Advertisement

ಮಾರ್ಚ್‌ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಿ

01:00 PM Jan 15, 2020 | Team Udayavani |

ಮುಧೋಳ: ನಗರ ಅಭಿವೃದ್ಧಿಗಾಗಿ ಹಮ್ಮಿಕೊಂಡಿರುವ ಕಾಮಗಾರಿಯನ್ನು ಮಾರ್ಚ್‌ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸೂಚಿಸಿದರು.

Advertisement

ನಗರಸಭೆ ಕಾರ್ಯಾಲಯದಲ್ಲಿ ಮಂಗಳವಾರ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, 2019-20ನೇ ಸಾಲಿನಲ್ಲಿ ವಿಶೇಷ ಅನುದಾನದಡಿ 4ಕೋಟಿ ರೂ. ನೀಡಲಾಗಿದೆ. 24 ಕಾಮಗಾರಿಗೆ ಟೆಂಡರ್‌ ಪ್ರಕ್ರಿಯೆ ಹಂತದಲ್ಲಿದ್ದು, ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡ ವಾರದೊಳಗೆ ಕಾಮಗಾರಿ ಆರಂಭಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. ನಗರದಲ್ಲಿ ನಡೆಯುವ ಕಾಮಗಾರಿ ಬಗ್ಗೆ ಸಾರ್ವಜನಿಕರಿಗೆ ತಿಳಿಸಲು ಕಾಮಗಾರಿ ಮಾಹಿತಿಯನ್ನು ಸಾಮಾಜಿಕ ಜಾಲತಾಣಕ್ಕೆ ಅಪ್‌ ಮಾಡುವಂತೆ ಸೂಚಿಸಿದರು.

ನಗರದಲ್ಲಿ ಪರಿಶಿಷ್ಟ ಪಂಗಡ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿಲ್ಲದ ಕಾರಣ ನೂತನವಾಗಿ ಮಂಜೂರಾಗಿರುವ ಸ್ಮಶಾನವನ್ನು ಎಸ್‌ಸಿಪಿ ಯೋಜನೆಯಡಿ ಪರಿಶಿಷ್ಟ ಜಾತಿಯವರಿಗೆ ಅನುಕೂಲವಾಗುವಂತೆ ನಿರ್ಮಿಸಿ ಎಂದು ಹೇಳಿದರು.

ಪರಿಶಿಷ್ಟ ಜಾತಿ ಹಾಗೂ ಯಾವುದೇ ಭಾಗದಲ್ಲಿ ಸಿಸಿ ರಸ್ತೆ ನಿರ್ಮಾಣದ ವೇಳೆ ಕೇವಲ ಸಾರ್ವಜನಿಕರ ಮನೆಯೆದುರು ಮಾತ್ರ ಸಿಸಿ ರಸ್ತೆ ನಿರ್ಮಿಸದೆ. ಪ್ರಮುಖ ರಸ್ತೆಯನ್ನು ಕೂಡುವಂತೆ ಕಾಮಗಾರಿ ನಿರ್ವಹಿಸಿ. ಇದರಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು. ಪ್ರವಾಹದಿಂದ ಒಟ್ಟು 223 ಮನೆಗಳು ಹಾನಿಗೊಳಗಾಗಿದ್ದು, ಅವುಗಳ ಪೈಕಿ 93 ಮನೆಗಳಿಗೆ5 ಲಕ್ಷ, 130 ಮನೆಗಳಿಗೆ 50 ಸಾವಿರ ಹಾಗೂ ಎಲ್ಲ ಸಂತ್ರಸ್ತರಿಗೆ 10 ಸಾವಿರ ಪರಿಹಾರ ವಿತರಿಸಲಾಗಿದೆ ಎಂದು ಹೇಳಿದರು.

21 ಕೋಟಿ ನಗರೋತ್ಥಾನಅನುದಾನ ಹಾಗೂ 9 ಕೋಟಿ ಸರ್ಕಾರ ಅನುದಾನದ ನೆರವಿನಿಂದ ಶಾಶ್ವತ ಕುಡಿಯುವ ನೀರಿನ ಯೋಜನೆ ಹಾಕಿಕೊಳ್ಳಲಾಗಿದೆ. ರಸ್ತೆ ಡಾಂಬರೀಕರಣ, ಸುಧಾರಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕಾಮಗಾರಿ ಯಶಸ್ಸಿಗೆ ಸಾರ್ವಜನಿಕರ ಸಹಕಾರ ಅವಶ್ಯ ಎಂದು ಹೇಳಿದರು.

Advertisement

ಕಾರ್ಪೋರೇಟ್‌ ಬಸ್‌ ನಿಲ್ದಾಣ: ನಗರ ಬಸ್‌ ನಿಲ್ದಾಣ ಉದ್ಘಾಟನೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಕಾರಜೋಳ ಅಂದಾಜು 5 ಕೋಟಿ ರೂ. ವೆಚ್ಚದಲ್ಲಿ ಕಾರ್ಪೋರೇಟ್‌ ಬಸ್‌ ನಿಲ್ದಾಣ ನಿರ್ಮಿಸಿವ ಯೋಜನೆ ಇದ್ದು, ವಿಧಾನಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗುವುದು ಎಂದು ಹೇಳಿದರು.

ಅಧಿಕಾರಿಗಳು ಪ್ರಾಮಾಣಿಕತೆ, ದಕ್ಷತೆಯಿಂದ ಕಾರ್ಯ ನಿರ್ವಹಿಸುವುದರೊಂದಿಗೆ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ಸೂಚಿಸಿದರು. ನಗರಸಭೆ ಪೌರಾಯುಕ್ತ ಸುನೀಲ ಪಾಟೀಲ ಮಾತನಾಡಿ, ಪೌರಕಾರ್ಮಿಕರ ಮಕ್ಕಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ನಗರಸಭೆ ವತಿಯಿಂದ ಶೇ.50 ಅನುದಾನ ನೀಡಲಾಗುವುದು ಎಂದರು.

ಬಿಜೆಪಿ ನಗರ ಘಟಕ ಅಧ್ಯಕ್ಷ ಗುರುರಾಜ ಕಟ್ಟಿ, ಗ್ರಾಮೀಣ ಘಟಕ ಅಧ್ಯಕ್ಷ ಕೆ.ಆರ್‌. ಮಾಚಪ್ಪನವರ, ಪ್ರಧಾನ ಕಾರ್ಯದರ್ಶಿ ಕುಮಾರ ಹುಲಕುಂದ ಸೇರಿದಂತೆ ನಗರಸಭೆ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next