Advertisement

ಕಂಪ್ಯೂಟರ್‌ ಕಣ್ಗಾವಲು

09:57 AM Dec 22, 2018 | Harsha Rao |

ಹೊಸದಿಲ್ಲಿ: ಕಂಪ್ಯೂಟರಿನಲ್ಲಿರುವ ಮಾಹಿತಿ ಅರ್ಥಾತ್‌ ಡೇಟಾದ ಬಗ್ಗೆ ನಿಗಾ ಇಡುವ ಅಧಿಕಾರವನ್ನು 10 ತನಿಖಾ ಸಂಸ್ಥೆಗಳಿಗೆ ನೀಡಿ ಕೇಂದ್ರ ಸರಕಾರ ಹೊರಡಿಸಿದ ಆದೇಶವು ಈಗ ವಿವಾದಕ್ಕೆ ಕಾರಣವಾಗಿದೆ.

Advertisement

ಗೃಹ ಸಚಿವಾಲಯದ ಕಾರ್ಯದರ್ಶಿ ರಾಜೀವ್‌ ಗೌಬಾ, ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಗುರುವಾರ ತಡರಾತ್ರಿ ಈ ಆದೇಶ ಹೊರಡಿಸಿದ್ದಾರೆ. ಸಿಬಿಐ, ಇ.ಡಿ. ಹಾಗೂ ಗುಪ್ತಚರ ದಳ ಸಹಿತ 10 ತನಿಖಾ ಸಂಸ್ಥೆಗಳು ಈ ಅಧಿಕಾರ ಹೊಂದಿರುತ್ತವೆ. ಅದರಂತೆ ದೇಶದ ಯಾವುದೇ ವ್ಯಕ್ತಿ ಕಂಪ್ಯೂಟರಿನಲ್ಲಿ ಸಂಗ್ರಹಿಸಿರುವ, ತಯಾರಿಸಿರುವ, ವರ್ಗಾಯಿಸಿರುವ ಅಥವಾ ಸ್ವೀಕರಿಸಿರುವ ಯಾವುದೇ ಮಾಹಿತಿಯ ಮೇಲೆ ನಿಗಾ ಇಡಬಹುದಾಗಿದೆ. 2009ರಲ್ಲಿ ಯುಪಿಎ ಸರಕಾರ ಜಾರಿಗೊಳಿಸಿದ್ದ ಮಾಹಿತಿ ತಂತ್ರಜ್ಞಾನ ಕಾಯ್ದೆಯ 69ನೇ ವಿಭಾಗದಲ್ಲಿ ಈ ಅಧಿಕಾರವನ್ನು ನೀಡಲಾಗಿದೆ.

10 ಏಜೆನ್ಸಿಗಳ ಪೈಕಿ ಯಾವುದೇ ತನಿಖಾ ಸಂಸ್ಥೆಗೆ ಕಂಪ್ಯೂಟರ್‌ ಮೇಲೆ ನಿಗಾ ಇಡಲು ಅನುವು ಮಾಡಬೇಕು. ಇದಕ್ಕೆ ಅಡ್ಡಿಪಡಿಸಿದರೆ ಏಳು ವರ್ಷಗಳವರೆಗೆ ಜೈಲು ಹಾಗೂ ದಂಡ ವಿಧಿಸಬಹುದಾಗಿದೆ.

