Advertisement

ನಾಲ್ಕು ವಿಭಾಗಗಳಲ್ಲಿ ಸಂಪುಟ ಉಪ ಸಮಿತಿ ರಚನೆ: ದೇಶಪಾಂಡೆ

06:30 AM Nov 24, 2018 | Team Udayavani |

ಬೆಂಗಳೂರು:ರಾಜ್ಯದಲ್ಲಿ ಉಂಟಾಗಿರುವ ತೀವ್ರ ಬರಗಾಲ ನಿರ್ವಹಣೆಗೆ ಶೀಘ್ರವೇ ನಾಲ್ಕು ಕಂದಾಯ ವಿಭಾಗಗಳಿಗೆ ಸಚಿವ ಸಂಪುಟದ ಉಪ ಸಮಿತಿ ರಚನೆ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಹೇಳಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 100 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಈಗಿನಿಂದಲೇ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ, ಸಿಇಒ ಹಾಗೂ ಸಂಭಂಧಿಸಿದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರದ ಮೂಲಕ ಸೂಚಿಸಲಾಗಿದೆ. 

ರಾಜ್ಯದಲ್ಲಿ ದನ ಕರುಗಳಿಗೆ ಮೇವಿನ ಸಮಸ್ಯೆ ಉಂಟಾಗದಂತೆ ಹಾಗೂ ರಾಜ್ಯದಿಂದ ಹೊರ ರಾಜ್ಯಗಳಿಗೆ ಮೇವು ಸಾಗಾಟವಾಗದಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿಗಳ ಖಾತೆಯಲ್ಲಿ 220 ಕೋಟಿ ರೂ. ಹಣ ಇರುವುದರಿಂದ ಕುಡಿಯುವ ನೀರು ಹಾಗೂ ಬರ ಪರಿಹಾರ ಕಾಮಗಾರಿ ಕೈಗೊಳ್ಳಲು ಹಣಕಾಸಿನ ಕೊರತೆಯಿಲ್ಲ. ಈಗಾಗಲೇ ನೀರಿನ ಸಮಸ್ಯೆ ಎದುರಿಸುತ್ತಿರುವ 13 ಜಿಲ್ಲೆಗಳ 197 ಹಳ್ಳಿಗಳಿಗೆ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಮೂರು ತಿಂಗಳಲ್ಲಿ ಆ ಗ್ರಾಮಗಳಿಗೆ ಶಾಸ್ವತ ಕುಡಿಯುವ ನೀರು ಒದಗಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಕುಡಿಯುವ ನೀರು ಸರಬರಾಜು ಮಾಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಿಂದ ಬರ ಪೀಡಿತ ತಾಲೂಕುಗಳಿಗೆ ತಲಾ 50 ಲಕ್ಷ ರೂ.ಮಂಜೂರು ಮಾಡಲಾಗಿದೆ. ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಹೆಚ್ಚಿನ ಉದ್ಯೋಗ ಸೃಷ್ಠಿಸಲು 100 ರಿಂದ 150 ಕೆಲಸದ ದಿನಗಳನ್ನು ಹೆಚ್ಚಿಸಲಾಗಿದ್ದು, ಜನರು ಗುಳೆ ಹೋಗುವುದನ್ನು ತಡೆಯಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

Advertisement

ಪ್ರವಾಹಕ್ಕೆ ಕೇಂದ್ರದ ಪರಿಹಾರ
ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ಪ್ರವಾಹದಿಂದ ಉಂಟಾಗಿದ್ದ ಹಾನಿಗೆ 720.53 ಕೋಟಿ ರೂಪಾಯಿ ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿತ್ತು. ಅದರಂತೆ ಕೇಂದ್ರ ಸರ್ಕಾರ ಸ್ಪಂದಿಸಿ 541.21 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಈ ವರ್ಷ ಹಿಂಗಾರು ಹಂಗಾಮಿನಲ್ಲಿ 8 ಲಕ್ಷ ಹೆಕ್ಟೇರ್‌ ಬಿತ್ತನೆ ಪ್ರದೇಶ ಕಡಿಮೆಯಾಗಿದ್ದು, ಡಿಸೆಂಬರ್‌ ಅಂತ್ಯದವರೆಗೂ ಬಿತ್ತನೆ ಪ್ರದೇಶ ನೋಡಿಕೊಂಡು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು

