Advertisement

ಸ್ಮಾರ್ಟ್‌ಸಿಟಿ: ಜನಾಭಿಪ್ರಾಯ ಪಡೆಯಲು ಸೂಚನೆ

10:01 AM Jan 06, 2020 | Team Udayavani |

ಶಿವಮೊಗ್ಗ: ಸ್ಮಾರ್ಟ್‌ ಸಿಟಿ ಯೋಜನೆಯ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಪೂರ್ವದಲ್ಲಿ ಸ್ಥಳೀಯ ಜನರ ಅಭಿಪ್ರಾಯಗಳನ್ನು ಸಹ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಭಾನುವಾರ ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಸಚಿವರು ನೆಹರೂ ಕ್ರೀಡಾಂಗಣ, ಜಯನಗರ ಕನ್ಸರ್ವೆನ್ಸಿ ಕಾಮಗಾರಿ, ರಾಜೇಂದ್ರ ನಗರ ಚಾನೆಲ್‌ ಬಳಿಯ ಕಾಮಗಾರಿ, ವಿನಾಯಕ ಪಾರ್ಕ್‌ ಬಸವನಗುಡಿ ಮತ್ತು ನಗರ ಕೇಂದ್ರ ಗ್ರಂಥಾಲಯಕ್ಕೆ ಭೇಟಿ ನೀಡಿ ಡಿಜಿಟಲ್‌ ಲೈಬ್ರರಿ ಯೋಜನೆ ಅನುಷ್ಠಾನದ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಕಾಮಗಾರಿ ಅನುಷ್ಠಾನ ಪೂರ್ವದಲ್ಲಿ ಮತ್ತು ಅನುಷ್ಠಾನದ ವೇಳೆ ಸ್ಥಳೀಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರೊಂದಿಗೆ ಚರ್ಚಿಸಿ ಯೋಜನೆ ರೂಪಿಸಬೇಕು. ಸ್ಥಳೀಯ ಅಭಿಪ್ರಾಯಗಳನ್ನು ಸ್ವೀಕರಿಸಿದ ಬಳಿಕ ಕಾಮಗಾರಿ ಆರಂಭಿಸಿದರೆ ಜನರಿಗೆ ಉಪಯೋಗಕರವಾದ ರೀತಿಯಲ್ಲಿ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಿದೆ. ಆರಂಭದಲ್ಲಿ ಕುಂಟುತ್ತಾ ಸಾಗುತ್ತಿದ್ದ ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿಗಳು ಕಳೆದ 6 ತಿಂಗಳಿನಿಂದ ಚುರುಕಿನಿಂದ ನಡೆಯುತ್ತಿದೆ ಎಂದು ಅವರು ಈ ಸಂದರ್ಭದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಎಲ್ಲಾ ಕಾಮಗಾರಿಗಳನ್ನು ನಿಗದಿತ ಅವಧಿಯ ಒಳಗಾಗಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ. ಎಲ್ಲಾ ಟೆಂಡರ್‌ ಪ್ರಕ್ರಿಯೆ ಆದಷ್ಟು ಬೇಗನೆ ಪೂರ್ಣಗೊಳಿಸಿ ಕಾರ್ಯಾದೇಶ ನೀಡಲು ತಿಳಿಸಲಾಗಿದೆ. ನಗರದ ಮಧ್ಯ ಭಾಗದಲ್ಲಿ ಹರಿದು ಹೋಗಿರುವ ಚಾನೆಲ್‌ಗ‌ಳನ್ನು ಸ್ವತ್ಛಗೊಳಿಸುವ ಕುರಿತು ಜಿಲ್ಲಾಧಿಕಾರಿ ಅವರು ಮೂರು ದಿನಗಳ ಒಳಗಾಗಿ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳ ಸಭೆ ಕರೆದು ಕ್ರಮ ಕೈಗೊಳ್ಳುವರು. ಚಾನೆಲ್‌ನಲ್ಲಿ ತಿಳಿಯಾದ ನೀರು ಸದಾ ಕಾಲ ನಿಲ್ಲುವಂತೆ ಮಾಡಲು ಬ್ಯಾರೇಜ್‌ ನಿರ್ಮಾಣ ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

