ಕಲಬುರಗಿ: ವಯಸ್ಸಾಗಿದೆ ಎಂದು ಬಿ.ಎಸ್. ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ ಬಿಜೆಪಿಗೆ ನಿಜವಾಗಿ ಕಾಳಜಿಯಿದ್ದರೆ ಅವರ ಮಗನಿಗೆ ಏನಾದರೂ ಸ್ಥಾನ ಕಲ್ಪಿಸಲಿ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ವ್ಯಂಗ್ಯವಾಡಿದರು.
ಕೆಪಿಸಿಸಿ ಪ್ರಚಾರ ಸಮಿತಿ ಪ್ರಚಾರೋಂದಲನಕ್ಕೆ ಚಾಲನೆ ನೀಡಲು ಆಗಮಿಸಿದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಐಸಿಯುದಲ್ಲಿ ಇರುವುದರಿಂದ ಯಡಿಯೂರಪ್ಪ ಅವರಿಗೆ ಕೇಂದ್ರೀಯ ಮಂಡಳಿಯಲ್ಲಿ ಸ್ಥಾನ ಕಲ್ಪಿಸಲಾಗಿದೆ. ಒಂದು ವೇಳೆ ಅಷ್ಟೊಂದು ಪ್ರೀತಿ, ವಿಶ್ವಾವಿದ್ದರೆ ಮುಂದಿನ ಸಿಎಂ ಎಂಬುದಾಗಿ ಘೋಷಿಸಲಿ. ಒಂದು ವೇಳೆ ಕಾಳಜಿಯಿದ್ದರೆ ಅವರ ಮಗ ವಿಜಯೇಂದ್ರಗೆ ಯಾವುದಾದರೂ ಮಹತ್ವದ ಸ್ಥಾನ ಕಲ್ಪಿಸಲಿ ಎಂದು ಸವಾಲು ಹಾಕಿದರಲ್ಲದೇ, ಈ ಕುರಿತು ಜನರು ಇದನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದಾರೆ ಎಂದರು.
ಸಿಎಂಗೆ ಸಂಪುಟ ಹಿಡಿತವಿಲ್ಲ: ಸಿಎಂ ಬಸವರಾಜ ಬೊಮ್ಮಾಯಿ ಆಡಳಿತ ಎತ್ತ ನಡಿಯುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ. ಸಂಪುಟ ಸದಸ್ಯರ ಮೇಲೆ ಯಾವುದೇ ಹಿಡಿತ ಇಲ್ಲ. ಇದಕ್ಕೆ ಕಾನೂನು ಸಚಿವ ಮಾಧುಸ್ವಾಮಿ “ಬೊಮ್ಮಾಯಿ ಸರ್ಕಾರ ಆಡಳಿತ ನಡೆಯುತ್ತಿಲ್ಲ. ಸುಮ್ಮನೇ ಮ್ಯಾನೇಜ್ ಮಾಡುತ್ತಿದ್ದೇವೆ’ ಎಂದು ಹೇಳಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದು ವಾಗ್ಧಾಳಿ ನಡೆಸಿದರು.
ಸಚಿವರು ರಾಜಾರೋಷವಾಗಿ ಭ್ರಷ್ಟಾ ಚಾರದಲ್ಲಿ ಮುಳುಗಿದ್ದಾರೆ. ಆದರೆ ಒಬ್ಬರ ಮೇಲೂ ಐಟಿ ಇಲ್ಲವೇ ಸಿಬಿಐ ದಾಳಿ ಏಕೆ ನಡೆಯುತ್ತಿಲ್ಲ. ಜಿಎಸ್ಟಿ ಬಡವರನ್ನು ಲೂಟಿ ಮಾಡುತ್ತಿದೆ. ಇದರಿಂದ ಜನ ಬೇಸತ್ತಿದ್ದು, ಯಾವಾಗ ಚುನಾವಣೆ ಬರುತ್ತದೆ ಎಂಬುದನ್ನೇ ಕಾಯ್ದು ನೋಡುತ್ತಿದ್ದಾರೆ. ಹೀಗಾಗಿ 2023ರಲ್ಲಿ ಕಾಂಗ್ರೆಸ್ 150 ಸ್ಥಾನಗಳೊಂದಿಗೆ ಮತ್ತೆ ಅಧಿಕಾರಕ್ಕೆ ಬಂದು ಸರ್ವ ಸಮುದಾಯಗಳ ಹಿತ ಕಾಪಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ|ಅಜಯಸಿಂಗ್, ಮಾಜಿ ಸಚಿವ ಡಾ|ಶರಣ ಪ್ರಕಾಶ ಪಾಟೀಲ, ಶಾಸಕರಾದ ಡಾ|ಅಜಯಸಿಂಗ್, ಖನೀಜಾ ಫಾತೀಮಾ, ಮಾಜಿ ಶಾಸಕ ಬಿ.ಆರ್. ಪಾಟೀಲ, ಅಲ್ಲಮಪ್ರಭು ಪಾಟೀಲ ನೆಲೋಗಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶರಣು ಮೋದಿ, ರಾಜ್ಯ ಉಪಾಧ್ಯಕ್ಷ ತಿಪ್ಪಣ್ಣಪ್ಪ ಕಮಕನೂರ, ನೀಲಕಂಠರಾದ ಮೂಲಗೆ ಮುಂತಾದವರಿದ್ದರು.