ಚನ್ನರಾಯಪಟ್ಟಣ: ನುಗ್ಗೇಹಳ್ಳಿ ಏತನೀರಾವರಿ ಕಾಮಗಾರಿ ಪ್ರಾರಂಭವಾಗಿ 6 ವರ್ಷ ಕಳೆದರೂ ತಾಲೂಕಿನ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಏತನೀರಾವರಿ ಹೋರಾಟ ಸಮಿತಿ ಮುಖಂಡರು ದೂರಿದರು.
ತಾಲೂಕಿನ ಜಂಬೂರು ಗ್ರಾಮದಲ್ಲಿ ನೀರಾವರಿ ಇಲಾಖೆ ಸಂಸದೀಯ ಕಾರ್ಯದರ್ಶಿ ಎಂ.ಎ. ಗೋಪಾಲಸ್ವಾಮಿ ಅವರನ್ನು ಭೇಟಿ ಮಾಡಿದ ಹೋರಾಟ ಸಮಿತಿಯವರು ಆದಷ್ಟು ಬೇಗ ಕಾಮಗಾರಿ ಮುಕ್ತಾಯ ಮಾಡಿ ಪ್ರಸಕ್ತ ವರ್ಷದಲ್ಲಿ ನುಗ್ಗೇಹಳ್ಳಿ ಭಾಗದ 19 ಕೆರೆಗಳಿಗೆ ನೀರು ಹರಿಸುವಂತೆ ಮನವಿ ಮಾಡಿದರು.
ರೈತರಿಗೆ ಪರಿಹಾರ ನೀಡಿ: ಏತನೀರಾವರಿಗೆ ಬಾಗೂರು ನಾಲೆಯಿಂದ ಪೈಪ್‌ಲೈನ್ ಅಳವಡಿಸಲು ಕೃಷಿ ಭೂಮಿ ಸ್ವಾಧೀನ ಮಾಡಿಕೊಂಡಿದ್ದು ಜಿಲ್ಲಾಡಳಿತ ಪರಿಹಾರ ನೀಡದ ಹಿನ್ನೆಲೆಯಲ್ಲಿ ರೈತರು ಕಾಮಗಾರಿ ಮಾಡಲು ಅಡ್ಡಿ ಪಡಿಸುತ್ತಿದ್ದಾರೆ, ಕ್ಷೇತ್ರದ ಜನಪ್ರತಿನಿಧಿ ಗಳು ಮಧ್ಯ ಪ್ರವೇಶ ಮಾಡುವ ಮೂಲಕ ರೈತರ ಮನವೊಲಿಸಿ ಕಾಮಗಾರಿಯನ್ನು ಆದಷ್ಟು ಬೇಗ ಮುಕ್ತಾಯ ಮಾಡಲು ಮುತುವರ್ಜಿ ವಹಿಸಬೇಕು ಎಂದು ತಿಳಿಸಿದರು.
ಧರಣಿ – ಎಚ್ಚರಿಕೆ: 6 ವರ್ಷದಿಂದ 6 ಬಾರಿ ಕಾಮಗಾರಿಗೆ ಪೂಜೆ ಮಾಡಲಾಗುತ್ತಿದೆ ಹೊರತು ಕಾಮಗಾರಿ ಮುಗಿಸಲು ಜನಪ್ರತಿನಿಧಿಗಳು ಮುಂದಾ ಗುತ್ತಿಲ್ಲ, ಒಂದು ವೇಳೆ ಈ ಭಾಗದ ಜನರು ಧರಣಿ ಕುಳಿದರೆ ನಾವು ರಾಜಕೀಯ ಮಾಡದೇ ಜನರೊಂದಿಗೆ ಧರಣಿಗೆ ಇಳಿಯಬೇಕಾಗುತ್ತಿದೆ ಎಂದು ನುಗ್ಗೇಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗೌಡಾಕಿಮಂಜು ತಿಳಿಸಿದರು.
ಹೋರಾಟ ಸಮಿತಿ ಲಕ್ಷ್ಮಣ ಮಾತನಾಡಿ ಈಗಾ ಗಲೇ ಹೋಬಳಿಯಲ್ಲಿ ತೀವ್ರ ಬರ ಪರಿಸ್ಥಿತಿಯಿದೆ. ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ನಾವು ಮೃತಪಟ್ಟ ಮೇಲೆ ಕೆರೆಗಳಿಗೆ ನೀರು ಹರಿಸುತ್ತೀರಾ ತೆಂಗಿನ ಮರಗಳು ಹಾಳಾಗುತ್ತಿವೆ. ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ಮಕ್ಕಳು ದುಡಿಯಲು ನಗರಗಳಿಗೆ ಗುಳೆ ಹೋಗುತ್ತಿದ್ದಾರೆ ಎಂದು ಸಭೆಯ ಗಮನಕ್ಕೆ ತಂದರು.
ಈ ವೇಳೆ ನೀರಾವರಿ ಎಸ್‌ಎಲ್ಒ ಶ್ರೀನಿವಾಸ್ ಅವರೊಂದಿಗೆ ಗೋಪಾಲಸ್ವಾಮಿ ಅವರು ದೂರವಾಣಿ ಮೂಲಕ ಮಾತನಾಡಿದಾಗ ಈಗಾಗಲೇ ಯೋಜನೆಗೆ 40 ಲಕ್ಷ ರೂ. ಮೀಸಲಿಡಲಾಗಿದೆ. ಯಾವ ರೈತರ ಕೃಷಿ ಭೂಮಿಗೆ ಪರಿಹಾರ ನೀಡಬೇಕೋ ಅವರ ಪಹಣಿ ಯನ್ನು ಇಲಾಖೆಗೆ ನೀಡಿದ 24 ತಾಸಿನಲ್ಲಿ ರೈತರ ಖಾತೆಗೆ ನೇರವಾಗಿ ಪರಿಹಾರದ ಹಣ ಜಮಾ ಮಾಡಲಾಗುವುದು ಎಂದರು.
ನುಗ್ಗೇಹಳ್ಳಿ ಏತನೀರಾವರಿ ಹೋರಾಟ ಸಮಿತಿ ಮುಖಂಡರಾದ ಶಂಕರ್, ಕಿರಣ, ಶೇಖರ್, ಮಹೇಶ, ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗಣ್ಣ ಸದಸ್ಯರಾದ ಗೌತಮ, ಆಲಿ ಮುಂತಾದವರು ಉಪಸ್ಥಿತರಿದ್ದರು.