Advertisement

ಅಗ್ನಿ ಅವಘಡ ಘಟನೆ ಸಮಗ್ರ ತನಿಖೆ: ಡಿಸಿ

05:33 PM Aug 25, 2020 | Suhan S |

ದೇವದುರ್ಗ: ಪಟ್ಟಣದ ಮಿನಿ ವಿಧಾನಸೌಧ ಕಟ್ಟಡದಲ್ಲಿರುವ ಶಿರಸ್ತೇದಾರ್‌ ಕಚೇರಿಯಲ್ಲಿ ಸೋಮವಾರ ಬೆಳಗ್ಗೆ ವಿದ್ಯುತ್‌ ಶಾರ್ಟ್‌ ಸರ್ಕ್ನೂಟ್‌ ನಿಂದ ಬೆಂಕಿ ತಗುಲಿ ಮಹತ್ವದ ದಾಖಲೆಗಳು ಸುಟ್ಟಿವೆ.

Advertisement

ಮಿನಿ ವಿಧಾನಸೌಧ ಕಟ್ಟಡದ ಶಿರಸ್ತೇದಾರ್‌ ಶ್ರೀನಿವಾಸ್‌ ಚಾಪಲ್‌ ಅವರ ಕೊಠಡಿಯಲ್ಲಿ ಕಂದಾಯ ಸೇರಿ ವಿವಿಧ ದಾಖಲೆಗಳನ್ನು ಸಂಗ್ರಹಿಸಲಾಗಿತ್ತು. ಸೋಮವಾರ ಬೆಳಗ್ಗೆ ಶಾರ್ಟ್‌ ಸರ್ಕ್ನೂಟ್‌ನಿಂದ ಬೆಂಕಿ ತಗುಲಿ ನೆಲಮಹಡಿ ಕಟ್ಟಡ ಧಗಧಗನೆ ಹೊತ್ತಿ ಉರಿದಿದೆ. ಇದರಿಂದ ಅಕ್ಕಪಕ್ಕದ ಅಂಗಡಿ, ಮನೆಗಳ ಜನರಲ್ಲಿ ಆತಂಕ ಉಂಟಾಗಿತ್ತು. ಅವಘಡದಲ್ಲಿ ಶಿರಸ್ತೇದಾರ್‌ ಬಳಸುತ್ತಿದ್ದ ಕಂಪ್ಯೂಟರ್‌ ಹಾಗೂ ದಾಖಲೆಗಳು, ಮೇಜು, ಕುರ್ಚಿ ಸೇರಿ ಕೆಲ ಪರಿಕರಗಳು ಸುಟ್ಟಿವೆ. ಅಗ್ನಿ ಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಡೆದರು.

ಮಿನಿ ವಿಧಾನಸೌಧ ಕಚೇರಿಯಲ್ಲಿ ಇಂಥ ಘಟನೆ ನಡೆಯುತ್ತಿರುವುದು ಎರಡನೇ ಸಲ. ಈ ಹಿಂದೆ ಪಹಣಿ ನೀಡುವ ಕೇಂದ್ರದಲ್ಲಿ ಶಾರ್ಟ್‌ ಸರ್ಕ್ನೂಟ್‌ ಉಂಟಾಗಿ ಮಹತ್ವದ ದಾಖಲೆಗಳು ಸುಟ್ಟಿದ್ದವು. ವಿಷಯ ತಿಳಿದು ತಹಶೀಲ್ದಾರ್‌ ಮಧುರಾಜ್‌ ಯಾಳಗಿ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದರು.

ಜಿಲ್ಲಾಧಿಕಾರಿ ಭೇಟಿ: ಇಲ್ಲಿನ ಶಿರಸ್ತೇದಾರ್‌ ಕಚೇರಿಯಲ್ಲಿ ಅಗ್ನಿ ಅವಘಡ ಸಂಭವಿಸಿದ ಹಿನ್ನೆಲೆಯಲ್ಲಿ ಸೋಮವಾರ ಭೇಟಿದ್ದ ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಪರಿಶೀಲನೆ ನಡೆಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿರಸ್ತೇದಾರ್‌ ಕಚೇರಿಯಲ್ಲಿ ವಿದ್ಯುತ್‌ ಶಾರ್ಟ್‌ ಸರ್ಕ್ನೂಟ್‌ ಘಟನೆ ಬಗ್ಗೆ ತನಿಖೆ ನಡೆಸಲಾಗುವುದು .ವಿದ್ಯುತ್‌ ಶಾರ್ಟ್‌ ಸರ್ಕ್ನೂಟ್‌ನಿಂದ ಅವಘಡ ನಡೆದಿದೆ. ಕೆಲ ದಾಖಲೆಗಳು ಹಾಗೂ ಕಂಪ್ಯೂಟರ್‌, ಪರಿಕರ ಸುಟ್ಟಿವೆ. ಮಹತ್ವದ ದಾಖಲೆಗಳು ಹಾಳಾಗಿಲ್ಲ. ಕೆಲ ದಾಖಲೆಗಳನ್ನು ಮರು ಸೃಷ್ಟಿ ಮಾಡಲಾಗುವುದು. ಘಟನೆ ಕುರಿತು ತನಿಖೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದು, ಎರಡ್ಮೂರು ದಿನದಲ್ಲಿ ವರದಿ ನೀಡಲಿದ್ದಾರೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಶೀಘ್ರ ಎರಡು ಕಂಪ್ಯೂಟರ್‌ ವ್ಯವಸ್ಥೆ ಮಾಡಿ ಕೆಲಸ ನಿರ್ವಹಿಸಲು ಸೂಚಿಸಲಾಗುವುದು ಎಂದರು.