ಸ್ಮಾರ್ಟ್‌ ಸಿಟಿ ಯೋಜನೆಯಡಿ ನಗರದಲ್ಲಿ ಸುಮಾರು 20 ಸಾವಿರ ಎಲ್‌ಇಡಿ ದೀಪಗಳನ್ನು ಅಳವಡಿಸಲಾಗುತ್ತಿದ್ದು, ಟೆಂಡರ್‌ ಹಂತದಲ್ಲಿದೆ. ಇದರ ಸರಿಯಾದ ನಿರ್ವಹಣೆಗೂ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಅಹವಾಲು ಸಲ್ಲಿಕೆ: ಸಚಿವರು ನೆಹರು ಕ್ರೀಡಾಂಗಣದಲ್ಲಿ ಕಾಮಗಾರಿ ಪರಿಶೀಲನೆಗೆ ತೆರಳಿದ ಸಂದರ್ಭದಲ್ಲಿ ನಾಗರಿಕರು ಹಲವು ಬೇಡಿಕೆಗಳನ್ನು ಮುಂದಿರಿಸಿದರು. ಕ್ರೀಡಾಂಗಣದಲ್ಲಿ ಸರಿಯಾದ ಶೌಚಾಲಯ ವ್ಯವಸ್ಥೆ ಮಾಡಬೇಕು. ಬೆಳಕಿನ ವ್ಯವಸ್ಥೆ, ಅಗತ್ಯವಿರುವ ಎಲ್ಲಾ ಕಡೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಕ್ರೀಡಾಂಗಣವನ್ನು ಸುಸ್ಥಿತಿಯಲ್ಲಿರಿಸಲು ಕ್ರಮ, ಪಾರ್ಕಿಂಗ್‌ ಪ್ರತ್ಯೇಕ ವ್ಯವಸ್ಥೆ ಸೇರಿದಂತೆ ಹಲವು ಬೇಡಿಕೆಗಳನ್ನು ಸಚಿವರ ಮುಂದಿರಿಸಿದರು.

ಕ್ರೀಡಾಳುಗಳೊಂದಿಗೆ ಸಮಾಲೋಚನೆ ನಡೆಸಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಂತೆ ಸಚಿವರು ಸೂಚನೆ ನೀಡಿದರು.

ಡಿಜಿಟಲ್‌ ಲೈಬ್ರರಿ ಉತ್ತಮ ಯೋಜನೆಯಾಗಿದ್ದು, ಶಾಲಾ- ಕಾಲೇಜು ಮಕ್ಕಳಿಗೆ ಅತ್ಯಂತ ಉಪಯುಕ್ತವಾಗಿದೆ. ಶಿಕ್ಷಣ ಸಚಿವರಿಂದ ಈ ಯೋಜನೆಯನ್ನು ಅಧಿಕೃತವಾಗಿ ಉದ್ಘಾಟಿಸಲು ಸಮಯ ನಿಗದಿಪಡಿಸುವಂತೆ ಸಚಿವರು ತಿಳಿಸಿದರು.

ಇದಕ್ಕೂ ಮೊದಲು ಸ್ಮಾರ್ಟ್‌ ಸಿಟಿ ಕಚೇರಿಯಲ್ಲಿ ಆಯುಕ್ತ ಚಿದಾನಂದ ವಟಾರೆ ಅವರು ಯೋಜನೆ ಅನುಷ್ಠಾನದ ಬಗ್ಗೆ ಸಚಿವರಿಗೆ ಮಾಹಿತಿ ಒದಗಿಸಿದರು. ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌, ಉಪ ಮೇಯರ್‌ ಚನ್ನಬಸಪ್ಪ, ಯೋಜನಾ ನಿರ್ದೇಶಕ ಡಾ| ನಾಗೇಂದ್ರ ಹೊನ್ನಳ್ಳಿ ಸೇರಿದಂತೆ ಅಧಿಕಾರಿಗಳು, ಜನಪ್ರತಿನಿಧಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next