ಕೊಪ್ಪಳ: ಎಲ್ಲ ಚುನಾಯಿತ ಪ್ರತಿನಿಧಿ ಗಳು, ಅಧಿಕಾರಿಗಳು ಹಾಗೂ ಜನತೆ ಕೋವಿಡ್-19 ವೈರಾಣು ಹರಡುವಿಕೆ ನಿಯಂತ್ರಣ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದು ಡಿಸಿ ಸುನೀಲ್ ಕುಮಾರ್ ತಿಳಿಸಿದ್ದಾರೆ.
ಕೋವಿಡ್-19 ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಸೂಕ್ತ ಕ್ರಮ ತೆಗೆದುಕೊಂಡಿದ್ದರೂ ಜಿಲ್ಲೆಯಲ್ಲಿ ಕೆಲವು ಕಡೆ ಸೂಕ್ತ ಕ್ರಮ ಅನುಸರಿಸುತ್ತಿಲ್ಲ. ಜನ ಪ್ರತಿನಿಧಿಗಳು, ಅಧಿಕಾರಿಗಳ ಸಭೆ ಆಯೋಜಿಸುತ್ತಿರುವುದು, ಗ್ರಾಮಗಳಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸುತ್ತಿರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಗಮನಕ್ಕೆ ಬಂದಿದೆ. ಜನತೆ ರಸ್ತೆಗಳಲ್ಲಿ, ಬೀದಿಗಳಲ್ಲಿ ಗುಂಪುಗೂಡುತ್ತಿರುವುದು, ಜನ ಪ್ರತಿನಿಧಿಗಳು, ವಿವಿಧ ಪಕ್ಷಗಳ ಮುಖಂಡರು ಸಮುದಾಯದಲ್ಲಿ ಅಗತ್ಯ ವಸ್ತು, ಮಾಸ್ಕ್, ಸ್ಯಾನಿಟೈಸರ್,ಆಹಾರ, ಆಹಾರ ಸಾಮಗ್ರಿ ವಿತರಿಸುವ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಮತ್ತು ನಿಷೇಧಾಜ್ಞೆಯ ನಿಯಮಾವಳಿ ಉಲ್ಲಂಘಿಸುತ್ತಿರುವುದು ಕಂಡು ಬಂದಿದೆ.
ಇನ್ನು ಮುಂದೆ ಅಧಿಕಾರಿಗಳು ಮೇಲಾಧಿಕಾರಿಗಳ ಪೂರ್ವಾನುಮತಿಯಿಲ್ಲದೇ ಸಭೆ ನಡೆಸುವಂತಿಲ್ಲ.ಸಮುದಾಯದಲ್ಲಿ ಮಾಸ್ಕ್, ಸ್ಯಾನಿಟೈಸರ್, ಆಹಾರ ಮತ್ತು ಆಹಾರ ಸಾಮಗ್ರಿ ವಿತರಿಸುವ ವೇಳೆ ಕಡ್ಡಾಯವಾಗಿ ರಕ್ಷಣಾ ಪರಿಕರ ಧರಿಸತಕ್ಕದ್ದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಈ ಎಲ್ಲಾ ಕ್ರಮಗಳನ್ನು ಚುನಾಯಿತಜನಪ್ರತಿನಿಧಿ ಗಳು, ಅಧಿಕಾರಿಗಳು ಮತ್ತು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸುವಂತೆ ಡಿಸಿ ಪ್ರಕಟಣೆಯಲ್ಲಿ ಕೋರಿದ್ದಾರೆ.
