Advertisement
ಬಿಸಿಯೂಟ ಯೋಜನೆ ಆರಂಭವಾದಾಗಿನಿಂದ ಅಂದರೆ 2003-04ರಿಂದ ಇಲ್ಲಿಯವರೆಗೂ ವಯೋಮಾನ 60 ಮೀರಿದ್ದರೂ ಆರೋಗ್ಯವಂತರಾಗಿರುವ ಅಡುಗೆ ಸಿಬಂದಿ ಮಾನವೀಯತೆ ದೃಷ್ಟಿಯಿಂದ ಕೆಲಸದಲ್ಲಿ ಮುಂದುವರಿಸಿಕೊಂಡು ಬರಲಾಗಿತ್ತು. ಆದರೆ, ಇದೇ ವರ್ಷ ಪ್ರಥಮ ಬಾರಿಗೆ ಇಲಾಖೆ ಈ ಕುರಿತು ಅಧಿಕೃತ ಆದೇಶ ಹೊರಡಿಸಿ, 60 ವರ್ಷ ಪೂರ್ಣಗೊಳಿಸಿದವರನ್ನು ಕಡ್ಡಾಯವಾಗಿ ಅಡುಗೆ ಕರ್ತವ್ಯದಿಂದ ಬಿಡುಗಡೆಗೊಳಿಸುತ್ತಿದೆ.
Related Articles
Advertisement
ಬರಿಗೈಯಲ್ಲಿ ಮನೆಗೆ :
ಶಾಲಾ ಅಡುಗೆ ಕೇಂದ್ರಗಳ ಸಿಬಂದಿಗೆ 60 ವರ್ಷ ತುಂಬಿದಾಗ ಅವರಿಗೆ ಇಡುಗಂಟು ಹಾಗೂ ಪಿಂಚಣಿ ಕೊಟ್ಟು ಕೆಲಸದಿಂದ ಕೈಬಿಡಬೇಕೆಂದು ಬಿಸಿಯೂಟ ಅಡುಗೆ ಸಿಬಂದಿ ಹಾಗೂ ಅಸಂಘಟಿತ ಕಾರ್ಮಿಕ ಸಂಘಟನೆಗಳು ಮೊದಲಿನಿಂದಲೂ ಆಗ್ರಹಿಸುತ್ತಲೇ ಬಂದಿವೆ. 13-2-2020ರಂದು ಅಂದಿನ ಶಿಕ್ಷಣ ಸಚಿವ ಸುರೇಶಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಚರ್ಚಿಸಲಾಗಿತ್ತು. ಆಗ 60 ವರ್ಷ ತುಂಬಿ ನಿವೃತ್ತಿಯಾಗುವ ಅಡುಗೆ ಸಿಬಂದಿಗೆ 60:40 ಅನುಪಾತದಲ್ಲಿ (ಕೇಂದ್ರ ಶೇ.60, ರಾಜ್ಯ ಶೇ.40) ಇಡುಗಂಟು, ಪಿಂಚಣಿ ಕೊಡಲು ಸರಕಾರ ಬದ್ಧವಾಗಿದೆ. ಆದರೆ ಇದಕ್ಕೆ ಕೇಂದ್ರದ ಸಹಕಾರ ಬೇಕು. ಈ ಕುರಿತು ಕೇಂದ್ರಕ್ಕೆ ನಿಯೋಗ ಒಯ್ಯುವುದಾಗಿ ಹೇಳಿದ್ದರು. ಅಲ್ಲಿಯವರೆಗೆ 60 ವರ್ಷ ಮೀರಿದ ಯಾರನ್ನೂ ಕೆಲಸದಿಂದ ತೆಗೆಯುವುದಿಲ್ಲ ಎಂಬ ಭರವಸೆ ನೀಡಿದ್ದರು. ಸಮಸ್ಯೆ ಬಗೆಹರಿಯುವ ಮೊದಲೇ ಇಲಾಖೆ ಈ ವರ್ಷ ಕಡ್ಡಾಯವಾಗಿ 60 ವರ್ಷ ಮೀರಿದವರನ್ನು ಹೊರಹಾಕಲು ಅಧಿಕೃತ ಆದೇಶ ಹೊರಡಿಸಿದೆ ಎನ್ನುತ್ತಾರೆ ಬಿಸಿಯೂಟ ತಯಾರಕ ಸಂಘಟನೆ ಮುಖಂಡ ಹೊನ್ನಪ್ಪ ಮರೆಮ್ಮನವರ.
60 ವರ್ಷ ಮೀರಿದವರನ್ನು ಸೇವಾಮುಕ್ತಗೊಳಿಸುವ ಬಗ್ಗೆ ವಿರೋಧವಿಲ್ಲ. ಆದರೆ ಇವರಂತೆ ಗೌರವ ಸಂಭಾವನೆಯಲ್ಲಿ ದುಡಿಯುವ ಅಂಗನವಾಡಿ ಕಾರ್ಯಕರ್ತೆಯರಿಗೆ ಕೊಡುವ ರೀತಿಯಲ್ಲಿ ಕನಿಷ್ಠ 30 ಸಾವಿರ ಇಡುಗಂಟು ಕೊಡಬೇಕು. ಜತೆಗೆ 3000 ರೂ. ಪಿಂಚಣಿ ಕೊಡಲು ಸರಕಾರ ಕ್ರಮ ವಹಿಸಬೇಕು. ಅಲ್ಲಿವರೆಗೆ ಇವರನ್ನು ಕೆಲಸದಿಂದ ತೆಗೆಯಬಾರದು. –ಹೊನ್ನಪ್ಪ ಮರೆಮ್ಮನವರ, ಅಧ್ಯಕ್ಷರು, ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಶನ್(ಎಐಟಿಯುಸಿ ಸಂಯೋಜಿತ)
ಪ್ರತಿ ಬಾರಿ ಶೈಕ್ಷಣಿಕ ವರ್ಷದ ಅಂತ್ಯಕ್ಕೆ ಅಡುಗೆ ಸಿಬಂದಿ ಬಿಡುಗಡೆ ಮಾಡಿ ಮುಂದಿನ ವರ್ಷ ಅವರನ್ನೇ ಮುಂದುವರಿಸಿಕೊಂಡು ಬರಲಾಗುತ್ತಿತ್ತು. ಈ ಸಲ 60 ವರ್ಷ ಮೀರಿದವರನ್ನು ಕೈಬಿಡಲು ಸೂಚಿಸಲಾಗಿದ್ದು, ಮುಖ್ಯ ಶಿಕ್ಷಕರಿಗೆ ನಿರ್ದೇಶಿಸಲಾಗಿದೆ.– ಜಿ.ಆರ್. ತಿಪ್ಪೇಶಪ್ಪ, ಡಿಡಿಪಿಐ, ದಾವಣಗೆರೆ
-ಎಚ್.ಕೆ. ನಟರಾಜ