ಬೆಂಗಳೂರು: ಏರೋ ಇಂಡಿಯಾ 2021 ಹಿನ್ನೆಲೆ ಜನವರಿ ಅಂತ್ಯಕ್ಕೆ ಣಿಸಂದ್ರ ಮುಖ್ಯರಸ್ತೆಯ ವೈಟ್ ಟಾಪಿಂಗ್ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ ಸೂಚನೆ ನೀಡಿದರು.
ಪಾಲಿಕೆ ವ್ಯಾಪ್ತಿಯ ಥಣಿಸಂದ್ರ ಮುಖ್ಯ ರಸ್ತೆಯ ನಾಗವಾರ ಜಂಕ್ಷನ್‌ನಿಂದ ಬಾಗಲೂರು ಕ್ರಾಸ್‌ವರೆಗೆ ನಡೆಯುತ್ತಿರುವ ವೈಟ್ ಟಾಪಿಂಗ್ ಕಾಮಗಾರಿಯನ್ನು ಮಂಗಳವಾರ ತಪಾಸಣೆ ನಡೆಸಿದ ಬಳಿಕ ಮಾತನಾಡಿ ದರು. ಫೆಬ್ರವರಿ ಮೊದಲ ವಾರದಲ್ಲಿ ಏರೋಇಂಡಿಯಾ (ಏರ್ ಶೋ) ನಿಗದಿಯಾಗಿದೆ.ಈವೇಳೆ ಥಣಿಸಂದ್ರ ಮುಖ್ಯರಸ್ತೆಯನ್ನು ಅಧಿಕ ವಾಹನಗಳು ಬಳಕೆ ಮಾಡುತ್ತವೆ. ಹೀಗಾಗಿ, ಜನವರಿ 2021 ಅಂತ್ಯದೊಳಗೆ ಹೆಚ್ಚು ಸಿಬ್ಬಂದಿ ಹಾಗೂ ಅವಶ್ಯಕ ಯಂತ್ರೋಪ ಕರಣಗಳನ್ನು ಬಳಕೆ ಮಾಡಿಕೊಂಡು ವೈಟ್ ಟಾಪಿಂಗ್ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದರು.
ಥಣಿಸಂದ್ರ ಮುಖ್ಯರಸ್ತೆಯಲ್ಲಿ 110 ಹಳ್ಳಿಗಳಿಗೆ ಕುಡಿಯುವ ನೀರು ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ರಸ್ತೆ ಬದಿ 1,400 ಮಿ.ಮೀ ಗಾತ್ರದ ಪೈಪ್ ಲೈನ್ ಅಳವಡಿಸುವ ಕಾಮಗಾರಿ ಬಹುತೇಕ ಮುಗಿದಿದ್ದು, ಬಾಕಿ ಇರುವ ಪೈಪ್‌ಲೈನ್ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಲು ಜಲಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ರಾಷ್ಟ್ರೋತ್ಥಾನ ಜಂಕ್ಷನ್ ಬಳಿ ಬೆಸ್ಕಾಂನಿಂದ 11 ಕೆ.ವಿ ಅಳವಡಿಸುವ ಕಾರ್ಯ ಬಾಕಿಯಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ ಹಿನ್ನೆಲೆ ಬೆಸ್ಕಾಂ ಅಧಿಕಾರಿಗಳ ಜತೆ ದೂರವಾಣಿ ಸಂಭಾಷಣೆ ನಡೆಸಿ ಕೆಲಸ ಮುಗಿಸಲು ಆದೇಶಿಸಿದರು.
ವೈಟ್ ಟಾಪಿಂಗ್ ಕಾಮಗಾರಿ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ಕಲ್ಪಿಸಿರುವ ಬದಲಿ ರಸ್ತೆಯಲ್ಲಿ ಗುಂಡಿಗಳು ಹೆಚ್ಚಿವೆ. ಜತೆಗೆ ಜಲಮಂಡಳಿ ಕಾಮಗಾರಿ ನಡೆಸಿರುವ ಕಡೆ ರಸ್ತೆ ಹಾಳಾಗಿದೆ.ಆಪ್ರದೇಶದಲ್ಲಿ ತಾತ್ಕಾಲಿಕವಾಗಿ ಡಾಂಬರೀಕರಣ ಮಾಡಿ ವಾಹನ ಸವಾರರಿಗೆ ಸಮಸ್ಯೆ ಆಗದಂತೆ ಕೆಲಸ ಮಾಡಬೇಕು. ಜತೆಗೆ ಪಕ್ಕದ ಸರ್ವೀಸ್ ರಸ್ತೆ, ಪಾದಚಾರಿ ಮಾರ್ಗಗಳು ಸರಿಯಾಗಿರುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಹೇಳಿದರು. ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್ ರಮೇಶ್ ಮಾತನಾಡಿ, ಒಟ್ಟು 9.5 ಕಿ.ಮೀ ಉದ್ದದ ಥಣಿಸಂದ್ರ ಮುಖ್ಯ ರಸ್ತೆಯಲ್ಲಿ ಒಂದು ಮಾರ್ಗದಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಂಡಿದ್ದು, 5 ದಿನದಲ್ಲಿ 1.2 ಕಿ.ಮೀ ರಸ್ತೆ ಕಾಮಗಾರಿ ಮಾಡಲಾಗಿದೆ. ಜನವರಿ ಅಂತ್ಯದೊಳಗಾಗಿ ಸಂಪೂರ್ಣ ಕಾಮಗಾರಿ ಪೂರ್ಣಗೊಳಿಸುವ ಯೋಜನೆ ರೂಪಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು
20 ದಿನಗಳಲ್ಲಿ ಮೇಲ್ಸೇತುವೆ ಸಂಚಾರ ಮುಕ್ತಕ್ಕೆ ಸೂಚನೆ : ಥಣಿಸಂದ್ರ ಮುಖ್ಯ ರಸ್ತೆಯಲ್ಲಿರುವ ರಾಷ್ಟ್ರೋತ್ಥಾನ ಜಂಕ್ಷನ್ ಬಳಿ ನಿರ್ಮಿಸುತ್ತಿರುವ ಮೇಲ್ಸೇತುವೆಯ ಡಾಂಬರೀಕರಣ, ಕೆಲಸಗಳನ್ನು 20 ದಿನಗಳಲ್ಲಿ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು.ಮೇಲು ಸೇತುವೆಯಎರಡೂ ಬದಿಯ ಸರ್ವೀಸ್ ರಸ್ತೆಗಳ ಅಭಿವೃದ್ಧಿಯನ್ನು ಶೀಘ್ರವಾಗಿ ಕೈಗೆತ್ತಿಕೊಂಡು ಪೂರ್ಣಗೊಳಿಸಲು ಆಡಳಿತಾಧಿಕಾರಿಗಳು ಸೂಚನೆ ನೀಡಿದರು.