Advertisement

ವಿಷ್ಣುವರ್ಧನ್‌ ಕುರಿತ ಸಮಗ್ರ ಸಂಪುಟ

12:54 PM Oct 17, 2018 | Team Udayavani |

ಬೆಂಗಳೂರು: ಬೆಳ್ಳಿತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಕನ್ನಡದ ಮೇರುನಟ ಡಾ. ವಿಷ್ಣುವರ್ಧನ್‌ ಅವರ ಸಮಗ್ರ ಸಂಪುಟವನ್ನು ಪ್ರಕಟಿಸುವ ಕುರಿತು ಕನ್ನಡ ಸಾಹಿತ್ಯ ಪರಿಷತ್ತು ಆಲೋಚನೆ ನಡೆಸಿದೆ ಎಂದು ಕಸಾಪ ಅಧ್ಯಕ್ಷ  ಡಾ.ಮನು ಬಳಿಗಾರ್‌ ಹೇಳಿದ್ದಾರೆ.

Advertisement

ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ “ಡಾ.ವಿಷ್ಣುವರ್ಧನ ಕಲಾ ದತ್ತಿ ಪ್ರಶಸ್ತಿ’ಯನ್ನು ಹಿರಿಯ ಚಿತ್ರ ನಟ ರಮೇಶ್‌ ಭಟ್‌ ಅವರಿಗೆ ಪ್ರದಾನ ಮಾಡಿ ಮಾತನಾಡಿದ ಅವರು ವಿಷ್ಣುವರ್ಧನ್‌ ಅವರ ಸಮಗ್ರ ಸಂಪುಟದ ಪ್ರಕಟಣೆಯ ಹಕ್ಕನ್ನು ಪರಿಷತ್‌ಗೆ ನೀಡಿದ್ದೇ ಆದರೆ ಪರಿಷತ್‌ ವತಿಯಿಂದಲೇ ಸಂಪುಟ ಪ್ರಕಟಿಸಲಾಗುವುದು ಎಂದು ಭರವಸೆ ನೀಡಿದರು.

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ವಿಷ್ಣು ಸ್ಮಾರಕ ನಿರ್ಮಾಣ ಕಾರ್ಯ ಶೀಘ್ರವೇ ಆರಂಭಿಸುವಂತೆ ಪರಿಷತ್‌ ವತಿಯಿಂದ ಸರಕಾರದ ಮೇಲೆ ಒತ್ತಡ ತರಲಾಗುವುದು. ಮುಖ್ಯಮಂತ್ರಿಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಚಿತ್ರರಂಗದವರೇ ಆಗಿರುವುದರಿಂದ ವಿಷ್ಣು ಸ್ಮಾರಕ ನಿರ್ಮಾಣದ ಕುರಿತು ಮಾತುಕತೆ ನಡೆಸುವುದಾಗಿ ತಿಳಿಸಿದರು.

ವಿಷ್ಣವರ್ಧನ ದತ್ತಿ ಪ್ರಶಸ್ತಿಗೆ ಪಾತ್ರರಾಗಿರುವ ಹಿರಿಯ ನಟ ರಮೇಶ್‌ ಭಟ್‌, ವಿಷ್ಣು ವರ್ಧನ್‌ ಅವರ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.ಉತ್ತಮ ಅಭಿನಯದ ಮೂಲಕ ನಾಡಿನ ಜನರ ಮನಸ್ಸನ್ನು ಗೆದ್ದಿದ್ದಾರೆ.ರಮೇಶ್‌ ಭಟ್‌ ಅವರಿಗೆ ತಮ್ಮ ಗೆಳೆಯನ ಹೆಸರಿನಲ್ಲಿ ಪ್ರಶಸ್ತಿ ದೊರಕಿರುವುದು ಸಂತಸವಾಗಿದೆ ಎಂದರು.

