ಬೆಂಗಳೂರು: ರಾಜ್ಯದಲ್ಲಿ ಎಂ. ಸ್ಯಾಂಡ್ ಮತ್ತು ಕಟ್ಟಡ ಕಲ್ಲಿನ ಉತ್ಪನ್ನಗಳನ್ನು ಬೇಡಿಕೆಗೆ ಅನುಗುಣವಾಗಿ ಪೂರೈಕೆ ಮಾಡಲು ನಿಯಮಗಳನ್ನು ಸರಳೀಕರಣಗೊಳಿಸುವ ಸಂಬಂಧ ಪರಿಶೀಲಿಸಿ ವರದಿ ನೀಡಲು ಸಚಿವ ಸಂಪುಟ ಉಪಸಮಿತಿ ರಚನೆ ಮಾಡಲಾಗಿದೆ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಕಾಂಗ್ರೆಸ್ ಸದಸ್ಯ ಎಸ್. ರವಿ ಪ್ರಶ್ನೆಗೆ ಗಣಿ ಮತ್ತು ಭೂವಿಜ್ಞಾನ ಸಚಿವರ ಪರವಾಗಿ ಉತ್ತರಿಸಿದ ಕೋಟ ಶ್ರೀನಿವಾಸ ಪೂಜಾರಿ, ನಿಯಮಗಳನ್ನು ಸರಳೀಕರಣಗೊಳಿಸುವ ಸಂಬಂಧ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವ ಆಚಾರ್ ಹಾಲಪ್ಪ ಬಸಪ್ಪ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.
ಈ ಸಮಿತಿ ಇಲಾಖಾಧಿಕಾರಿಗಳೊಂದಿಗೆ ಸಭೆ ನಡೆಸಿ ಎಂ ಸ್ಯಾಂಡ್ ಮತ್ತು ಕಟ್ಟಡ ಕಲ್ಲಿನ ಉತ್ಪಾದನೆ ಪೂರೈಕೆ ಹೆಚ್ಚಿಸಲು ಹಾಗೂ ಈಗಿರುವ ನಿಯಮಗಳನ್ನು ಸರಳೀಕರಣಗೊಳಿಸುವ ಶಿಫಾರಸು ವರದಿ ಸಲ್ಲಿಸಿದೆ ಎಂದರು.
ರಾಜ್ಯದಲ್ಲಿ ಸದ್ಯ 200 ದಶಲಕ್ಷ ಟನ್ ಎಂಸ್ಯಾಂಡ್ ಮತ್ತು ಕಟ್ಟಡ ಕಲ್ಲಿನ ಉತ್ಪನ್ನಗಳ ಬೇಡಿಕೆ ಇದ್ದು, ಅದರ ಮೂರು ಪಟ್ಟು ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು. ಇದರಿಂದಾಗಿ ಕಟ್ಟಡ ನಿರ್ಮಾಣಗಾರರಿಗೆ ಮತ್ತಷ್ಟು ಸಹಕಾರಿಯಾಗಲಿದೆ.
ರಾಜ್ಯದಲ್ಲಿ 2,700 ಕಟ್ಟಡ ಕಲ್ಲು ಗಣಿ ಗುತ್ತಿಗೆಗಳನ್ನು 1.02 ಲಕ್ಷ ಎಕರೆ ಪ್ರದೇಶದಲ್ಲಿ ಮಂಜೂರು ಮಾಡಿದ್ದು, ಅವುಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು .