Advertisement

ಜನರ ನಿರೀಕ್ಷೆಯಂತೆ ಕೊಡಗಿನ ಸಮಗ್ರ ಅಭಿವೃದ್ಧಿ : ಶಾಸಕ ಬೋಪಯ್ಯ

12:34 AM Sep 16, 2019 | Sriram |

ಮಡಿಕೇರಿ: ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅ ಸ್ತಿತ್ವದಲ್ಲಿರುವುದರಿಂದ ಜಿಲ್ಲೆಯ ಜನರ ನಿರೀಕ್ಷೆಗಳು ದೊಡ್ಡದಾಗಿರುತ್ತವೆ. ಈ ನಿರೀಕ್ಷೆಗೆ ತಕ್ಕಂತೆ ಸರ್ಕಾರ ಕಾರ್ಯ ನಿರ್ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಪಕ್ಷದ ಕಾರ್ಯಕರ್ತರು ಕೂಡ ಸರ್ಕಾರದ ಯೋಜನೆಗಳಿಗೆ ಪೂರಕವಾಗಿ ಕಾರ್ಯ ನಿರ್ವಹಿಸಬೇಕೆಂದು ಕರೆ ನೀಡಿದ್ದಾರೆ.

Advertisement

ನಗರದ ಬಾಲಭವನದಲ್ಲಿ ನಡೆದ ಬಿಜೆಪಿ ಸಂಘಟನಾ ಪರ್ವ ಸದಸ್ಯತ್ವ ಅಭಿಯಾನದ ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕರು, ಅತಿವೃಷ್ಟಿ ಪೀಡಿತ ಕೊಡಗು ಜಿಲ್ಲೆಯ ಸಮಸ್ಯೆಗಳಿಗೆ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿದೆ ಎಂದರು.

ಮಳೆಹಾನಿ ಪರಿಹಾರಕ್ಕೆ ಸರ್ಕಾರದಿಂದ ಸಾಕಷ್ಟು ಅನುದಾನ ದೊರೆಯುತ್ತಿದೆ. ಮಳೆಗಾಲ ಕಳೆದ ನಂತರ ಅಭಿವೃದ್ಧಿ ಕಾರ್ಯಗಳು ಚುರುಕುಗೊಳ್ಳಲಿದೆ. ಜಿಲ್ಲೆಯ ರೈತರ ಹಾಗೂ ಬೆಳೆಗಾರರ ಸಾಲಮನ್ನಾ ಮಾಡಲು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಪ್ರವಾಹದಿಂದ ಹೊಳೆ, ನದಿಗಳಲ್ಲಿ ಹೂಳು ತುಂಬಿದೆ, ಗದ್ದೆಗಳಲ್ಲಿ ಮರಳು ಶೇಖರಣೆಗೊಂಡಿದೆ. ಇವುಗಳನ್ನು ತೆರವುಗೊಳಿಸಲು ಮುಖ್ಯಮಂತ್ರಿಗಳು ಅವಕಾಶ ನೀಡಿದ್ದಾರೆ. ಜಿಲ್ಲೆಯ ಅಭಿವೃದ್ಧಿಪರ ಯೋಜನೆಗಳಿಗೆ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿದೆ ಎಂದು ಕೆ.ಜಿ.ಬೋಪಯ್ಯ ಹೇಳಿದರು.

ಜನರ ನಿರೀಕ್ಷೆಯಂತೆ ಜಿಲ್ಲೆಯ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದ ಅವರು ಮುಂದಿನ ದಿನಗಳು ಬಿಜೆಪಿ ಪಕ್ಷಕ್ಕೆ ಸವಾಲಿನ ದಿನಗಳಾಗಿದ್ದು, ಕಾರ್ಯಕರ್ತರು ಸೂಕ್ಷ್ಮತೆಯನ್ನು ಅರಿತು ಶಿಸ್ತುಬದ್ಧವಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು. ಜಿಲ್ಲಾ ಬಿಜೆಪಿ ಚುನಾವಣಾ ಉಸ್ತುವಾರಿ ಗಣೇಶ್‌ ಕಾರ್ಣಿಕ್‌ ಮಾತನಾಡಿ ಸದಸ್ಯತ್ವ ಅಭಿಯಾನದ ಮೂಲಕ ಪಕ್ಷದ ಬಲವನ್ನು ಮತ್ತಷ್ಟು ಹೆಚ್ಚಿಸಬೇಕು, ಪಕ್ಷಕ್ಕಾಗಿ ಸ್ವಾಭಿಮಾನದಿಂದ ಕಾರ್ಯನಿರ್ವಹಿಸಬೇಕು ಎಂದರು.

ಸದಸ್ಯತ್ವ ಅಭಿಯಾನದ ದಿನವನ್ನು ವಿಸ್ತರಿಸಿ ಮೂರು ತಿಂಗಳ ಕಾಲಾವಕಾಶ ನೀಡಲಾಗಿದ್ದು, ಸದಸ್ಯರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತ 25 ಮಂದಿ ಸದಸ್ಯರನ್ನು ಸೇರಿಸುವ ಮೂಲಕ ದಾಖಲೆಯ ಸದಸ್ಯತ್ವ ನೋಂದಣಿಗೆ ಸಹಕರಿಸಬೇಕು ಎಂದು ಕರೆ ನೀಡಿದರು.

Advertisement

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತೆಯಂಡ ರವಿಕುಶಾಲಪ್ಪ ಮಾತನಾಡಿ, ಹಳ್ಳಿಯಿಂದ ದೆಹಲಿಯವರೆಗೆ ಬಿಜೆಪಿ ಪ್ರಬಲ ಪಕ್ಷವಾಗಿ ಹೊರಹೊಮ್ಮಲು ಕಾರ್ಯಕರ್ತರ ಪರಿಶ್ರಮವೇ ಕಾರಣವೆಂದು ಅಭಿಪ್ರಾಯಪಟ್ಟರು.

ಗ್ರಾಮಾಂತರ ಮಟ್ಟದಲ್ಲಿ ಪಕ್ಷ ಪ್ರಬಲವಾದರೆ ರಾಷ್ಟ್ರಮಟ್ಟದಲ್ಲಿ ಶಕ್ತಿಶಾಲಿಯಾಗಲು ಸಾಧ್ಯವಿರುವುದರಿಂದ ಕಾರ್ಯಕರ್ತರು ಗ್ರಾಮೀಣ ಸದಸ್ಯತ್ವದ ಕಡೆ ಹೆಚ್ಚಿನ ಗಮನ ನೀಡಬೇಕು ಎಂದು ಸಲಹೆ ನೀಡಿದರು.

ಜಿ.ಪಂ. ಅಧ್ಯಕ್ಷ ಬಿ.ಎ.ಹರೀಶ್‌, ಪ್ರಧಾನ ಕಾರ್ಯದರ್ಶಿ ನಾಪಂಡ ರವಿ ಕಾಳಪ್ಪ, ಮಡಿಕೇರಿ ತಾಲ್ಲೂಕು ಅಧ್ಯಕ್ಷ ತಳೂರು ಕಿಶೋರ್‌ ಕುಮಾರ್‌, ತಾ.ಪಂ ಸದಸ್ಯ ನಾಗೇಶ್‌ ಕುಂದಲ್ಪಾಡಿ, ಮಹಿಳಾ ಮೋರ್ಚಾದ ಅಧ್ಯಕ್ಷೆ ಯಮುನಾ ಚಂಗಪ್ಪ, ಪ್ರಮುಖರಾದ ಡೀನ್‌ ಬೋಪಣ್ಣ, ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next