ವಿಪಕ್ಷಗಳ ವಿರೋಧ
ಆದೇಶ ಹೊರಬೀಳುತ್ತಲೇ ವಿಪಕ್ಷಗಳು ಸರಕಾರದ ಮೇಲೆ ಮುಗಿಬಿದ್ದಿವೆ. ಈ ಆದೇಶ ಅಸಾಂವಿಧಾನಿಕ, ಪ್ರಜಾಪ್ರಭುತ್ವ ವಿರೋಧಿ ಮತ್ತು ಜನಸಾಮಾನ್ಯರ ಮೂಲ ಹಕ್ಕುಗಳ ಮೇಲೆ ನಡೆಸಿದ ದಾಳಿ ಎಂದು ಕಾಂಗ್ರೆಸ್‌ ಆಕ್ಷೇಪಿಸಿದೆ. ಸಿಪಿಎಂ, ಸಮಾಜವಾದಿ ಪಕ್ಷ, ರಾಷ್ಟ್ರೀಯ ಜನತಾದಳ ಮತ್ತು ತೃಣಮೂಲ ಕಾಂಗ್ರೆಸ್‌ ಸಹಿತ ಎಲ್ಲ ವಿಪಕ್ಷಗಳೂ ಕಾಂಗ್ರೆಸ್‌ ಆಕ್ಷೇಪಕ್ಕೆ ದನಿಗೂಡಿಸಿವೆ. ಭಾರತವನ್ನು “ವಿಚಕ್ಷಣೆಯ ದೇಶ’ವನ್ನಾಗಿ ಬಿಜೆಪಿ ಬದಲಿಸುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಮೋದಿ ಸರಕಾರ ಈಗ ವಿಚಕ್ಷಣೆಯ ಸರಕಾರವಾಗಿದೆ. ಚುನಾವಣೆಯಲ್ಲಿ ಸೋತು ಕಂಗೆಟ್ಟ ಬಿಜೆಪಿ ಈ ಕ್ರಮ ಕೈಗೊಂಡಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಇಲಿಯನ್ನು ಹುಲಿಯೆನ್ನುತ್ತಿರುವ ವಿಪಕ್ಷಗಳು
ಸರಕಾರದ ನಿರ್ಧಾರವನ್ನು ವಿತ್ತ ಸಚಿವ ಅರುಣ್‌ ಜೇಟಿÉ ಸಮರ್ಥಿಸಿಕೊಂಡಿದ್ದಾರೆ. ರಾಜ್ಯಸಭೆಯಲ್ಲಿ ಈ ವಿಚಾರವನ್ನೆತ್ತಿ ವಿಪಕ್ಷಗಳು ಗದ್ದಲವೆಬ್ಬಿಸಿದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಅವರು, ವಿಪಕ್ಷಗಳು ಆರೋಪಿಸುವ ಮೊದಲು ವಾಸ್ತವವನ್ನು ತಿಳಿದುಕೊಳ್ಳಬೇಕು. ಇದು ಕಾಂಗ್ರೆಸ್‌ ಸರಕಾರವಿದ್ದಾಗ ಜಾರಿಗೆ ತಂದ ಕಾನೂನು. ಇದರ ಅಡಿಯಲ್ಲಿ ಪ್ರತಿ ವರ್ಷ ಆದೇಶ ಮರುಜಾರಿಗೊಳ್ಳುತ್ತಿದೆ. ಅದರಂತೆಯೇ ಗುರುವಾರ ಆದೇಶ ಮರುಜಾರಿಗೊಳಿಸಲಾಗಿದೆ. 2009ರಿಂದ ಪ್ರತಿ ವರ್ಷ ಡಿ.20ರಂದು ಇದೇ ಆದೇಶ ಪುನರಾವರ್ತನೆಯಾಗುತ್ತಿದೆ ಎಂದಿದ್ದಾರೆ.

