ಬೆಂಗಳೂರು: ಕೊನೆಗೂ ನಟ ಅನಿರುದ್ದ್ ಜತ್ಕರ್ ಅವರ ಕಿರುತೆರೆ ಬ್ಯಾನ್ ವಿಚಾರ ಶನಿವಾರ ಸುಖಾಂತ್ಯವಾಗಿದ್ದು, ಖ್ಯಾತ ಚಿತ್ರ ನಿರ್ದೇಶಕ ಎಸ್. ನಾರಾಯಣ್ ಅವರು ನಿರ್ದೇಶಿಸುತ್ತಿರುವ ಸೂರ್ಯವಂಶ ಧಾರಾವಾಹಿಗೆ ಎದುರಾಗಿದ್ದ ವಿಘ್ನ ನಿವಾರಣೆಯಾಗಿದೆ.
ಧಾರಾವಾಹಿಯಿಂದ ನಟ ಅನಿರುದ್ದ್ ಅವರನ್ನು ಬ್ಯಾನ್ ಮಾಡುವ ಕೂಗಿನ ವಿಚಾರಕ್ಕೆ ಸಂಬಂಧಿಸಿ ಮಹತ್ವದ ಸಭೆ ಶನಿವಾರವೂ ನಡೆಯಿತು. ಈ ಸಭೆಯಲ್ಲಿ ಟೆಲಿವಿಷನ್ ಅಸೋಸಿಯೇಷನ್ ಹಾಗೂ ಕಿರುತೆರೆ ನಿರ್ಮಾಪಕರು ಭಾಗಿಯಾಗಿ ಮಹತ್ವದ ನಿರ್ಧಾರ ಕೈಗೊಂಡರು. ಈ ವೇಳೆ ಅನಿರುದ್ಧ್ ಅವರನ್ನು ಬ್ಯಾನ್ ಮಾಡಲಾಗುವುದಿಲ್ಲ ಎಂಬ ನಿರ್ಧಾರ ಪ್ರಕಟಿಸಲಾಗಿದೆ.
ಕಿರುತೆರೆಯ ಪರವಾಗಿ ಮಾತನಾಡಿದ ನಿರ್ದೇಶಕ ಪಿ.ಶೇಷಾದ್ರಿ, ”ನಾವೆಲ್ಲ ಒಮ್ಮತದ ನಿರ್ಧಾರ ಕೈಗೊಂಡಿದ್ದು, ಇಂಡಸ್ಟ್ರಿಯಲ್ಲಿ ಯಾರು ಯಾರನ್ನೂ ಬ್ಯಾನ್ ಮಾಡ ಸಾಧ್ಯವಿಲ್ಲ. ಅನಿರುದ್ಧ್ ಅವರ ಕುರಿತಾದ ಎಲ್ಲಾ ವಿವಾದ ಇತ್ಯರ್ಥವಾಗಿದ್ದು, ಅವರನ್ನು ಬ್ಯಾನ್ ಮಾಡುವ ನಿರ್ಧಾರ ಕೈಬಿಡಲಾಗಿದೆ. ಇನ್ನು ಅನಿರುದ್ದ್ ಹೊಸ ಧಾರಾವಾಹಿಯಲ್ಲಿ ನಟಿಸಬಹುದು” ಎಂದು ಸ್ಪಷ್ಟನೆ ನೀಡಿದರು.
”ಜೊತೆ ಜೊತೆಯಲಿ ಧಾರಾವಾಹಿಯ ಘಟನೆಯಿಂದ ಅಭಿಮಾನಿಗಳಿಗೆ ರಸಭಂಗವಾಗಿದ್ದು ನಾನು ಕ್ಷಮೆಯಾಚಿಸುತ್ತೇನೆ. ಆ ರೀತಿಯ ಘಟನೆ ನಡೆಯಬಾರದಿತ್ತು, ಆ ಕುರಿತಾಗಿ ನನಗೆ ವಿಷಾದವಿದೆ” ಎಂದು ಅನಿರುದ್ದ್ ಹೇಳಿದರು. ಇದೆ ವೇಳೆ ಜೊತೆ ಜೊತೆಯಲಿ ಧಾರಾವಾಹಿಯ ನಿರ್ದೇಶಕರಾಗಿರುವ ಆರೂರು ಜಗದೀಶ್ ಅವರ ಹೆಗಲ ಮೇಲೆ ಕೈ ಹಾಕಿ ಅನಿರುದ್ಧ್ ಭಾವುಕರಾಗಿ ಕಣ್ಣೀರ ಹನಿ ಸುರಿಸಿದರು.
ಶುಕ್ರವಾರ ಧಾರಾವಾಹಿಯನ್ನು ನಿಲ್ಲಿಸಬೇಕು ಎಂದು ಕನ್ನಡ ಕಿರುತೆರೆ ನಿರ್ಮಾಪಕರು ಆಗ್ರಹಿಸಿದ್ದು, ಅನಿರುದ್ಧ ಅವರ ಮೇಲೆ ಎರಡು ವರ್ಷಗಳ ಕಾಲ ಅಲಿಖಿತ ನಿಷೇಧವಿರುವ ಕಾರಣ ಅವರ ನಟನೆಯಲ್ಲಿ ಚಿತ್ರೀಕರಣ ಮಾಡದಂತೆ ನಾರಾಯಣ್ ಅವರಿಗೆ ಮನವಿ ಮಾಡಿದ್ದರು. ಈ ಬಗ್ಗೆ ವಾಣಿಜ್ಯ ಮಂಡಳಿಯ ಭಾಮಾ ಹರೀಶ್, ಸುಂದರ್ ರಾಜು ಸೇರಿ ಹಲವರು ಗಂಭೀರ ಚರ್ಚೆ ನಡೆಸಿದ್ದರು.
ಜನಪ್ರಿಯ ಟಿವಿ ಧಾರವಾಹಿ ”ಜೊತೆ ಜೊತೆಯಲಿ” ಯ ಕಥಾ ನಾಯಕನಾಗಿ ನಟಿಸುತ್ತಿದ್ದ ಅನಿರುದ್ಧ್ ಜತ್ಕರ್ ಅವರನ್ನು ತಂಡದಿಂದ ಹೊರ ಹಾಕಿದ ಬಳಿಕ ಕಿರುತೆರೆಯಿಂದ 2 ವರ್ಷ ಬ್ಯಾನ್ ಮಾಡಲಾಗಿತ್ತು. ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್ ಅವರು ದೂರು ಕೇಳಿ ಬಂದಿರುವ ಹಿನ್ನಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದರು.