Advertisement

ಹಾಲು ಉತ್ಪಾದಕ ಸಹಕಾರ ಸಂಘಗಳು ಕಂಪ್ಯೂಟರೀಕರಣ

03:58 PM Oct 16, 2019 | Team Udayavani |

ಮಾಲೂರು: ಪ್ರಸ್ತುತ ತಂತ್ರಜ್ಞಾನ ಬಳಕೆ ಮಾಡಿಕೊಂಡು ತಾಲೂಕಿನ 169 ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಕಂಪ್ಯೂಟರೀಕರಣ ಮಾಡುತ್ತಿರುವುದಾಗಿ ಶಾಸಕ ಹಾಗೂ ಕೋಚಿಮಲ್‌ ನ ಅಧ್ಯಕ್ಷ ಕೆ.ವೈ.ನಂಜೇಗೌಡ ತಿಳಿಸಿದರು.

Advertisement

ಪಟ್ಟಣದ ಶಿಬಿರ ಕಚೇರಿಯಲ್ಲಿ ತಾಲೂಕಿನ 6 ಹಾಲು ಉತ್ಪಾದಕ ಸಹಕಾರ ಸಂಘಗಳಿಗೆ ಪ್ರಥಮ ಹಂತದಲ್ಲಿ 1.37 ಲಕ್ಷ ರೂ. ವೆಚ್ಚದಲ್ಲಿ ಡಿಜಿಟಲ್‌ ಹಾಲಿನ ತೂಕದ ಯಂತ್ರ, ಸ್ವಯಂ ಹಾಲು ಶೇಖರಣ ಯಂತ್ರಗಳನ್ನು ವಿತರಿಸಿ ಅವರು ಮಾತನಾಡಿದರು.

ಸೋರಿಕೆಗೆ ತಡೆ: ಪ್ರಸ್ತುತ ಆರಂಭವಾಗಿರುವ ಕಂಪ್ಯೂಟರೀಕರಣದಿಂದ ಹಾಲು ಉತ್ಪಾದಕ ಸಹಕಾರ ಸಂಘಗಳು ಕಾಗದ ರಹಿತ ವಾಹಿವಾಟು ನಡೆಸುವ ಜೊತೆಗೆ ಸಣ್ಣ ಪುಟ್ಟ ಲೋಪಗಳನ್ನು ಸರಿಪಡಿಸಿ, ಸೋರಿಕೆ ಹಾಗೂ ಹಣದ ವರ್ಗಾವಣೆ ನೆರವಾಗಿ ನಡೆಸಲು ಸಾಧ್ಯವಾಗಲಿದೆ ಎಂದರು.

3 ಲಕ್ಷ ರೂ. ಸಹಾಯಧನ: ಪ್ರಸ್ತುತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಾಲೂರು ತಾಲೂಕಿನ ಹಾಲು ಉತ್ಪಾದನೆ ಮತ್ತು ಗುಣಮಟ್ಟ ಉತ್ತಮ ಸ್ಥಿತಿಯಲ್ಲಿದ್ದು, ತಾಲೂಕಿನಲ್ಲಿ 105 ಹಾಲು ಉತ್ಪಾದಕರ ಸಹಕಾರ ಸಂಘಗಳ ಸ್ವಂತ ಕಟ್ಟಡವನ್ನುಹೊಂದಿವೆ. ಇನ್ನೂ 64 ಸಂಘಗಳಿಗೆ ನಿವೇಶನ ಈಗಾಗಲೇ ಇದ್ದು, ಸ್ವಂತ ಕಟ್ಟಡ ನಿರ್ಮಾಣಕ್ಕೆ 3 ಲಕ್ಷ ರೂ. ಸಹಾಯಧನವನ್ನು ಕೋಚಿಮುಲ್‌ನಿಂದ ನೀಡುತ್ತಿರುವುದಾಗಿ ಅವರು ತಿಳಿಸಿದರು.

ಪ್ರಗತಿಯಲ್ಲಿ ಹಾಸ್ಟೆಲ್‌ ಕಟ್ಟಡ ಕಾಮಗಾರಿ: ಹಾಲು ಉತ್ಪಾದಕರ ಅನುಕೂಲಕ್ಕಾಗಿ ಕೋಲಾರದಲ್ಲಿ ನಿರ್ಮಾಣವಾಗುತ್ತಿರುವ ಎಂವಿಕೆ ಗೋಲ್ಡನ್‌ ಡೇರಿ ಕಟ್ಟಡ ಕಾಮಗಾರಿ ಮತ್ತು ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ವಿದ್ಯಾರ್ಥಿ ನಿಲಯದ ಕಾಮಗಾರಿಗಳು ಪ್ರಗತಿಯಲ್ಲಿವೆ. ಇದರ ಉಪಯೋಗ ಎರಡೂ ಜಿಲ್ಲೆಯ ರೈತರಿಗೆ ಶೀಘ್ರವಾಗಿ ಸಿಗಲಿದೆ ಎಂದು ವಿವರಿಸಿದರು.

Advertisement

ಸಹಾಯಧನ ವಿತರಣೆ: ಅಕಾಲಿಕವಾಗಿ ಮೃತರಾದ ತೊರ್ನಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘದ ಹಾಲು ಪರೀಕ್ಷಕಿ ಮುನಿರತ್ನಮ್ಮ ಅವರ ಕುಟುಂಬಕ್ಕೆ ಕೋಚಿಮಲ್‌ ದತ್ತಿ ನಿಧಿಯಿಂದ 50 ಸಾವಿರ ರೂ. ಸಹಾಯಧನ ವಿತರಿಸಲಾಯಿತು. ಈ ವೇಳೆ ಕೋಚಿಮಲ್‌ ನಿರ್ದೇಶಕಿ ಕಾಂತಮ್ಮ ಸೋಮಣ್ಣ, ಶಿಬಿರ ಕಚೇರಿಯ ಉಪವ್ಯವಸ್ಥಾಪಕ  ಚೇತನ್‌, ವಿಸ್ತರ್ಣಾಧಿಕಾರಿ ಶ್ರೀಧರಮೂರ್ತಿ, ನಾರಾಯಣಸ್ವಾಮಿ, ಶಿವಕುಮಾರ್‌, ನರಸಿಂಹರೆಡ್ಡಿ, ಕರಿಯಪ್ಪ, ಮರಿಸ್ವಾಮಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next