಿ ಅಧ್ಯಕ್ಷ ದೇವದಾಸ್ ಎಲ್. ಕುಲಾಲ್ ವಂದಿಸಿದರು.
ಸಂಜೆ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇದರ ಅಧ್ಯಕ್ಷ ಡಾ| ಮನು ಬಳಿಗಾರ್ ಪರಿಷತ್ ಸದಸ್ಯರನ್ನೊಳಗೊಂಡು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಡಾ| ಮೃತ್ಯುಂಜಯ ಬಳಗದವರು ಹಿಂದೂಸ್ತಾನಿ ಗಾಯನ ಪ್ರಸ್ತುತಪಡಿಸಿದರು. ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಚಾಲಿತ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯು “ಕುಶಲವ’ ಯಕ್ಷಗಾನ ಪ್ರದರ್ಶಿಸಿತು. ಮುಂಬಯಿ ಕನ್ನಡ ಸಂಘದ ಅಧ್ಯಕ್ಷ ಜಿ. ಎಸ್. ನಾಯಕ್ ಸ್ವಾಗತಿಸಿದರು. ಡಾ| ಜಿ. ಪಿ. ಕುಸುಮಾ ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ ವೈಭವ ಸಂಸ್ಥೆ ಅಂಬರ್‌ನಾಥ್ ಅಧ್ಯಕ್ಷ ಎಚ್. ಆರ್. ಚಲವಾದಿ ವಂದಿಸಿದರು.
ನಮ್ಮಲ್ಲಿ ಇಂದು ಕೋಟಿ ರೂ. ಖರ್ಚು ಮಾಡಿ ಎಂಬಿಬಿಎಸ್, ಇಂಜಿನಿಯರ್ ಇತ್ಯಾದಿ ಸೇರುತ್ತಾರೆ. ಆದರೆ ಉದ್ಯಮದತ್ತ ಇಳಿಯಲು ನಿರಾಕರಿಸುತ್ತಾರೆ. ಶಿಕ್ಷಣಕ್ಕೆ ವ್ಯಯಿಸಿದ ಕೋ. ರೂ. ಗಳ ಹಣವನ್ನು ಸ್ವಂತ ಉದ್ಯಮಕ್ಕೆ ಹಾಕುವ ದೈರ್ಯ ವಹಿಸಿದ್ದರೆ ಅವರಿಂದು ಯಶಸ್ವಿ ಉದ್ಯಮಿಗಳಾಗುತ್ತಿದ್ದರು. ಯುವೋದ್ಯಮಿಗಳು ಆದವರೂ ಬಹಳಷ್ಟಿದ್ದಾರೆ. ಅವರ ಯಶಸ್ವಿನ ಕಥೆ ಲೇಖಕರು ಬರೆಯಿರಿ. ಇನ್ನೊಬ್ಬರಿಗೆ ಆ ಯಶಸ್ಸಿನ ಕಥೆಯಿಂದ ಸ್ಪೂರ್ತಿ ಬರಲಿ. ಬಹುಶ: ನಮ್ಮ ಪ್ರೊಫೆಸರ್‌ಗಳಿಗೆ ಇಂತಹ ಬುಕ್-ಸ್ಟೋರಿ ಇಷ್ಟವಾಗಲಾರದು ಅಥವಾ ಯೋಗ್ಯ ಅಲ್ಲ ಅಂತ ಭಾವಿಸಿದ್ದಾರೋ ಏನೋ. ಈ ಸಕ್ಸಸ್ ಜನರ, ಕನ್ನಡಿಗರು ಕೌಶಲ್ಯದಿಂದ ಮೇಲೆ ಬಂದಿರುವ ಅಂತಂಹ ಯಶೋಗಾಥೆಯ ಬಗ್ಗೆ ಹೆಚ್ಚೆಚ್ಚು ಬರೆಯಿರಿ.
-ಪ್ರೊ| ತೇಜಸ್ವಿ ಕಟ್ಟಿàಮನಿ,ಮಧ್ಯ ಪ್ರದೇಶದ ಅಮರಕಂಟಕ
ಇಂದಿರಾ ಗಾಂಧಿ ರಾಷ್ಟ್ರೀಯ ಬುಡಕಟ್ಟು ವಿವಿಯ ಕುಲಪತಿ
ಚಿತ್ರ-ವರದಿ: ರೋನ್ಸ್ ಬಂಟ್ವಾಳ್