Advertisement

ಸಮಗ್ರ ಮೀನುಗಾರಿಕೆ ನೀತಿ ಸಿದ್ಧ: ಸಚಿವ ಕೋಟ

11:26 PM Feb 01, 2020 | Sriram |

ಉಡುಪಿ: ಮೀನುಗಾರರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಲು ಸರಕಾರ ಸಮಗ್ರ ಮೀನುಗಾರಿಕೆ ನೀತಿ’ಯನ್ನು ಸಿದ್ಧಗೊಳಿಸಿದೆ. ಬಂದರು ಅಭಿವೃದ್ಧಿ, ಜೆಟ್ಟಿ ನಿರ್ಮಾಣ ಮೊದ ಲಾದ ಮೂಲ ಸೌಕರ್ಯ ಒದಗಿಸಲು ಕೇಂದ್ರ ಸರಕಾರವು 2 ಕೋ.ರೂ. ಅನುದಾನ ನೀಡಲು ಸಿದ್ಧವಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮಹಿಳಾ ಮೀನುಗಾರರ ಎಲ್ಲ ಸಮಸ್ಯೆಗಳಿಗೆ ಸರಕಾರ ಸ್ಪಂದಿಸಲಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಉಡುಪಿ ತಾ| ಮಹಿಳಾ ಹಸಿ ಮೀನು ಮಾರಾಟಗಾರರ ಸಂಘದ ದಶಮಾನೋತ್ಸವ ಸಂಭ್ರಮ ಪ್ರಯುಕ್ತ ಅಂಬಲಪಾಡಿಯ ಶ್ಯಾಮಿಲಿ ಸಭಾಂಗಣದಲ್ಲಿ ಶನಿವಾರ ನಡೆದ ಮಹಿಳಾ ಮೀನುಗಾರರ ಬೃಹತ್‌ ಸಮಾವೇಶ, ಹಿರಿಯ ಮಹಿಳಾ ಮೀನುಗಾರರಿಗೆ ಸಮ್ಮಾನ ಕಾರ್ಯಕ್ರಮದಲ್ಲಿ ಅವರುಮುಖ್ಯ ಅತಿಥಿಯಾಗಿ ಮಾತನಾಡಿದರು.

ಸಮಾರಂಭ ಉದ್ಘಾಟಿಸಿದ ಡಾ| ಜಿ. ಶಂಕರ್‌ ಮಾತನಾಡಿ, ಮತ್ಸ್ಯಕ್ಷಾಮ ತಡೆಗೆ ರಾಜ್ಯ ಸರಕಾರವು ಬಜೆಟ್‌ನಲ್ಲಿ 300 ಕೋ.ರೂ. ಪ್ಯಾಕೇಜ್‌ ಬಿಡುಗಡೆ ಗೊಳಿಸಬೇಕೆಂದು ಆಗ್ರಹಿಸಿದರು.

ಸಾಲಮನ್ನಾ ಮಾಡಲಿ
ಆರೋಗ್ಯ ನೆರವು ವಿತರಿಸಿದ ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ಮಹಿಳಾ ಮೀನುಗಾರರ 69 ಕೋ.ರೂ. ಸಾಲವನ್ನು ಸರಕಾರ ಮನ್ನಾ ಮಾಡುವುದರೊಂದಿಗೆ ಅವರ ಬದುಕಿಗೆ ಪೂರಕವಾದ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕು ಎಂದರು.

ಶೀಘ್ರ ಪರಿಹಾರಕ್ಕೆ ಕ್ರಮ
ಶಾಸಕ ರಘುಪತಿ ಭಟ್‌ ಮಾತನಾಡಿ, 15 ದಿನಗಳಲ್ಲಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿ ಮಹಿಳಾ ಮೀನುಗಾರರ ಸಾಲಮನ್ನಾ ಮಾಡಲು ಪ್ರಯತ್ನ ನಡೆಸುತ್ತೇನೆಂದರು.
ಉಡುಪಿ ತಾಲೂಕು ಮಹಿಳಾ ಹಸಿ ಮೀನು ಮಾರಾಟಗಾರರ ಸಂಘದ ಅಧ್ಯಕ್ಷೆ ಬೇಬಿ ಎಚ್‌. ಸಾಲ್ಯಾನ್‌ ಕೊಡವೂರು ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಡಾ| ಜಿ. ಶಂಕರ್‌  ಅವರನ್ನು ಸಮ್ಮಾನಿಸಲಾಯಿತು.

Advertisement

ಮೊಗವೀರ ಮುಖಂಡರಾದ ಜಯ ಸಿ. ಕೋಟ್ಯಾನ್‌, ಕೃಷ್ಣ ಜಿ. ಸುವರ್ಣ, ಸಾಧು ಸಾಲ್ಯಾನ್‌, ರತ್ನಾ ಮೊಗವೀರ, ಅಹಲ್ಯಾ ಕಾಂಚನ್‌, ಶಿವರಾಮ ಕೆ.ಎಂ., ಜಲಜಾ ಕೋಟ್ಯಾನ್‌, ಮೀನುಗಾರಿಕೆ ಉಪನಿರ್ದೇಶಕ ಗಣೇಶ್‌ ಉಪಸ್ಥಿತರಿದ್ದರು.

ದ.ಕ., ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್‌ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ ಪ್ರಸ್ತಾವನೆಗೈದರು. ದಯಾನಂದ ಶೆಟ್ಟಿ ದೆಂದೂರು, ಪ್ರಕಾಶ್‌ ಸುವರ್ಣ ಕಟಪಾಡಿ ನಿರೂಪಿಸಿದರು. ಲಕ್ಷ್ಮೀ ಆನಂದ್‌ ವರದಿ ವಾಚಿಸಿ, ವಂದಿಸಿದರು.

ಮೀನೂಟಕ್ಕೆ “ಮತ್ಸ್ಯ ದರ್ಶಿನಿ’
ಮೀನುಗಾರರ ಹಿತದೃಷ್ಟಿ ಮತ್ತು ಮೀನು ಪ್ರಿಯರಿಗೆ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಮೀನೂಟ ಒದಗಿಸಲು “ಮತ್ಸ್ಯ ದರ್ಶಿನಿ’ ಹೊಟೇಲ್‌ ತೆರೆದು ವೈವಿಧ್ಯಮಯ ಮೀನಿನ ಖಾದ್ಯಗಳನ್ನು 90ರಿಂದ 110 ರೂ.ಗಳಲ್ಲಿ ನೀಡಲಾಗುವುದು. ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಇದರ ನಿರ್ವಹಣ ಜವಾಬ್ದಾರಿಯನ್ನು ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್‌ಗೆ ನೀಡಲಾಗುವುದು ಎಂದು ಸಚಿವ ಕೋಟ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next