ಸಂದರ್ಭದಲ್ಲಿ ಮಾತನಾಡಿದ ಚಿತ್ರಕಲಾವಿದ ರಮೇಶ್‌ ಭಟ್‌, ನನ್ನ ಸಿನಿ ಪಯಣದಲ್ಲಿ ಹಲವಾರು ಪ್ರಶಸ್ತಿ ಹಾಗೂ ಗೌರವಗಳನ್ನು ಪಡೆದಿದ್ದೇನೆ. ಆದರೆ ವಿಷ್ಣುವರ್ಧನ್‌ ಹೆಸರಿನ ಈ ಪ್ರಶಸ್ತಿ ನನ್ನ ಮಡಿಲು ಸೇರಿರುವುದು ಮನಸ್ಸಿಗೆ ತುಂಬಾ ಖುಷಿಕೊಟ್ಟಿದೆ. ಗೌರವ ನನ್ನ ಜವಾಬ್ದಾರಿಯನ್ನೂ ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಿದರು.

Advertisement

ಡಾ. ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್‌ ಮಾತನಾಡಿ, “ವಿಷ್ಣುವರ್ಧನ್‌ ಅವರ ಸ್ಮಾರಕ ನಿರ್ಮಾಣ ಕಾರ್ಯ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಈ ಬಗ್ಗೆ ಕಸಾಪ ಧನಿ ಎತ್ತಬೇಕು. ವಿಷ್ಣು ಸ್ಮಾರಕ ನಿರ್ಮಾಣ ಕಾರ್ಯ ಸರಕಾರದಿಂದ ಆಗದಿದ್ದಾರೆ ಡಾ. ವಿಷ್ಣು ಸೇನಾ ಸಮಿತಿ ವತಿಯಿಂದಲೇ ನಿರ್ಮಿಸುತ್ತೇವೆ. ಅದಕ್ಕಾದರೂ ಸರಕಾರ ಅನುಮತಿ ನೀಡಬೇಕು ಎಂದರು.

ಡಾ.ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್‌, ಕಸಪಾ ಕೋಶಾಧ್ಯಕ್ಷ ಮಲ್ಲಿಕಾರ್ಜುನಪ್ಪ, ಗೌರವ ಕಾರ್ಯದರ್ಶಿ ವ.ಚ.ಚನ್ನೇಗೌಡ ಮತ್ತಿತರರು ಉಪಸ್ಥಿತರಿದ್ದರು.

ಟೀ ಅಂಗಡಿಯಿಂದ ಚಿತ್ರರಂಗಕ್ಕೆ: ದೀರ್ಘ‌ವಾದ ಪರಂಪರೆಯನ್ನು ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನನ್ನ ಬಾಲ್ಯದ ಬಹುತೇಕ ಸಮಯ ಕಳೆದಿದ್ದೇನೆ. 60ವರ್ಷದ ಹಿಂದೆ  ಪರಿಷತ್ತು ಹಿಂದಿರುವ ಮಾಡಲ್‌ ಹೈಸ್ಕೂಲ್‌ನಲ್ಲಿ ಓದುತ್ತಿದ್ದ ನಾನು ನಾಟಕ, ಆಟ, ಗೆಳೆಯರೊಂದಿಗೆ ಹರಟೆ ಹೀಗೆ ಬಹುತೇಕ ಸಮಯವನ್ನು ಈ ಜಾಗದಲ್ಲೇ ಕಳೆದಿದ್ದೇನೆ.

ನಾಟಕದ ಗೀಳಿನಿಂದ ಅರ್ಧದಲ್ಲೇ ಓದು ಕೈಬಿಟ್ಟ ನಾನು ಗಾಂಧಿಬಜಾರ್‌ನಲ್ಲಿ ಟೀ ಅಂಗಟಿ ಇಟ್ಟುಕೊಂಡಿದ್ದ ನನ್ನನ್ನು ಚಿತ್ರರಂಗ ಈ ಮಟ್ಟಕ್ಕೆ ಬೆಳೆಸಿದೆ. ಬಾಲ್ಯದಿಂದಲೇ ವಿಷ್ಣು ಪರಿಚಯವಿತ್ತಾದರೂ, ನಿರ್ದೇಶಕ ಭಾರ್ಗವ ಅವರ ಜೀವನಚಕ್ರ ಚಿತ್ರದ ಮೂಲಕ ನನ್ನ ವಿಷ್ಣುವರ್ಧನ್‌ ಅವರೊಂದಿನ ಸಂಬಂಧ ಮತ್ತಷ್ಟು ಗಟ್ಟಿಗೊಂಡಿತು. ಅವರೊಂದಿಗಿನ ಒಡನಾಟ ಮರೆಯುವಂತದ್ದಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next