ಸಿಡಿಆರ್ ಮಾಹಿತಿ ನೀಡಿ: ಲಾಕ್‌ಡೌನ್ ವೇಳೆ ಸೋಂಕಿತ ಪಿ-194 ನ ಪ್ರಾಥಮಿಕ ಸಂಪರ್ಕದಲ್ಲಿದ್ದ ಶಿಖಾ ಶೇಖ್‌ಅವರನ್ನು ಮುಂಬೈಗೆ ಹೋಗಲು ಪಾಸ್ ಕೊಡಿಸುವುದಾಗಿ ಹೇಳಿ, ಅನುಮತಿ ಇಲ್ಲದೆ ಕೊಪ್ಪಳಕ್ಕೆ ಕರೆತಂದ ಅಪರಾಧದಹಿನ್ನೆಲೆಯಲ್ಲಿ ನಗರದ ಗುರುಬಸವ ಹೊಳಗುಂದಿ ಹಾಗೂ ಇತರರ ಮೇಲೆ ಎಫ್.ಐ.ಆರ್ ದಾಖಲಿಸಲಾಗಿದ್ದು, ಇದಕ್ಕೆಸಂಬಂಧಿಸಿದಂತೆ ಕಾಲ್ ಡಿಟೇಲ್ಸ್ ರಿಜಿಸ್ಟರ್ ಕುರಿತ ಮಾಹಿತಿ ನೀಡುವಂತೆ ಎಸ್ಪಿಗೆ ಡಿಸಿ ಸುನೀಲ್ ಕುಮಾರ್ ಸೂಚಿಸಿದ್ದಾರೆ.
ವಾರ್ಡ್‌ಗಳಿಗೆ ತೆರಳಿ ಮಾರಾಟ ಮಾಡಿ: ಗಂಗಾವತಿ ನಗರದ ಮಾರುಕಟ್ಟೆಯಲ್ಲಿ ಇರುವ ತರಕಾರಿ ವರ್ತಕರು ತಮ್ಮ ಅಂಗಡಿಯನ್ನು ಎಪಿಎಂಸಿ ಯಾರ್ಡ್‌ನಲ್ಲಿ ಸ್ಥಳಾಂತರಿಸಬೇಕು. ತಮ್ಮಲ್ಲಿರುವ ತರಕಾರಿಯನ್ನು ಈಗಾಗಲೇ ಗುರುತಿಸಿರುವ 17 ನೋಂದಾಯಿತ ಸಗಟು ಮಾರಾಟಗಾರರಿಗೆ ಹಾಗೂ ತಾಲೂಕು ಕ್ರೀಡಾಂಗಣದಲ್ಲಿ ನೋಂದಾಯಿಸಿದ 9 ಜನ ಸೊಪ್ಪು, ಕರಿಬೇವು, ಕೊತ್ತಂಬರಿ ಸಗಟು ಮಾರಾಟಗಾರರಿಗೆ ಮಾರಾಟ ಮಾಡಬೇಕು. ಸಗಟು ಮಾರಾಟಗಾರರು ತಮಗೆ ನಿಗದಿಪಡಿಸಿದ ದರದಲ್ಲಿಯೇ ಕಡ್ಡಾಯವಾಗಿ ತಮಗೆ ಹಂಚಿಕೆ ಮಾಡಿರುವ ವಾರ್ಡ್‌ಗಳಿಗೆ ಹೋಗಿ ಮಾರಾಟ ಮಾಡಬೇಕು ಎಂದು ಡಿಸಿ ಸುನೀಲ್ ಕುಮಾರ್ ತಿಳಿಸಿದ್ದಾರೆ.
ರೇಷನ್ ಕಿಟ್ ಒದಗಿಸುವ ಮಾಹಿತಿ: ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಕಾಯ್ದೆ ಅಡಿಯಲ್ಲಿ ಸೂಕ್ತ ಪಡಿತರ ಧಾನ್ಯ ಹಾಗೂ ರೇಷನ್ ಕಿಟ್‌ಗಳನ್ನು ವಿತರಿಸಲಾಗುತ್ತಿದ್ದು, ಈಗಾಗಲೇ ಏಪ್ರಿಲ್, ಮೇ ತಿಂಗಳ ಪಡಿತರ ಧಾನ್ಯವನ್ನು ಮುಂಗಡವಾಗಿ ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡುದಾರರಿಗೆ ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.