ಉಪ ನೋಂದಣಾಧಿಕಾರಿ ಕಚೇರಿ ಬಗ್ಗೆ ಹಲವು ದೂರುಗಳು ಬಂದಿದ್ದು, ಈ ಹಿಂದಿನ ಉಪ ನೋಂದಣಾಧಿಕಾರಿ ವರ್ಗಾವಣೆಯಾಗಿದ್ದಾರೆ. ತಾಂತ್ರಿಕ ಕಾರಣದಿಂದ ಕಡತ ವಿಲೇವಾರಿಗೆ ವಿಳಂಬ ವಾಗಿದೆ. ಉಪ ನೋಂದಣಾಧಿಕಾರಿ ಕಚೇರಿಗೆ ಹಾಸ್ಟೇಲ್‌ಗ‌ಳಲ್ಲಿರುವ ಎರಡು ಕಂಪ್ಯೂಟರ್‌ ವ್ಯವಸ್ಥೆ ಮಾಡಲಾಗುವುದು. ಇಂಟರ್‌ನೆಟ್‌ ಸಮಸ್ಯೆ ಪರಿಹರಿಸಲಾಗುವುದು. ಕಡತಗಳನ್ನು ಎರಡು ತಿಂಗಳಲ್ಲಿ ವಿಲೇವಾರಿ ಮಾಡಲು ಸೂಚಿಸುವುದಾಗಿ ಹೇಳಿದರು.

Advertisement

ತರಾಟೆ: ಉಪ ನೋಂದಣಾಧಿಕಾರಿ ಕಚೇರಿಗೆ ಭೇಟಿ ನೀಡಿದ ಡಿಸಿ ವೆಂಕಟೇಶ ಕುಮಾರ ಅವ್ಯವಸ್ಥೆ ಕಂಡು ಕಚೇರಿ ಉಸ್ತುವಾರಿ ಮಹೇಶ ಅವರನ್ನು ತರಾಟೆಗೆ ತೆಗೆದುಕೊಂಡರು. ಕಡತ ವಿಲೇವಾರಿ ಬಗ್ಗೆ ದೂರುಗಳು ಕೇಳಿಬರುತ್ತಿದ್ದು, ಸಮರ್ಪಕವಾಗಿ ಕೆಲಸ ನಿರ್ವಹಿಸುವಂತೆ ಸೂಚಿಸಿದರು.

ತಹಶೀಲ್ದಾರ್‌ ಮಧುರಾಜ್‌ ಯಾಳಗಿ, ಪ್ರಭಾರ ತಹಶೀಲ್ದಾರ್‌ ಸಂತೋಷ್‌ ರಾಣಿ, ಗ್ರೇಡ್‌-2 ತಹಶೀಲ್ದಾರ್‌ ಶ್ರೀನಿವಾಸ್‌ ಚಾಪಲ್‌ ಇದ್ದರು.

ಕೃಷ್ಣಾ ನದಿಯಿಂದ 2.95 ಲಕ್ಷ ಕ್ಯೂಸೆಕ್‌ ನೀರು ಹರಿಬಿಟ್ಟಿದ್ದರಿಂದ ದೇವದುರ್ಗ ತಾಲೂಕು ಸೇರಿ ಜಿಲ್ಲೆಯಲ್ಲಿ ಎಲ್ಲಿಯೂ ಬೆಳೆ ನಷ್ಟವಾಗಿಲ್ಲ. ಹೂವಿನಹೆಡಗಿ ಸೇತುವೆಗೆ ಯಾವುದೇ ಹಾನಿಯಾಗಿಲ್ಲ. ಶೀಲಹಳ್ಳಿ ಸೇತುವೆ ಬಗ್ಗೆ ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ರಾಮದುರ್ಗ, ಬಂಡೆಗುಡ್ಡ ಸೇರಿ ವಿವಿಧೆಡೆ ಮಳೆಯಿಂದ ಮನೆ ಕಳೆದುಕೊಂಡವರಿಗೆ ಶೀಘ್ರ ಪರಿಹಾರ ನೀಡಲಾಗುವುದು. ನೆರೆಯಿಂದ ಮನೆ ಕಳೆದುಕೊಂಡು ಹೊಸ ಮನೆ ನಿರ್ಮಿಸಿಕೊಂಡ ಹೂವಿನಹೆಡಗಿ ಫಲಾನುಭವಿಗಳಿಗೆ ತಾಂತ್ರಿಕ ಕಾರಣದಿಂದ ಪರಿಹಾರ ವಿಳಂಬವಾಗಿದ್ದು, ಪಿಡಿಒ ಜತೆ ಚರ್ಚಿಸಿ ಶೀಘ್ರ ಅನುದಾನ ನೀಡಲಾಗುವುದು. – ಆರ್‌. ವೆಂಕಟೇಶಕುಮಾರ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next