ತಹಸೀಲ್ದಾರ್‌ಗಳ ನೇಮಕ
ಈಗಾಗಲೇ ತಹಸೀಲ್ದಾರ್‌ ಹುದ್ದೆಗೆ 108 ಜನರು ಆಯ್ಕೆಯಾಗಿ ತರಬೇತಿ ಪಡೆದುಕೊಂಡಿದ್ದಾರೆ. ಎಲ್ಲರಿಗೂ ಶೀಘ್ರವೇ ತಾಲೂಕು ಕಚೇರಿಗಳಿಗೆ ನೇಮಕ ಮಾಡಲಾಗುವುದು ಎಂದು ಹೇಳಿದರು.ಕಂದಾಯ ಇಲಾಖೆಯಲ್ಲಿ ಈಗಾಗಲೇ ಗ್ರಾಮ ಲೆಕ್ಕಿಗರನ್ನು ಜಿಲ್ಲಾಧಿಕಾರಿಗಳೇ ನೇರ ನೇಮಕ ಮಾಡಿಕೊಳ್ಳುತ್ತಿದ್ದಾರೆ. ಎಸ್‌ಡಿಎ ಹುದ್ದೆಗಳನ್ನೂ ಮೆರಿಟ್‌ ಆಧಾರದಲ್ಲಿ ಜಿಲ್ಲಾಧಿಕಾರಿಗಳೇ ನೇರ ನೇಮಕ ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ಪ್ರಯತ್ನ ನಡೆದಿದೆ ಎಂದು ಹೇಳಿದರು.

ಅವಧಿ ವಿಸ್ತರಣೆ
ಸರ್ಕಾರಿ ಜಮೀನಿನಲ್ಲಿ ಅನಧಿಕೃತ ಸಾಗುವಳಿ ಮಾಡುತ್ತಿರುವ ರೈತರು ನಮೂನೆ 57 ರಲ್ಲಿ ಅರ್ಜಿ ಸಲ್ಲಿಸುವ ದಿನಾಂಕವನ್ನು 2019 ರ ಮಾರ್ಚ್‌ 16 ರ ವರೆಗೂ ವಿಸ್ತರಿಸಲಾಗಿದೆ. 100 ರೂಪಾಯಿ ಅರ್ಜಿ ಶುಲ್ಕದೊಂದಿಗೆ ರೈತರು ಸಲ್ಲಿಸಿರುವ ಅರ್ಜಿಯನ್ನು ಗಣಕೀಕೃತಗೊಳಿಸಲು ಸೂಕ್ತ ತಂತ್ರಾಂಶ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಹೇಳಿದರು.

2.56 ಕಡತ ವಿಲೇವಾರಿ
ಕಂದಾಯ ಇಲಾಖೆಯಲ್ಲಿ ಬಾಕಿ ಉಳಿದಿದ್ದ ಕಡತಗಳ ವಿಲೇವಾರಿಗೆ ನಡೆಸಿದ ಸಪ್ತಾಹದಲ್ಲಿ 2.56 ಲಕ್ಷ ಕಡತ ವಿಲೇವಾರಿ ಮಾಡಲಾಗಿದೆ ಎಂದು ಸಚಿವ ದೇಶಪಾಂಡೆ ತಿಳಿಸಿದರು. ನವೆಂಬರ್‌ 12 ರಿಂದ 18 ರವರೆಗೂ ನಡೆದ ಕಡತ ವಿಲೇವಾರಿ ಸಪ್ತಾಹದಲ್ಲಿ ರಾಜ್ಯ ಮಟ್ಟದಲ್ಲಿ ಇಲಾಖೆಯ ಎಲ್ಲ ಅಧಿಕಾರಿಗಳು ಪಾಲ್ಗೊಂಡು ಭಾನುವಾರವೂ ಕೆಲಸ ನಿರ್ವಹಿಸಿದ್ದಾರೆ. ಇಲಾಖೆಯಲ್ಲಿ ಅನಗತ್ಯವಾಗಿ ಕಡತಗಳನ್ನು ಇಟ್ಟುಕೊಳ್ಳುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕಂದಾಯ ಇಲಾಖೆಯಲ್ಲಿ ಇನ್ನೂ 7.97 ಲಕ್ಷ ಕಡತಗಳು ಬಾಕಿ ಇವೆ ಎಂದು ಹೇಳಿದರು.

ರಾಜ್ಯದಲ್ಲಿ ಸರ್ಕಾರ ಸತ್ತಿದೆ ಎನ್ನುವುದು ಸರಿಯಲ್ಲ. ಬಿಜೆಪಿಯವರು ಆ ರೀತಿಯ ಆರೋಪ ಮಾಡಬಾರದು. ಸರ್ಕಾರ ಸಾಯುವುದಿಲ್ಲ. ನಿಷ್ಕ್ರಿಯವಾಗಿದೆ ಎಂದು ಹೇಳಬಹುದು. ಅವರಿಗೆ ಸಮಾಧಾನವಾಗುವಂತೆ ಕೆಲಸ ಮಾಡುತ್ತೇವೆ.
– ಆರ್‌.ವಿ. ದೇಶಪಾಂಡೆ. ಕಂದಾಯ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next