Advertisement
ಹೌದು, ಕೊರೊನಾ ಸೋಂಕು ಪರೀಕ್ಷೆಗಳ ನಿಗದಿತ ಗುರಿ ತಲುಪುವ (ಟಾರ್ಗೆಟ್ ರೀಚ್) ಉದ್ದೇಶದಿಂದ ಕೊರೊನಾ ಲಸಿಕೆ ಪಡೆಯಲು ಬರುವರನ್ನು ಟಾರ್ಗೆಟ್ ಮಾಡಿ ಸೋಂಕು ಪರೀಕ್ಷೆಗೊಳಪಡಿಸಲಾಗುತ್ತಿದೆ. ಈ ರೀತಿ ಅನಗತ್ಯ ಸೋಂಕು ಪರೀಕ್ಷೆಯಿಂದ ಹಣವೂ ವ್ಯರ್ಥವಾಗುತ್ತಿದ್ದು, ಸಾರ್ವಜನಿಕರಿಗೂ ಒತ್ತಾಯ ಪೂರ್ವಕ ಪರೀಕ್ಷೆಯಿಂದಕಿರಿಕಿರಿಯಾಗುತ್ತಿದೆ. ಕೋವಿಡ್ ಲಸಿಕೆ ಪಡೆಯಲು, ಕೋವಿಡ್ ಸೋಂಕು ಪರೀಕ್ಷೆಗೂ ಯಾವುದೇ ಸಂಬಂಧ ಇಲ್ಲ. ಕೇಂದ್ರ ಮತ್ತು ರಾಜ್ಯ ಆರೋಗ್ಯ ಇಲಾಖೆ ಮಾರ್ಗಸೂಚಿಯಲ್ಲಿಯೂ ಲಸಿಕೆ ಪಡೆಯುವುದಕ್ಕೆ ಕೊರೊನಾ ನೆಗೆಟಿವ್ ವರದಿ ಅಥವಾ ಕೊರೊನಾ ಪರೀಕ್ಷೆ ಕಡ್ಡಾಯ ಎಂಬ ನಿಯಮವಿಲ್ಲ.
Related Articles
Advertisement
ಆದರೆ, ಕಳೆದ ಎರಡು ವಾರದಿಂದ ಸೋಂಕಿನ ಹೊಸ ಪ್ರಕರಣಗಳು ಇಳಿಕೆಯಾಗಿರುವುದರಿಂದ ಸಂಪರ್ಕಿರ ಸಂಖ್ಯೆಯೂ ಕಡಿಮೆ ಇದ್ದು, ಪರೀಕ್ಷೆಗೆ ನಿಗದಿ ಪಡಿಸಿದ ಗುರಿಯನ್ನು ತಲುಪಲಾಗುತ್ತಿಲ್ಲ. ಇದರಿಂದಲೇ ಲಸಿಕೆ ಪಡೆಯಲು ಆರೋಗ್ಯ ಕೇಂದ್ರಕ್ಕೆ ಬರುವವರಿಗೆ ಪರೀಕ್ಷೆ ಮಾಡಿಸಿಕೊಳ್ಳುವಂತೆ ಒತ್ತಾಯ ಮಾಡಲಾಗುತ್ತಿದೆ. ಕೆಲ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕೇ ಹಾಗಿದ್ದರೆ ಕೊರೊನಾ ಸೋಂಕು ಪರೀಕ್ಷೆ ಮಾಡಿಸಿಕೊಳ್ಳಬೇಕು’ ಎಂದು ಆರೋಗ್ಯ ಸಿಬ್ಬಂದಿ ಹೇಳುವ ಮೂಲಕ ಅಘೋಷಿತ ನಿಯಮವನ್ನು ಜಾರಿಗೆ ತಂದಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ.
ಅನಗತ್ಯ ಹಣ ವ್ಯರ್ಥ: ಸರ್ಕಾರಕ್ಕೆ ಒಂದು ಆರ್ ಟಿಪಿಸಿಆರ್ ಪರೀಕ್ಷೆಗೆ ಕನಿಷ್ಠ 1,500 ರೂ.ನಿಂದ 2000 ರೂ. ವೆಚವಾಗುತ್ತದೆ. ಗುರಿತಲುಪುವ ಉದ್ದೇಶದಿಂದ ಕೊರೊನಾ ಸೋಂಕಿತರ ಸಂಪರ್ಕಕ್ಕೆ ಇಲ್ಲದವರನ್ನು, ಲಸಿಕೆ ಪಡೆಯಲು ಬರುವವರನ್ನು ಸೋಂಕು ಪರೀಕ್ಷೆಗೊಳ ಪಡಿಸುವುದರಿಂದ ಅನಗತ್ಯ ಹಣ ವ್ಯರ್ಥವಾಗುತ್ತದೆ.
ಪೂಲ್ ಮಾದರಿ ಜಾರಿ ಇಲ್ಲ: ಈ ಹಿಂದೆ ಯಾವ ಪ್ರದೇಶದಲ್ಲಿ ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆ ಬಂದರೆ ಅಲ್ಲಿ ಪೂಲ್ ಮಾದರಿಯ ಪರೀಕ್ಷೆ ನಡೆಸಲಾಗುತ್ತಿತ್ತು. ಅಂದರೆ, ನಾಲ್ವರು ಅಥವಾ ಐದು ಮಂದಿಯಿಂದ ಸಂಗ್ರಹಿಸಿ ಗಂಟಲು ದ್ರವ ಮಾದರಿಯನ್ನು ಪ್ರಯೋಗಾಲಯದಲ್ಲಿ ಒಗ್ಗೂಡಿಸಿ (ಪೂಲ್ ಮಾದರಿ) ಒಂದು ಸೋಂಕು ಪರೀಕ್ಷೆಗೊಳ ಪಡಿಸುವುದು. ನೆಗೆಟಿವ್ ಬಂದರೆ ಎಲ್ಲರೂ ನೆಗೆಟಿವ್ ಆಗಿರುತ್ತದೆ. ಒಂದು ವೇಳೆ ಪಾಸಿಟಿವ್ ಬಂದರೆ ಒಗ್ಗೂಡಿಸಿದ ಎಲ್ಲಾ ಮಾದರಿಯನ್ನು ಮತ್ತೂಮ್ಮೆ ಪ್ರತ್ಯೇಕವಾಗಿ ಪರೀಕ್ಷೆಗೊಳಪಡಿಸಲಾಗುತ್ತದೆ. ಸದ್ಯ ಬೆಂಗಳೂರಿನಲ್ಲಿ 100 ಮಂದಿಗೆ ಒಬ್ಬರಲ್ಲಿ ಸೋಂಕು ದೃಢಪಡುತ್ತಿದ್ದು, ಬಹುತೇಕರ ಪರೀಕ್ಷಾ ವರದಿ ನೆಗೆಟಿವ್ ಇರುತ್ತದೆ. ಇದರಿಂದ ಅನಗತ್ಯ ಹೆಚ್ಚು ಪರೀಕ್ಷೆಗಳಿಗೆ ಕಡಿವಾಣ ಹಾಕಿ ಅನಗತ್ಯ ಎಚ್ಚರಿಕೆ ಕತ್ತರಿ ಹಾಕಬಹುದಿತ್ತು. ಆದರೆ, ಬಿಬಿಎಂಪಿಯಲ್ಲಿ ಈ ಪೂಲ್ ಮಾದರಿ ಜಾರಿಯಾಗಿಲ್ಲ
ಅಗತ್ಯಕ್ಕಿಂತ ಹೆಚ್ಚು ಪರೀಕ್ಷೆ: ಈ ಹಿಂದೆ ನಗರದಲ್ಲಿ ಕೊರೊನಾ ಹೊಸ ಪ್ರಕರಣಗಳು 20 ಸಾವಿರ ಆಸುಪಾಸಿನಲ್ಲಿದ್ದಾಗ, ಪಾಸಿಟಿವಿಟಿ ದರ ಶೇ.30ಕ್ಕೂ ಅಧಿಕವಿದ್ದಾಗ ನಿತ್ಯ 60 ಸಾವಿರ ಸೋಂಕು ಪರೀಕ್ಷೆಗಳು ನಡೆಯುತ್ತಿದ್ದವು. ಸದ್ಯ ಹೊಸ ಪ್ರಕರಣಗಳು ಒಂದು ಸಾವಿರ ಆಸುಪಾಸಿಗೆ ಇಳಿಕೆಯಾಗಿದ್ದು, ಪಾಸಿಟಿವಿಟಿ ದರ ಶೇ.1ರಷ್ಟಿದೆ. ಆದರೂ, ಪರೀಕ್ಷೆಗಳು ಮಾತ್ರ ಇಳಿಕೆಯಾಗಿಲ್ಲ. ಕಳೆದ 10 ದಿನಗಳಿಂದ ನಿತ್ಯ ಸರಾಸರಿ 60 ಸಾವಿರ ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ.
ಲಸಿಕೆ ಅಭಿಯಾನಕ್ಕೆ ಹಿನ್ನೆಡೆ: ನಗರದ 150ಕ್ಕೂ ಹೆಚ್ಚು ಆರೋಗ್ಯ ಕೇಂದ್ರಗಳಲ್ಲಿ ಒಂದೇ ಕಡೆ ಲಸಿಕೆ ಮತ್ತು ಸೋಂಕು ಪರೀಕ್ಷೆ ನಡೆಯುತ್ತದೆ. ಈ ರೀತಿ ಸೋಂಕು ಪರೀಕ್ಷೆ ಮಾಡುತ್ತಿರುವುದರಿಂದ ಸಾರ್ವಜನಿಕರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಪರೀಕ್ಷೆಯೂ ಬೇಡ, ಲಸಿಕೆಯೂ ಬೇಡ ಎಂದು ಕೆಲವರು ದೂರ ಉಳಿಯುತ್ತಿದ್ದಾರೆ.
ಕೊರೊನಾ ಪರೀಕ್ಷೆಗೆ ಗುರಿ
ನಿಗದಿಪಡಿಸಲಾಗಿದೆ. ಪರೀಕ್ಷೆ ಸಂಖ್ಯೆ ಕಡಿಮೆಯಾದರೆ ಹಿರಿಯ ಅಧಿಕಾರಿಗಳು ಕ್ರಮಕೈಗೊಳ್ಳುತ್ತಾರೆ. ನಮ್ಮ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಹೆಚ್ಚು ಸೋಂಕು ಪ್ರಕರಣಗಳಿಲ್ಲ. ಪರೀಕ್ಷೆಗೂ ಹೆಚ್ಚುಜನ ಆಗಮಿಸುತ್ತಿಲ್ಲ. ಇದರಿಂದ ಲಸಿಕೆ ಪಡೆಯಲು ಬಂದವರಿಗೇ ಪರೀಕ್ಷೆ ಮಾಡಿಸುವಂತೆ ಮನವಿ ಮಾಡುತ್ತಿದ್ದೇವೆ.
-ಹೆಸರು ಬೇಡ, ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿ, ಬಿಬಿಎಂಪಿ
ಲಸಿಕೆ ಪಡೆಯಲು ತೆರಳಿದ್ದೇ, ಅಲ್ಲಿನ ಸಿಬ್ಬಂದಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಆನಂತರ ಲಸಿಕೆ ಎಂದು ಹೇಳಿದರು. ಲಸಿಕೆ ಅನಿವಾರ್ಯವಾಗಿದ್ದರಿಂದ ಗಂಟಲು ದ್ರವ ಮಾದರಿ ನೀಡಿ, ಆ ಬಳಿಕ ಲಸಿಕೆಯನ್ನು ಹಾಕಿಸಿಕೊಂಡು ಬಂದಿದ್ದೇನೆ.
– ಸುರೇಶ್, ಕೆಂಗೇರಿ ನಿವಾಸಿ
ಶುಕ್ರವಾರ ಸಂಜೆ ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳ ಆರೋಗ್ಯಾಧಿಕಾರಿಗಳೊಂದಿಗೆ ಆನ್ ಲೈನ್ ಸಭೆ ನಡೆಸಿ ಲಸಿಕೆ ಪಡೆಯಲು ಬರುವವರಿಗೆ ಸೋಂಕು ಪರೀಕ್ಷೆಗೆ ಒತ್ತಾಯಿಸಬಾರದು ಎಂದು ಸೂಚಿಸಲಾಗಿದೆ. ಸಾರ್ವಜನರಿಗೆ ಸಮಸ್ಯೆಯಾಗದಂತೆ ಕ್ರಮ ವಹಿಸಲಾಗುವುದು.
-ಡಾ.ವಿಜಯೇಂದ್ರ, ಮುಖ್ಯ ಆರೋಗ್ಯಧಿಕಾರಿ, ಬಿಬಿಎಂಪಿ ಆರೋಗ್ಯ ಇಲಾಖೆ