Advertisement

ಕಂಪ್ಯೂಟರ್‌ ಮಾತ್ರವಲ್ಲ
ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಜಾರಿಗೊಳಿಸಿದ ಆದೇಶದಲ್ಲಿರುವ “ಯಾವುದೇ ಕಂಪ್ಯೂಟರ್‌’ ಎಂಬ ಪದಕ್ಕೆ ವ್ಯಾಪಕ ಅರ್ಥವಿದೆ. ಅದು ಕೇವಲ ಕಂಪ್ಯೂಟರನ್ನಷ್ಟೇ ಉಲ್ಲೇಖೀಸುವುದಿಲ್ಲ. ಬದಲಿಗೆ ಯಾವುದೇ ಕಂಪ್ಯೂಟಿಂಗ್‌ ಸಾಧನ ಎಂಬ ವ್ಯಾಖ್ಯಾನ ನೀಡಲಾಗಿದೆ. ಅಂದರೆ ಲ್ಯಾಪ್‌ಟಾಪ್‌, ಡೆಸ್ಕ್ಟಾಪ್‌, ಟ್ಯಾಬ್ಲೆಟ್‌ಗಳು, ಸ್ಮಾರ್ಟ್‌ಫೋನ್‌ಗಳು ಹಾಗೂ ಡೇಟಾ ಸಂಗ್ರಹ ಸಾಧನಗಳೂ ಇದರ ವ್ಯಾಪ್ತಿಗೆ ಒಳಪಟ್ಟಿವೆ. ತನಿಖಾ ಸಂಸ್ಥೆಗಳು ಯಾವುದೇ ಕಂಪ್ಯೂಟಿಂಗ್‌ ಸಾಧನದಲ್ಲಿರುವ ಭೌತಿಕ ಡೇಟಾವನ್ನು ನಮ್ಮನ್ನು ಕೇಳಿಯೇ ಪಡೆಯುತ್ತವೆ. ಒಂದು ವೇಳೆ ಯಾವುದೋ ಆಕ್ಷೇಪಾರ್ಹ ಡೇಟಾವನ್ನು ವ್ಯಕ್ತಿ ತನ್ನ ಕಂಪ್ಯೂಟರ್‌ ಅಥವಾ ಮೊಬೈಲ್‌ನಲ್ಲಿ ಸಂಗ್ರಹಿಸಿದ್ದರೆ ಅದನ್ನು ತನಿಖಾ ಏಜೆನ್ಸಿಯು ನಮ್ಮನ್ನು ಕೇಳಿಯೇ ತೆಗೆದುಕೊಳ್ಳುತ್ತದೆ. ಆದರೆ ನಾವು ಬೇರೆ ಯಾರಿಗಾದರೂ ಡೇಟಾವನ್ನು ಕಳುಹಿಸಿದ್ದರೆ, ಆಗ ನಮಗೆ ಇಂಟರ್ನೆಟ್‌ ಸೇವೆ ಒದಗಿಸಿದ ಸಂಸ್ಥೆಯನ್ನು ತನಿಖಾ ಸಂಸ್ಥೆಗಳು ಸಂಪರ್ಕಿಸುತ್ತವೆ.

ಕಾನೂನಿನಲ್ಲಿ ಹೊಸತೇನಿದೆ?
ವಾಸ್ತವವಾಗಿ 2009ರಲ್ಲಿ ಕಾಂಗ್ರೆಸ್‌ ಸರಕಾರ ಹೊರಡಿಸಿದ ಮಾಹಿತಿ ತಂತ್ರಜ್ಞಾನ ಕಾಯ್ದೆಯಲ್ಲಿ ಕಂಪ್ಯೂಟರ್‌ಗಳ ಮೇಲೆ ವಿಚಕ್ಷಣೆ ನಡೆಸಲು ನಿರ್ದಿಷ್ಟ ತನಿಖಾ ಸಂಸ್ಥೆಗಳನ್ನು ಹೆಸರಿಸಿ ಅಧಿಕಾರ ನೀಡಿರಲಿಲ್ಲ. ಅಂದರೆ ಕಂಪ್ಯೂಟರ್‌ಗಳ ಮೇಲೆ ವಿಚಕ್ಷಣೆ ನಡೆಸಬೇಕಿದ್ದರೆ ಅದನ್ನು ಅನುಮೋದಿತ ತನಿಖಾ ಸಂಸ್ಥೆಯೇ ನಡೆಸಬೇಕು ಎಂದಷ್ಟೇ ಉಲ್ಲೇಖೀಸಲಾಗಿತ್ತು. ಈ ಅನುಮೋದಿತ ತನಿಖಾ ಸಂಸ್ಥೆಗಳು ಯಾವುವು ಎಂಬ ಬಗ್ಗೆ ವಿವರವನ್ನು ನೀಡಿರಲಿಲ್ಲ. ಇದರಿಂದ ಈ ಆದೇಶ ದುರ್ಬಳಕೆಯಾಗುವ ಸಾಧ್ಯತೆಯಿತ್ತು. ಹೀಗಾಗಿ ಕೇಂದ್ರ ಸರಕಾರ ಈ ಬಾರಿ 10 ತನಿಖಾ ಸಂಸ್ಥೆಗಳಿಗೆ ಈ ಆದೇಶವನ್ನು ಮಿತಿಗೊಳಿಸಿದ್ದು, ಈ ಸಂಸ್ಥೆಗಳಿಗಷ್ಟೇ ಕಂಪ್ಯೂಟರ್‌ಗಳ ಮೇಲೆ ನಿಗಾ ಇಡುವ ಅಧಿಕಾರವನ್ನು ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next